ಪಂಚತಾರಾ ಹೊಟೇಲ್‍ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.14-ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಫೆ.16 ರಂದು 6 ಗಂಟೆಗೆ ನಗರದ ಪಂಚತಾರಾ ಹೊಟೇಲ್‍ನಲ್ಲಿ ಕರೆಯಲಾಗಿದೆ.  ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ವಿಧಾನಸಭೆಯಲ್ಲಿ ಯಾವ ರೀತಿಯ ರಣತಂತ್ರಗಳನ್ನು ಕೈಗೆತ್ತಿಕೊಳ್ಳಬೇಕು ಎಂಬ ಮಹತ್ವದ ಚರ್ಚೆ ನಡೆಯಲಿದೆ.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡದಿರುವುದು, ಮಂಗಳೂರಿನ ಗೋಲಿಬಾರ್ ಘಟನೆ, ಬೀದರ್ ಶಾಲೆಯೊಂದರ ಮೇಲೆ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿ ಶಿಕ್ಷಕಿ ಹಾಗೂ ವಿದ್ಯಾರ್ಥಿನಿ ತಾಯಿಯನ್ನು ಬಂ„ಸಿರುವುದು, ಸಚಿವ ಸಂಪುಟದಲ್ಲಾಗಿರುವ ಗೊಂದಲಗಳು, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿ ಪಡಿಸಿರುವುದು, ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಒದಗಿಸದಿರುವುದು, ಸಚಿವ ಆರ್.ಅಶೋಕ್ ಅವರ ಪುತ್ರನ ಅಪಘಾತ ಪ್ರಕರಣ, ರಾಜ್ಯ ಬಜೆಟ್‍ನಲ್ಲಿ ನಿಗದಿಪಡಿಸಿದ ಅನುದಾನ ಸರಿಯಾಗಿ ಬಳಸದಿರುವುದು, ಸಂಪನ್ಮೂಲ ಕ್ರೋಢೀಕರಣದಲ್ಲಾಗಿರುವ ಹಿನ್ನಡೆ ಸೇರಿದಂತೆ ಹಲವಾರು ವಿಷಯ ಕೈಗೆತ್ತಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದ್ದು, ಈ ಬಗ್ಗೆ ವಿಷಯಾಧಾರಿತವಾಗಿ ಚರ್ಚೆ ಮಾಡಲು ಪ್ರತಿಯೊಬ್ಬ ನಾಯಕರಿಗೂ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.

ಎಲ್ಲಾ ಶಾಸಕರು ಬಾಯಿಗೆ ಬಂದಂತೆ ಮಾತನಾಡುವ ಬದಲು, ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನಿಟ್ಟುಕೊಂಡು ಚರ್ಚೆಯಲ್ಲಿ ಭಾಗವಹಿಸಬೇಕು, ಸರ್ಕಾರದ ವೈ-ಲ್ಯ ಕುರಿತು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಬೆಳಕು ಚೆಲ್ಲಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ತಯಾರಿ ಆರಂಭಿಸಿದೆ. ರಾಜ್ಯಪಾಲರು ಜಂಟಿ ಅಧಿವೇಶನವನ್ನು ದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಗಲಾಟೆ ಮಾಡಿದರೆ ಸದನದಿಂದ ಅಮಾನತುಪಡಿಸುವುದಾಗಿ ವಿಧಾನಪರಿಷತ್‍ನ ಕಾರ್ಯದರ್ಶಿಯವರು ಹೊರಡಿಸಿರುವ ಸುತ್ತೋಲೆಯು ವಿವಾದಕ್ಕೀಡಾಗಿದೆ. ಇದನ್ನು ಪ್ರತಿಪಕ್ಷ ಕಾಂಗ್ರೆಸ್ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ.

ವಿಧಾನಸಭೆ ಅಧಿವೇಶನ ಸಮೀಪಿಸುತ್ತಿದ್ದರೂ ಕಾಂಗ್ರೆಸ್‍ನಲ್ಲಿ ವಿಪಕ್ಷ ನಾಯಕ ಅಧ್ಯಕ್ಷ ಸ್ಥಾನದ ಗೊಂದಲವನ್ನು ಹೈಕಮಾಂಡ್ ಬಗೆಹರಿಸಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಚುನಾವಣೆ ಸೋಲಿಗೆ ಬೇಸರಗೊಂಡು ಶಾಸಕಾಂಗ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಈ ರಾಜೀನಾಮೆಯನ್ನು ಹೈಕಮಾಂಡ್ ಅಂಗೀಕರಿಸಿದೆಯೇ ಇಲ್ಲವೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರೆಸಲು ಹೈಕಮಾಂಡ್ ಸಿದ್ಧವಿದೆ. ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನೂ ಮಾತ್ರ ಬದಲಾವಣೆ ಮಾಡಲು ಚಿಂತನೆ ನಡೆಸಿದೆ ಎಂಬ ಚರ್ಚೆಗಳಿವೆ. ಆದರೆ ಈ ವಿಷಯದಲ್ಲಿ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಹೀಗಾಗಿ ಗೊಂದಲಗಳಿನ್ನೂ ಮುಂದುವರೆದಿದ್ದು, ಬಹುತೇಕ ವಿಧಾನಮಂಡಲ ಅ„ವೇಶನ ಮುಗಿಯುವುದರೊಳಗೆ ಹೈಕಮಾಂಡ್ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸುವ ಸಾಧ್ಯತೆ ಇದೆ.

Facebook Comments