ಬೊಮ್ಮಾಯಿ ಸಂಪುಟಕ್ಕೂ ದೇವೇಗೌಡರಿಗೂ ಸಂಬಂಧವಿದೆಯೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.6- ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂಬಂಧವಿದೆಯೇ? ಹೀಗೊಂದು ಪ್ರಶ್ನೆ ಸದ್ಯ ರಾಜ್ಯ ರಾಜಕೀಯ ವಲಯದಲ್ಲಿ ಮೂಡಿದೆ. ಒಕ್ಕಲಿಗ ಶಾಸಕರಿಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಜೆಡಿಎಸ್-ಬಿಜೆಪಿ ತಾತ್ವಿಕ ಒಪ್ಪಂದಕ್ಕೆ ಮುಂದಾಗಿವೆ. ಈ ಮೂಲಕ ಬಿಜೆಪಿಗೆ ಕಂಟಕರಾಗಿರುವ ಶಾಸಕರನ್ನು ಸಂಪುಟದಿಂದ ಹೊರಗಿಡಲಾಗಿದೆ.

ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಜೆಡಿಎಸ್‍ಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ, ಹೀಗಾಗಿ ಅವರನ್ನು ಮಹತ್ವದ ಹುದ್ದೆಗಳಿಂದ ದೂರ ಇಡಲಾಗಿದೆ. ಶಿರಾ ಮತ್ತು ಕೆಆರ್ ಪೇಟೆ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ತಾಜಾ ನಿದರ್ಶನವೆಂದರೆ, ರಾಮನಗರದಲ್ಲಿ ಜೆಡಿಎಸ್‍ಗೆ ಪ್ರಬಲ ವಿರೋಧಿಯಾಗಿರುವ ಎಂಎಲ್‍ಸಿ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟದಿಂದ ಹೊರಗಿಡಲಾಗಿದೆ. ಕುರುಬ ನಾಯಕ ಎಂ.ಟಿ.ಬಿ.ನಾಗರಾಜ್ ಅವರಿಗೆ ಒಕ್ಕಲಿಗ ಭದ್ರಕೋಟೆಯಾದ ಬೆಂಗಳೂರು ಗ್ರಾಮಾಂತರದ ಉಸ್ತುವಾರಿ ನೀಡಲಾಗಿದೆ.

ಮೈಸೂರು ಮತ್ತು ಇತರ ಒಕ್ಕಲಿಗ ಪ್ರಾಬಲ್ಯವಿರುವ ಹಾಗೂ ಜೆಡಿಎಸ್‍ಗೆ ಶತ್ರುಗಳಾಗಿರುವವರ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ. ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ.ದೇವೇಗೌಡ ಅವರನ್ನು ಗಮನದಲ್ಲಿರಿಸಿಕೊಂಡಿರುವ ಬಿಜೆಪಿಗೆ ಸದ್ಯ ಶತೃತ್ವ ಬೇಕಿಲ್ಲ, ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಿಂಬಾಗಿಲ ಮಾತುಕತೆಗಳು ನಡೆದಿವೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ನಡೆಯುತ್ತಿರುವ ವೇಳೆ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಸುಮಾರು ನಾಲ್ಕೆ ೈದು ದಿನಗಳ ಕಾಲ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು.

ಆದಾದ ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ್ದರು. ಇನ್ನೂ ಸಚಿವ ಸಂಪುಟ ರಚನೆಗೂ ಮುನ್ನ ದೇವೇಗೌಡರು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದರು.

ಒಕ್ಕಲಿಗ ಭದ್ರಕೋಟೆ ಬಿಜೆಪಿಯ ಬಹುದೊಡ್ಡ ವೀಕ್ ನೆಸ್, 2008 ರಲ್ಲಿ ಬಿಜೆಪಿ 110 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು, 2018 ರಲ್ಲಿ 104, ಆದರೆ ಜೆಡಿಎಸ್ ಭದ್ರಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ, 2019 ರಲ್ಲಿ ಮೋದಿ ಅಲೆಯಿದ್ದಾಗಲು ಬಿಜೆಪಿಗೆ, ಮಂಡ್ಯ, ಹಾಸನ ಮತ್ತು ಬೆಂಗಳೂರು ಗ್ರಾಮಾಂತರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ, ಬಿಜೆಪಿ ತನ್ನ ನೆಲೆಯನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದೆ, ಇದರಿಂದ ಕಾಂಗ್ರೆಸ್ ಅನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂಬ ಆಶಯದೊಂದಿಗೆ ಜೆಡಿಎಸ್ ಜೊತೆ ಉತ್ತಮ ಬಾಂಧವ್ಯ ಹೊಂದಲು ಬಿಜೆಪಿ ಮುಂದಾಗಿದೆ.

# ಮೈಸೂರು ಭಾಗಕ್ಕೀಲ್ಲ ಸಚಿವ ಸ್ಥಾನ :
ಸಚಿವ ಸಂಪುಟ ರಚನೆ ಕಸರತ್ತು ಅನೇಕ ಹಿರಿಯ ಬಿಜೆಪಿ ನಾಯಕರು ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ಕಣ್ಣು ಕೆಂಪಾಗಿಸಿದೆ. ಕ್ಯಾಬಿನೆಟ್‍ನಲ್ಲಿ ಪ್ರಾದೇಶಿಕ ಮತ್ತು ಜಾತಿ ಅಸಮತೋಲನ ಎದ್ದು ಕಾಣುತ್ತಿದೆ. ಹಳೆಯ ಮೈಸೂರು ಪ್ರದೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನೀಡಿದ್ದ ಭರವಸೆ ವಿಫಲವಾಗಿದೆ. ಸುಮಾರು 100ಕ್ಕು ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿರುವ ಹಳೆ ಮೈಸೂರು ಭಾಗವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿಲ್ಲ, ಜೊತೆಗೆ ಈ ಭಾಗದಲ್ಲಿ ಬಿಜೆಪಿಯನ್ನು ಪ್ರಾಬಲ್ಯಗೊಳಿಸಲು ಆಸಕ್ತಿ ತೋರಿಸಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲವರ್ಧಿಸಲು ಬಿಜೆಪಿ ನಾಯಕರಿಗೆ ಆಸಕ್ತಿಯಿಲ್ಲ, ಕೋಲಾರ ಮತ್ತು ಚಿಕ್ಕಮಗಳೂರು ಪ್ರದೇಶಗಳಿಗೆ ಸಂಪುಟದಲ್ಲಿ ಆದ್ಯತೆ ನೀಡಿಲ್ಲ. ದಕ್ಷಿಣ ಜಿಲ್ಲೆಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡದಿದ್ದರೂ, ಕಾಂಗ್ರೆಸ್ ಭದ್ರಕೋಟೆಯೆಂದು ಪರಿಗಣಿಸಲ್ಪಟ್ಟ ಕೋಲಾರ ಮತ್ತು ಚಾಮರಾಜನಗರ ಸ್ಥಾನಗಳನ್ನು ಗೆದ್ದು ಲೋಕಸಭಾ ಚುನಾವಣೆಯಲ್ಲಿ ಅಚ್ಚರಿ ಮೂಡಿಸಿತ್ತು.

ಮಂಡ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಕ್ಷವು ತನ್ನ ಕ್ಷೇತ್ರ ವಿಸ್ತರಿಸಲು ಜೆಡಿಎಸ್‍ನ ಅನೇಕರನ್ನು ಓಲೈಸಲು ಯತ್ನಿಸಿತು. ಜೆಡಿಎಸ್ ನಿಂದ ಪಕ್ಷಾಂತರಗೊಂಡ ಶಾಸಕ ನಾರಾಯಣ ಗೌಡ, ಒಕ್ಕಲಿಗರ ಭದ್ರಕೋಟೆಯಾದ ಕೆ.ಆರ್ .ಪೇಟೆಯಲ್ಲಿ ಬಿಜೆಪಿ ಟಿಕೆಟ್ ನಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತವರು ಜಿಲ್ಲೆ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಅಸೆಂಬ್ಲಿ ಕ್ಷೇತ್ರ ರಾಮನಗರದಲ್ಲಿ ಪಕ್ಷವನ್ನು ಪ್ರಾಬಲ್ಯಗೊಳಿಸುವ ಉದ್ದೇಶದಿಂದ ಬಿಜೆಪಿ ಸಿ.ಪಿ.ಯೋಗೇಶ್ವರ್ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿತ್ತು.

ಆದರೆ ಮೈಸೂರಿನಿಂದ ಮುಂಚೂಣಿಯಲ್ಲಿರುವ ಶಾಸಕ ಎಸ್.ಎ.ರಾಮದಾಸ್, ಹಾಸನದ ಪ್ರೀತಂ ಗೌಡ, ಮೂಡಿಗೆರೆಯ ಎಂ.ಪಿ.ಕುಮಾರಸ್ವಾಮಿ, ನಂಜನಗೂಡಿನ ಹರ್ಷವರ್ಧನ್, ರಾಮನಗರ ಜಿಲ್ಲೆಯ ಎಂಎಲ್‍ಸಿ ಸಿ.ಪಿ.ಯೋಗೇಶ್ವರ ಅವರಿಗೆ ಭಾರೀ ನಿರಾಶೆಯಾಗಿದೆ. ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಮತ್ತು ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಕೂಡ ಯುವ ಮುಖಗಳಿಗೆ ಆದ್ಯತೆ ನೀಡಲಿದೆ ಎಂದು ಪಕ್ಷದ ಮೇಲೆ ಭರವಸೆ ಇಟ್ಟುಕೊಂಡಿದ್ದರು. ಆದರೆ, ಇವರೆಲ್ಲರ ಆಸೆ ನಿರಾಸೆಯಾಗಿದೆ.

Facebook Comments