ಉಪಚುನಾವಣೆ ಅಖಾಡಕ್ಕೆ ನಾಳೆ ಸಿಎಂ ಎಂಟ್ರಿ, 21ರಿಂದ ರಾಜಾಹುಲಿ ಘರ್ಜನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16- ಪ್ರತಿಷ್ಠೆಯ ಕಣವಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಖಾಡಕ್ಕೆ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಂಗ ಪ್ರವೇಶ ಮಾಡಲಿದ್ದು, ಕೇಸರಿ ಪಡೆ ರಣಕಹಳೆ ಮೊಳಗಿಸಲಿದೆ.ನಾಳೆ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ ಅವರ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಸಚಿವರು ಮತ್ತಿತರ ಅನೇಕರು ಪ್ರಚಾರಕ್ಕೆ ಧುಮುಕಲಿದ್ದಾರೆ.

ನಾಳೆ ಹಾನಗಲ್‍ನಿಂದ ಪ್ರಚಾರಕ್ಕೆ ಚಾಲನೆ ದೊರಕಲಿದ್ದು, ಸಚಿವರಾದ ಬಿ.ಸಿ.ಪಾಟೀಲ್, ಸಿ.ಸಿ.ಪಾಟೀಲ್, ಶಂಕರ್ ಪಟೇಲ್ ಮುನೇನಕೊಪ್ಪ ಸೇರಿದಂತೆ ಅನೇಕರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.ಕ್ಷೇತ್ರದ ನಾನಾ ಕಡೆ ಬಿರುಸಿನ ಪ್ರಚಾರ ನಡೆಸಲಿರುವ ಬೊಮ್ಮಾಯಿ ಅವರು ದಿನಪೂರ್ತಿ ಸಜ್ಜನರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಕೇಸರಿ ಪಡೆಯಲ್ಲಿ ರಣೋತ್ಸವ ಹೆಚ್ಚಾಗಿದೆ.

# ಹೋಬಳಿಗೊಬ್ಬ ಸಚಿವ:
ಇನ್ನು ಹಾನಗಲ್ ಮತ್ತು ಸಿಂಧಗಿಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಒಂದೊಂದು ಹೋಬಳಿಗೆ ಒಬ್ಬೊಬ್ಬ ಸಚಿವರು ಮತ್ತು ಶಾಸಕರನ್ನು ಉಸ್ತುವಾರಿಗಳನ್ನಾಗಿ ನೇಮಿಸಿದೆ. ಒಂದು ಜಿಪಂ ವ್ಯಾಪ್ತಿಗೆ ಒಬ್ಬ ಸಚಿವ, ಶಾಸಕರು, ಪಕ್ಷದ ಮುಖಂಡರು ಪ್ರಚಾರ ಮಾಡಬೇಕು.

ಇನ್ನು ಆಯಾ ಜಾತಿಗಳ ಮತಗಳನ್ನು ಸೆಳೆಯಲು ಆಯಾಯ ಸಮುದಾಯದ ಸಚಿವರು ಕೂಡ ಅಖಾಡಕ್ಕೆ ಧುಮುಕುವರು. ಸಚಿವರಾದ ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್ ಪಟೇಲ್ ಮುನೇನಕೊಪ್ಪ ಹಾಗೂ ಶಾಸಕರು ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಪಂಚಮಸಾಲಿ ಸಮುದಾಯದ ಮತಗಳನ್ನು ಬೇಟೆಯಾಡಲಿದ್ದಾರೆ.

ಈಗಾಗಲೇ ಸ್ಥಳೀಯ ಮುಖಂಡರು ಹಾಗೂ ಇತರರನ್ನು ಭೇಟಿಯಾಗಿರುವ ಅವರು ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಮುಖ್ಯಮಂತ್ರಿ ಕೈ ಬಲಪಡಿಸಬೇಕೆಂದು ಮನವಿ ಮಾಡುತ್ತಿದ್ದಾರೆ.ದೇ ರೀತಿ ಸಿಂಧಗಿಯಲ್ಲೂ ಕೂಡ ಹೋಬಳಿ, ಹೋಬಳಿಗೊಬ್ಬ ಸಚಿವ, ಶಾಸಕರು, ಮುಖಂಡರು ಅಭ್ಯರ್ಥಿ ರಮೇಶ್ ಬೂಸನೂರ ಪರವಾಗಿ ಮತಯಾಚನೆ ಮಾಡುವರು.

ಈಗಾಗಲೇ ಸಚಿವರಾದ ವಿ.ಸೋಮಣ್ಣ, ಗೋವಿಂದ ಕಾರಜೋಳ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕರು ಕಳೆದ ನಾಲ್ಕೈದು ದಿನಗಳಿಂದ ಪ್ರಚಾರ ನಡೆಸುತ್ತಿದ್ದಾರೆ.

# ಪ್ರಚಾರಕ್ಕೆ ರಾಜಾಹುಲಿ:
ಇನ್ನು ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಾರೋ ಇಲ್ಲವೋ ಎಂಬ ಗೊಂದಲಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತೆರೆ ಎಳೆದಿದ್ದಾರೆ.ಇದೇ 21ರಿಂದ ಸಿಂಧಗಿಯಲ್ಲಿ ಎರಡು ದಿನಗಳ ಕಾಲ ಗ್ರಾಮ ಮಟ್ಟದಿಂದ ಹಿಡಿದು ತಾಲ್ಲೂಕು ಮಟ್ಟದವರೆಗೂ ಅಭ್ಯರ್ಥಿ ಬೂಸನೂರ ಪರವಾಗಿ ಯಡಿಯೂರಪ್ಪ ಪ್ರಚಾರ ನಡೆಸುವರು.

ಯಡಿಯೂರಪ್ಪನವರಿಗೆ ಸಚಿವರಾದ ಸೋಮಣ್ಣ, ಗೋವಿಂದ ಕಾರಜೋಳ ಸೇರಿದಂತೆ ಮತ್ತಿತರರು ಸಾಥ್ ನೀಡುವರು. ಸಿಂಧಗಿಯಲ್ಲಿ ಪ್ರಚಾರ ಮಾಡಿಸಿದ ಬಳಿಕ ಯಡಿಯೂರಪ್ಪ ನೇರವಾಗಿ 23 ರಿಂದ 24ರ ವರೆಗೆ ಎರಡು ದಿನಗಳ ಕಾಲ ಹಾನಗಲ್‍ನಲ್ಲಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರವಾಗಿ ಪ್ರಚಾರ ನಡೆಸಲಿದ್ದಾರೆ.

ನಂತರ ಎರಡನೆ ಹಂತದ ಪ್ರಚಾರದಲ್ಲಿ ಯಡಿಯೂರಪ್ಪ ರೋಡ್‍ಶೋ ಮೂಲಕ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುವರು. ನಿನ್ನೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾದ ಸಂದರ್ಭದಲ್ಲೇ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಪಕ್ಷದ ಪರವಾಗಿ ಆಹ್ವಾನ ನೀಡಿದರು.

ಇದಕ್ಕೆ ಸಮ್ಮತಿಸಿರುವ ಯಡಿಯೂರಪ್ಪ ಪಕ್ಷ ಸೂಚಿಸಿದ ಸಂದರ್ಭದಲ್ಲಿ ಅಭ್ಯರ್ಥಿಗಳ ಪರವಾಗಿ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಪ್ರಚಾರ ನಡೆಸುತ್ತೇನೆ ಎಂದು ಅಭಯ ನೀಡಿದ್ದಾರೆ. ದಸರಾ ಹಬ್ಬದ ನಂತರ ಉಪಚುನಾವಣೆ ಕಾವು ರಂಗೇರತೊಡಗಲಿದೆ.

Facebook Comments

Sri Raghav

Admin