ಪರಿಷತ್ ಚುನಾವಣೆ : ಸಿಎಂ ಭರ್ಜರಿ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.26- ಸ್ಥಳೀಯ ಸಂಸ್ಥೆಗಳಿಂದ 20 ಕ್ಷೇತ್ರಗಳ 25 ಪರಿಷತ್ ಸ್ಥಾನಗಳಿಗೆ ಡಿ.10ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿನಿಂದ ವಿದ್ಯುಕ್ತವಾಗಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿದರು. ನಾಮಪತ್ರ ಸಲ್ಲಿಕೆಯಾಗಿ ಇದೀಗ ಪರಿಶೀಲನೆ ಸಹ ಮುಗಿದಿದ್ದು, ನಾಳೆ ನಾಮಪತ್ರ ಹಿಂಪಡೆಯಲು ಕಡೆಯದಿನವಾಗಿದೆ.

ಪ್ರಚಾರಕ್ಕೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಸಚಿವರು, ಶಾಸಕರು, ಪಕ್ಷದ ಮುಖಂಡರು ಮತ್ತಿತರರು ಪ್ರಚಾರಕ್ಕೆ ಧುಮುಕಿದ್ದಾರೆ.ಇಂದು ಬೆಳಗ್ಗೆಯೇ ದಾವಣಗೆರೆಗೆ ರಸ್ತೆ ಮೂಲಕ ತೆರಳಿದ ಬೊಮ್ಮಾಯಿ ಅವರು, ಚಿತ್ರದುರ್ಗ, ದಾವಣಗೆರೆ ಬಿಜೆಪಿ ಅಭ್ಯರ್ಥಿ ನವೀನ್‍ಕುಮಾರ್ ಪರವಾಗಿ ಪ್ರಚಾರ ನಡೆಸಿದರು.

ದಾವಣಗೆರೆಯ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಬೆಂಬಲಿತ ಗ್ರಾಮಪಂಚಾಯ್ತಿ ಸದಸ್ಯರನ್ನು ಭೇಟಿಯಾದ ಸಿಎಂ ಅಭ್ಯರ್ಥಿಯನ್ನು ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಸಿಎಂಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು, ಮುಖಂಡರು ಮತ್ತಿತರರು ಬೆಂಬಲ ನೀಡಿದರು.

ದಾವಣಗೆರೆಯಿಂದ ಪ್ರಚಾರ ಮುಗಿಸಿದ ನಂತರ ಚಿತ್ರದುರ್ಗಕ್ಕೆ ಆಗಮಿಸಿದ ಅವರು, ಅಲ್ಲಿಯೂ ಸಹ ಗ್ರಾಮಪಂಚಾಯ್ತಿ ಸದಸ್ಯರು ಮತ್ತು ಅಧ್ಯಕ್ಷರನ್ನು ಭೇಟಿಯಾಗಿ ನವೀನ್‍ಕುಮಾರ್ ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಕಳೆದ ಬಾರಿ ಕೆಲವೇ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಅವರನ್ನು ಈ ಬಾರಿ ಬಹುಮತಗಳ ಅಂತರದಿಂದ ಗೆಲ್ಲಿಸಬೇಕು. ನವೀನ್‍ಕುಮಾರ್ ಗೆಲುವಿಗೆ ಎಲ್ಲರೂ ಬೆಂಬಲ ನೀಡಬೇಕೆಂದು ಕಾರ್ಯಕರ್ತರಿಗೂ ಕರೆ ಕೊಟ್ಟರು.

ಚಿತ್ರದುರ್ಗ ಪ್ರಚಾರ ಮುಗಿದ ಬಳಿಕ ತುಮಕೂರಿಗೆ ಆಗಮಿಸಿದ ಸಿಎಂ ಬೊಮ್ಮಾಯಿ ಅವರು ಬಿಜೆಪಿ ಅಭ್ಯರ್ಥಿ ಲೋಕೇಶ್ ಪರವಾಗಿ ಕಾರ್ಯಕರ್ತರ ಜೊತೆ ಮತಯಾಚನೆ ಮಾಡಿದರು. ಇನ್ನೊಂದೆಡೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮತವರು ಜಿಲ್ಲೆ ಶಿವಮೊಗ್ಗದ ಶಿಕಾರಿಪುರ, ಶಿರಾಳುಕೊಪ್ಪ, ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರ ಸೇರಿದಂತೆ ಮತ್ತಿತರ ಕಡೆ ಅಭ್ಯರ್ಥಿ ಬಿ.ಎಸ್.ಅರುಣ್ ಪರವಾಗಿ ಮತಯಾಚನೆ ಮಾಡಿದ್ದಾರೆ.

ಇನ್ನೊಂದೆಡೆ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಶಾಸಕರು, ಮುಖಂಡರು ಮತ್ತಿತರರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.ಹೀಗೆ ದಿನ ಕಳೆದಂತೆ ಬಿಜೆಪಿ ಚುನಾವಣಾ ಪ್ರಚಾರದ ಕಾವು ರಂಗೇರುವಂತೆ ಮಾಡಿದೆ.

Facebook Comments