ಈ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ : ಸಿಎಂ ಬೊಮ್ಮಾಯಿ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.4- ಈ ಬಾರಿ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ನೂತನ ಸಚಿವರ ಪ್ರಮಾಣವಚನಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 29 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಏಳು ಒಬಿಸಿ, ಏಳು ಒಕ್ಕಲಿಗ, ಎಂಟು ಲಿಂಗಾಯಿತರು, ಮೂವರು ದಲಿತರು, ಒಬ್ಬರು ಪರಿಶಿಷ್ಟ ವರ್ಗಕ್ಕೆ ಸೇರಿದವರು ಹಾಗೂ ಒಬ್ಬರು ಮಹಿಳೆ ಸಂಪುಟದಲ್ಲಿ ಇರಲಿದ್ದಾರೆ ಎಂದು ಹೇಳಿದರು.

ಹೊಸ ಚೈತನ್ಯ ಹಾಗೂ ಹಿರಿಯರ ಅನುಭವಗಳನ್ನೊಳಗೊಂಡ ಸಂಪುಟ ಇದಾಗಿದೆ. ಹೊಸಬರಿಗೂ ಕೂಡ ಅವಕಾಶ ನೀಡಲಾಗಿದೆ. ಬಿಎಸ್‍ವೈ ಅವರ ಪುತ್ರ ವಿಜಯೇಂದ್ರ ಅವರ ಹೆಸರು ಪಟ್ಟಿಯಲ್ಲಿ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿ ರಾಷ್ಟ್ರೀಯ ಪಕ್ಷ.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹಮಂತ್ರಿ ಅಮಿತ್ ಷಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ಸಂಪುಟಕ್ಕಿದೆ. ಸಂಪುಟ ರಚನೆಯಲ್ಲಿ ಯಾರದ್ದೇ ಒತ್ತಡವಿಲ್ಲ. ವರಿಷ್ಠರ ತೀರ್ಮಾನದಂತೆ ಸಂಪುಟ ರಚನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತದ ಹಿನ್ನೆಲೆಯಲ್ಲಿ ಸಂಪುಟ ರಚನೆ ಮಾಡಲಾಗಿದ್ದು, ಜನರ ಸಮಸ್ಯೆಗಳಿಗೆ ದನಿಯಾಗಿ ಉತ್ತಮ ಆಡಳಿತ ನೀಡಲಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಸ್ಥಳದಲ್ಲೇ ಪರಿಹಾರ ಘೋಷಣೆ ಮಾಡಿದ್ದೇನೆ. ಅದಲ್ಲದೆ, ರೈತರ ಮಕ್ಕಳಿಗೆ ಸ್ಕಾಲರ್‍ಶಿಪ್ ಯೋಜನೆಗೆ ಒಂದು ಸಾವಿರ ಕೋಟಿ ರೂ. ಯೋಜನೆ ಘೋಷಿಸಿದ್ದೇನೆ. ಸಾಮಾಜಿಕ ಭದ್ರತೆ, ಸ್ಕೀಮ್‍ಗಳ ಅನುದಾನ ಯೋಜನೆ ಘೋಷಣೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

Facebook Comments