ನಗರೋತ್ಥಾನ ಅನುದಾನ ಹಂಚಿಕೆಯಲ್ಲಿ ತಾರತಮ್ಯ : ಸಿಎಂ ಧೋರಣೆಗೆ ವ್ಯಾಪಕ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.18-ಇಪ್ಪತ್ತೆಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆಯ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂಪರ್ ಕೊಡುಗೆ ನೀಡಿದ್ದಾರೆ.ಬೆಂಗಳೂರು ಹೊರತು ಪಡಿಸಿ ನಗರಾಬಿವೃದ್ಧಿ ಖಾತೆ ಸಚಿವರಾಗಿರುವ ಬೈರತಿ ಬಸವರಾಜ್ ಪ್ರತಿನಿಸುವ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಬೊಮ್ಮಾಯಿ ಅವರು ಹೆಚ್ಚು ನಗರೋತ್ಥಾನ ಯೋಜನೆಯಡಿ 150 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದಾರೆ.

ಕೇವಲ ಬೈರತಿ ಅವರ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಿ ಬೇರೆ ಕ್ಷೇತ್ರಗಳನ್ನು ಕಡೆಗಣಿಸಿರುವುದು ಬಿಜೆಪಿ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಸರ್ಕಾರದಿಂದ ನೀಡುವ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳ ಅಂದಾಜು ಪಟ್ಟಿಗೆ ಹಾಗೂ ಟೆಂಡರ್ ಕರೆಯಲು ಅನುಮೋದನೆ ನೀಡುವ ಬಗ್ಗೆ ಅಕಾರಯುಕ್ತ ಸಮಿತಿ ಕಳೆದ ಅ.8 ರಂದು ಸಭೆ ನಡೆಸಿ ಸಭೆಯಲ್ಲಿ ಕೈಗೊಂಡ ಕಾಮಗಾರಿಗಳಿಗಾಗಿ ಸರ್ಕಾರದ ಅನುಮೋದನೆಗೆ ರವಾನಿಸಲಾಗಿತ್ತು.

ನಗರೋತ್ಥಾನ ಯೋಜನೆ ಅನುದಾನ ಬಿಡುಗಡೆ ಕುರಿತಂತೆ ನಗರಾಭಿವೃದ್ಧಿ ಇಲಾಖೆ ಅಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೇವಲ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಸಂಬಂಸಿದ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ನೀಡುವಂತೆ ಸೂಚನೆ ನೀಡಿದ್ದಾರೆ.

ಕಾಮಗಾರಿಗಳ ಪಟ್ಟಿಯಲ್ಲಿ ಕ್ರಮಸಂಖ್ಯೆ 6 ರಿಂದ 22 ರವರೆಗಿನ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸಂಬಂಸಿದ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹಿದಾಯುತ್ತುಲ್ಲ ಅವರು ಹೊರಡಿಸಿರುವ ಆದೇಶದ ಪ್ರತಿ ಈ ಸಂಜೆಗೆ ಲಭ್ಯವಾಗಿದೆ.

ಅಕಾರಯುಕ್ತ ಸಮಿತಿ ಸಲಹೆ ಮಾಡಿದ್ದ ಕಾಮಗಾರಿಗಳ ಮೊತ್ತಕ್ಕಿಂತ ಶೇ.1ರಷ್ಟು ಹಣ ಹೆಚ್ಚಳ ಮಾಡಿ ಅನುದಾನ ಬಿಡುಗಡೆ ಮಾಡಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.ಸರ್ಕಾರದ ಈ ನಿರ್ಧಾರ ಆಡಳಿತಾರೂಢ ಪಕ್ಷದ ಶಾಸಕರಲ್ಲದೆ, ಪ್ರತಿಪಕ್ಷಗಳ ಶಾಸಕರ ಆಕ್ರೋಶಕ್ಕೂ ಗುರಿಯಾಗಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ಬೆಂಗಳೂರು ನಗರ ಗಬ್ಬೆದ್ದು ಹೋಗಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಸಮನಾಗಿ ಅನುದಾನ ಹಂಚಿಕೆ ಮಾಡಿದ್ದರೆ ಮಳೆಯಿಂದ ಆಗಿರುವ ಅನಾಹುತ ತಪ್ಪಿಸಬಹುದಾಗಿತ್ತು.

ಆದರೆ, ಮುಖ್ಯಮಂತ್ರಿಗಳು ಎಲ್ಲಾ ಕ್ಷೇತ್ರಗಳನ್ನು ಪರಿಗಣಿಸದೆ ಕೇವಲ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡುವ ಅವಶ್ಯಕತೆ ಆದರೂ ಏನಿತ್ತು ಎನ್ನುವುದು ಪ್ರಜ್ಞಾವಂತ ನಾಗರೀಕರ ಪ್ರಶ್ನೆಯಾಗಿದೆ.

Facebook Comments

Sri Raghav

Admin