ಸ್ವಾತಂತ್ರ್ಯೋತ್ಸವದಂದು ಜನತೆಗೆ ‘ಅಮೃತ’ ನೀಡಿದ ಸಿಎಂ, ಇಲ್ಲಿದೆ ಭಾಷಣದ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.15- ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬಡವರು, ದೀನದಲಿತರು, ಮಹಿಳೆಯರು, ಯುವಕರು, ಕಾರ್ಮಿಕರು, ರೈತರು ಸೇರಿದಂತೆ ಪ್ರತಿಯೊಬ್ಬರ ಸರ್ವಾಂಗೀಣ ಅಭಿವೃದ್ಧಿಗೆ 14 ನೂತನ ಅಮೃತ ಯೋಜನೆಗಳನ್ನು ಘೋಷಣೆ ಮಾಡಿ ನವಕರ್ನಾಟಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುನ್ನುಡಿ ಬರೆದಿದ್ದಾರೆ.

ಅಮೃತ ಗ್ರಾಮಪಂಚಾಯ್ತಿಗಳು, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ರಹಿತ ಉತ್ಪಾದಕ ಸಂಸ್ಥೆಗಳು,ಅಮೃತ ನಿರ್ಮಲ ನಗರ, ಅಮೃತ ಶಾಲ ಸೌಲಭ್ಯ ಯೋಜನೆ, ಅಮೃತ ಅಂಗನವಾಡಿ ಕೇಂದ್ರಗಳು, ಅಮೃತ ಸ್ವಸಹಾಯ ಕಿರು ಉದ್ದಿಮೆಗಳು, ಅಮೃತ ಸಮುದಾಯ ಅಭಿವೃದ್ಧಿ ಯೋಜನೆ, ಅಮೃತ ಆರೋಗ್ಯ, ಮೂಲಸೌಕರ್ಯ ಉನ್ನತೀಕರಣ, ಅಮೃತ ಕೌಶಲ್ಯ ತರಬೇತಿ ಯೋಜನೆ, ಅಮೃತ ಕ್ರೀಡಾ ಯೋಜನೆ, ಬೆಂಗಳೂರಿನ 75 ಕೆರೆ ಅಭಿವೃದ್ಧಿ ಹಾಗೂ ನಗರದ 75 ಕೊಳಚೆ ಕೇರಿಗಳ ಅಭಿವೃದ್ಧಿ ಸೇರಿದಂತೆ ಒಟ್ಟು 14 ಯೋಜನೆಗಳನ್ನು ಅವರು ಘೋಷಣೆ ಮಾಡಿದರು.

75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಿದ ಬೊಮ್ಮಾಯಿ ಅವರು, ತಮ್ಮ 18 ಪುಟಗಳ ಭಾಷಣದಲ್ಲಿ ರಾಜ್ಯಕ್ಕೆ 14 ಹೊಸ ಕಾರ್ಯಕ್ರಮಗಳನ್ನು ಘೋಷಿಸಿ ಜನತೆಗೆ ಬಂಪರ್ ಕೊಡುಗೆ ನೀಡಿದರು.

# ಅಮೃತ ಯೋಜನೆ:
ರಾಜ್ಯದ 780 ಗ್ರಾಮಪಂಚಾಯ್ತಿಗಳಲ್ಲಿ ಬೀದಿದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100ರಷ್ಟು ಘನ ತ್ಯಾಜ್ಯ ವಿಂಗಡಣೆ, ತ್ಯಾಜ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸುವುದು, ಸೌರ ವಿದ್ಯುತ್ ಅಳವಡಿಕೆ, ಸುಸಜ್ಜಿತ ಗ್ರಂಥಾಲಯ, ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಯೋಜನೆಯೇ ಅಮೃತ ಗ್ರಾಮಪಂಚಾಯ್ತಿ.

# ಅಮೃತ ಗ್ರಾಮೀಣ ವಸತಿ ಯೋಜನೆ:
ರಾಜ್ಯದಲ್ಲಿರುವ 770 ಆಯ್ದ ಗ್ರಾಮ ಪಂಚಾಯ್ತಿಗಳಲ್ಲಿ ವಸತಿ ರಹಿತ ಮತ್ತು ಆಶ್ರಯ ರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ಬೊಮ್ಮಾಯಿ ಅವರು ಹೇಳಿದರು.

# ಅಮೃತ ರೈತ ಉತ್ಪಾದಕ ಸಂಸ್ಥೆಗಳು:
ರೈತ ನೇಕಾರ, ಮೀನಾಗಾರರ ಉತ್ಪನ್ನಗಳ ಉತ್ಪಾದನೆ, ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು 750 ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಸಂಸ್ಥೆಗೆ 30 ಲಕ್ಷ ರೂ. ಅನುದಾನ ನೀಡಿ ಮೂರು ವರ್ಷ ಅವಗೆ 225 ಕೋಟಿ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದರು.

#ಅಮೃತ ನಿರ್ಮಲನಗರ:
ರಾಜ್ಯದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಕೃತಿ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ಯೋಜನೆ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ ಒಂದು ಕೋಟಿ ರೂ.ನಂತೆ 75 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

# ಆಮೃತ ಶಾಲಾ ಸೌಲಭ್ಯ ಯೋಜನೆ:
ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ ಒಟ್ಟು 75 ಕೋಟಿ ರೂ. ವೆಚ್ಚ ಮಾಡಲಾಗುವುದು.

# ಅಮೃತ ಅಂಗನವಾಡಿ ಕೇಂದ್ರಗಳು:
750 ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ ಒಂದು ಲಕ್ಷ ರೂ.ನಂತೆ7.5 ಕೋಟಿ ಹಣವನ್ನು ವಿನಿಯೋಗಿಸಲಾಗುವುದು.

# ಅಮೃತ ಸ್ವಸಹಾಯ ಕಿರು ಉದ್ದಿಮೆಗಳು:
ರಾಜ್ಯದಲ್ಲಿರುವ ಆಯ್ದ 7500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ ಒಂದು ಲಕ್ಷ ರೂ.ನಂತೆ 75 ಕೋಟಿ ರೂ.ಬೀಜಧನ(ಸೀಡ್ ಮನಿ) ಒದಗಿಸುವುದೇ ಈ ಯೋಜನೆಯ ಉದ್ದೇಶವಾಗಿದೆ. ಅಮೃತ ಸಮುದಾಯ ಅಭಿವೃದ್ಧಿ ಯೋಜನೆ: 750 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಮುದಾಯ ಸೇವೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುವುದು.

# ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ:
750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ಗಳಂತೆ ಒಟ್ಟು 150 ಕೋಟಿ ಹಣವನ್ನು ಈ ಯೋಜನೆಗೆ ವಿನಿಯೋಗಿಸುವುದಾಗಿ ಸಿಎಂ ತಿಳಿಸಿದರು.

# ಅಮೃತ ಕೌಶಲ್ಯ ತರಬೇತಿ:
ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75000 ಯುವಕ/ಯುವತಿಯರ ಕೌಶಲ್ಯ ಅಭಿವೃದ್ಧಿಗಾಗಿ ಎರಡು ವರ್ಷಗಳ ತರಬೇತಿಗಾಗಿ 112 ಕೋಟಿ ವ್ಯಯಿಸಲಾಗುವುದು.

# ಅಮೃತ ಕ್ರೀಡಾ ದತ್ತಿ ಯೋಜನೆ: ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಭಾರತದ ಮತ್ತು ಕರ್ನಾಟಕದ ಕ್ರೀಡಾಪಟುಗಳ ಸಾಧನೆ ಗಮರ್ನಾಹವಾಗಿದೆ. 2025ರಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿ ಪದಕ ವಿಜೇತ ಸಾಮಥ್ರ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡುವುದು ಈ ಯೋಜನೆಯ ಗುರಿಯಾಗಿದೆ.

# ಅಮೃತ ಕೆರೆಗಳ ಅಭಿವೃದ್ಧಿ ಯೋಜನೆ: ರಾಜಧಾನಿ ಬೆಂಗಳೂರಿನಲ್ಲಿರುವ 75 ಕೆರೆಗಳನ್ನು ದತ್ತು ತೆಗೆದುಕೊಂಡು ಅದನ್ನು ಅಭಿವೃದ್ಧಿಪಡಿಸಲಾಗುವುದು. ಜೊತೆಗೆ 75 ಕೊಳಚೆನಗರಗಳನ್ನು ಅಭಿವೃದ್ದಿಪಡಿಸುವ ಗುರಿ ಹೊಂದಲಾಗಿದೆ.

# ಅಮೃತ ನವಕರ್ನಾಟಕ ನಿರ್ಮಾಣ:
ಪ್ರಧಾನಿ ನರೇಂದ್ರ ಮೋದಿ ಅವರು ಕನಸಿನ ಕೂಸಾದ ನವಭಾರತ ಕಲ್ಪನೆಯಂತೆ ಕರ್ನಾಟಕವನ್ನು ಇಂದಿನಿಂದಲೇ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಪಡಿಸಿ ನವಕರ್ನಾಟಕಕ್ಕೆ ಮುನ್ನುಡಿ ಬರೆಯಲಿದ್ದೇವೆ ಎಂದು ಸಿಎಂ ಘೋಷಿಸಿದರು.

ದೇಶವು 100ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ವೇಳೆಗೆ ನಾವು ಇರುತ್ತೆವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಕೆಲಸಗಳು ಇರಬೇಕು. ಆ ನಿಟ್ಟಿನಲ್ಲಿ ನಾನು ಶ್ರಮ ವಹಿಸಿ ಕೆಲಸ ಮಾಡುತ್ತೇನೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಅಭಯ ನೀಡಿದರು.
ದೇವರು ರೈತನ ಶ್ರಮದಲ್ಲಿದ್ದಾನೆ. ಕೂಲಿ ಕಾರ್ಮಿಕನ ಬೆವರಲಿದ್ದಾನೆ ಎಂದು ನೋಬೆಲ್ ಪ್ರಶಸ್ತಿ ಪುರಸ್ಕøತರಾದ ರವೀಂದ್ರ ಠಾಕೂರ್ ಅವರು ಹೇಳಿದ್ದರು. ಅದೇ ರೀತಿ ನಮ್ಮ ಕಾರ್ಯಕ್ರಮಗಳು ಇರುತ್ತವೆ. ನವಕರ್ನಾಟಕ ನಿರ್ಮಾಣಕ್ಕೆ ಇದು ಮುನ್ನುಡಿಯಾಗಲಿದೆ ಎಂದರು.

ಕೃಷಿ ಸಮ್ಮಾನ್, ಆಯುಷ್ಮಾನ್ ಭಾರತ್, ಆತ್ಮ ನಿರ್ಭರ್ ಭಾರತ್, ಸರ್ವ ಶಿಕ್ಷಣ ಅಭಿಯಾನ, ಸರ್ವರಿಗೂ ಆರೋಗ್ಯ ಅಭಿಯಾನ ಸೇರಿದಂತೆ ಕೇಂದ್ರ ನರೇಂದ್ರ ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮೋದಿ ಅವರ ಕನಸಿನಂತೆ ನಾವು ಕೂಡ ನವಕರ್ನಾಟಕ ನಿರ್ಮಾಣ ಮಾಡುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದಾಗಿ ಪ್ರಕಟಿಸಿದರು.

ರೂಲಿಂಗ್ ಇಸ್ ಡಿಫ್ರೆಂಟ್, ಅಡ್ಮಿನಿಸ್ಟ್ರೇಷನ್ ಇಸ್ ಡಿಫ್ರೆಂಟ್, ರೂಲ್ ಮಾಡುವರು ಮಾಡುತ್ತಲೇ ಇರುತ್ತಾರೆ. ಆಡಳಿತ ನಡೆಸುವವರು ಆಡಳಿತ ಮಾಡುತ್ತಾರೆ. ನನ್ನ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ನಾನು ರಾಜಕೀಯ ಇಚ್ಛಾಶಕ್ತಿಯ ನಾಯಕತ್ವ ನೀಡಲಿದ್ದೇನೆ ಎಂದು ತಿಳಿಸಿದರು.
ನಾಡಿನ ಕಟ್ಟಕಡೆಯ ಕುಟುಂಬ, ಶ್ರಮಿಕರು, ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸೇರಿದಂತೆ ಪ್ರತಿಯೊಬ್ಬರ ಏಳ್ಗೆಯ ಗುರಿಯೊಂದಿಗೆ ಕೆಲಸ ಮಾಡುತ್ತೇನೆ.

ನನ್ನ ಅವ ಕೇವಲ 20 ತಿಂಗಳ ಮಾತ್ರ ಎಂಬ ಅರಿವು ನನಗೂ ಇದೆ. ಅಷ್ಟರೊಳಗೆ ಉತ್ತಮ ಫಲಿತಾಂಶ ಕೊಡುವ ಯೋಜನೆಗಳನ್ನು ಜಾರಿ ಮಾಡುತ್ತೇನೆ. ಜನರ ಸುತ್ತಲು ಅಭಿವೃದ್ಧಿ ಇರಬೇಕೆ ಹೊರತು, ಅಭಿವೃದ್ಧಿ ಸುತ್ತ ಜನರು ಇರಬಾರದು. ಜನಸ್ನೇಹಿ ಆಡಳಿತ ನನ್ನ ಮೊದಲ ಆದ್ಯತೆ ಎಂದರು.

ತಹಸೀಲ್ದಾರ್ ಕಚೇರಿ, ಸಬ್‍ರಿಜಿಸ್ಟರ್ ಸೇರಿದಂತೆ ಮತ್ತಿತರ ಕಚೇರಿಗಳಿಗೆ ಜನರು ಅಲೆಯುವುದನ್ನು ತಪ್ಪಿಸಬೇಕು, ಸರ್ಕಾರದ ಕಾರ್ಯಕ್ರಮಗಳು ಕಾಲಮಿತಿಯೊಳಗೆ ಅನುಷ್ಠಾನಗೊಂಡು ಕಾಲವಾಯಲ್ಲೆ ಮುಗಿಯಬೇಕು. ಅಂತಹ ಆಡಳಿತ ನಡೆಸಬೇಕು ಎಂದು ಪಟ್ಟ ತೊಟ್ಟಿದ್ದೇನೆ. ಒಬ್ಬ ಸಾಮಾನ್ಯ ಕನ್ನಡಿಗನ ಮಾರ್ಗದರ್ಶನ ತೆಗೆದುಕೊಂಡು ಕೆಲಸ ಮಾಡಲಿದ್ದೇನೆ. ಕನ್ನಡ ನಾಡನ್ನು ಕಟ್ಟಲು ಹಗಲಿರುಳು ಶ್ರಮಿಸುತ್ತೇನೆ. ನಾಡಿನ ಅಭಿವೃದ್ಧಿಗೆ ದಣಿವರಿಯದೆ ಕೆಲಸ ಮಾಡುವುದೆ ಎಂದರು.

Facebook Comments

Sri Raghav

Admin