ಸಂಪುಟ ರಚನೆ ಯಾವಾಗ..? ಸಿಎಂ ಬೊಮ್ಮಾಯಿ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಇಂದು ಅಥವಾ ನಾಳೆಯೊಳಗೆ ಸಚಿವ ಸಂಪುಟ ರಚನೆ ಕುರಿತು ಸಂದೇಶ ಬರುವ ಸಾಧ್ಯತೆ ಇದೆ. ಹೈಕಮಾಂಡ್‍ನಿಂದ ಸಂದೇಶ ಬಂದ ಕೂಡಲೇ ಸಚಿವ ಸಂಪುಟ ರಚನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ರಚನೆ ಸಂಬಂಧ ಹೈಕಮಾಂಡ್ ಸಂದೇಶವನ್ನು ಎದುರು ನೋಡಲಾಗುತ್ತಿದೆ. ವರಿಷ್ಠರು ಸಂದೇಶ ನೀಡುತ್ತಿದ್ದಂತೆ ಸಂಪುಟ ರಚನೆ ಪ್ರಕ್ರಿಯೆ ಆರಂಭ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರವಾಹ ಸ್ಥಿತಿ, ಪರಿಹಾರ ಕಾರ್ಯಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಕಾರಿಗಳ ಜೊತೆ ಇಂದು ಸಭೆ ಮಾಡುತ್ತೇನೆ. ಎಲ್ಲಾ ಜಿಲ್ಲಾಕಾರಿಗಳಿಂದ ವರದಿ ತರಿಸಿಕೊಳ್ಳುತ್ತೇನೆ. ಹಣಕಾಸು ಇಲಾಖೆ ಅಕಾರಿಗಳ ಜೊತೆ ಸಭೆ ಮಾಡಿ ಅಗತ್ಯ ಹಣಕಾಸು ಬಿಡುಗಡೆ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಸಿಎಂ ತಿಳಿಸಿದರು.

# ಯಡಿಯೂರಪ್ಪ ಬಳಿ ಚರ್ಚೆ:
ಮುಖ್ಯಮಂತ್ರಿಗಳ ನಿವಾಸಕ್ಕೆ ಸಚಿವಾಕಾಂಕ್ಷಿಗಳು ಆಗಮಿಸಿದರೆ, ಮಾಜಿ ಮುಖ್ಯಮಂತ್ರಿ ಬಿಎಸ್‍ವೈ ನಿವಾಸಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ನೀಡಿ ಕುತೂಹಲ ಮೂಡಿಸಿದರು.ಇನ್ನೆರಡು ದಿನದಲ್ಲಿ ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದ್ದು, ಹೈಕಮಾಂಡ್ ಸೂಚನೆ ಹಿನ್ನೆಲೆ ಪರಿಷ್ಕೃತ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿದ್ದಾರೆ.ಅದಕ್ಕೂ ಮುನ್ನ ಇಂದು ಮಾಜಿ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಮಾಡಿದರು.

ಈ ಮೊದಲು ದೆಹಲಿಗೆ ತೆರಳುವ ಮುನ್ನ ಸಹ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಬೊಮ್ಮಾಯಿ ದೆಹಲಿಯಿಂದ ವಾಪಸಾದ ಬಳಿಕ ಮತ್ತೆ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.ಸಂಪುಟ ರಚನೆ ಕುರಿತಂತೆ ಹೈಕಮಾಂಡ್ ನೀಡಿರುವ ಸೂಚನೆಗಳ ಬಗ್ಗೆ ಬಿಎಸ್‍ವೈ ಜೊತೆ ಚರ್ಚೆ ನಡೆಸಿದ್ದು, ಯಾರಿಗೆಲ್ಲಾ ಅವಕಾಶ ನೀಡಬೇಕು, ಯಾರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಕುರಿತು ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.

ಇತ್ತ ದೆಹಲಿಯಿಂದ ಸಿಎಂ ಬೊಮ್ಮಾಯಿ ಮರಳಿರುವ ಸುದ್ದಿ ತಿಳಿಯುತ್ತಿದ್ದಂತೆ ಸಚಿವಾಕಾಂಕ್ಷಿಗಳು ಸಿಎಂ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ. ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಬಿ.ಸಿ ಪಾಟೀಲ್ ಹಾಗೂ ಶಾಸಕರಾದ ಕೆ.ಜಿ ಬೋಪಯ್ಯ, ಮಹೇಶ್ ಕುಮಟಳ್ಳಿ, ಶಿವನಗೌಡ ನಾಯಕ್ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಮಾಜಿ ಸಚಿವ ಬಿ.ಸಿ ಪಾಟೀಲ್, ಸಂಪುಟ ರಚನೆ ಬಗ್ಗೆ ನಾನು ಯಾವುದೇ ಚರ್ಚೆ ಮಾಡಿಲ್ಲ, ಖಾತೆ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ, ಅದೆಲ್ಲಾ ಬರಲಿ ಬಂದಾಗ ನೋಡೋಣ ಎಂದರು.ಗೃಹ ಖಾತೆ ಹೊಂದಿದ್ದ ಬೊಮ್ಮಾಯಿ ಸಿಎಂ ಆಗಿದ್ದು ಈಗ ಗೃಹ ಖಾತೆಗೆ ಬೇಡಿಕೆ ಇಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅದರ ಬಗ್ಗೆ ಈಗ ನಾನೇನು ಹೇಳಲ್ಲ ಮುಂದೆ ನೋಡೋಣ ಎಂದರು.ಇತ್ತ ಬಿಎಸ್‍ವೈ ಆಪ್ತ ಸಹಾಯಕರಾಗಿದ್ದ ಎನ್.ಆರ್ ಸಂತೋಷ್ ಕೂಡ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದರು.

ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಆಗಿದ್ದ ಸಂತೋಷ್ ಈಗ ಮತ್ತೆ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಇದನ್ನು ತಳ್ಳಿ ಹಾಕಿರುವ ಸಂತೋಷ್, ಸಿಎಂ ಭೇಟಿ ವೇಳೆ ರಾಜಕೀಯ ಕುರಿತು ಯಾವುದೇ ಚರ್ಚೆ ಮಾಡಿಲ್ಲ, ತರೀಕೆರೆ ನೀರಾವರಿ ಯೋಜನೆಗಳ ಕುರಿತು ಮಾತ್ರ ಮಾತುಕತೆ ನಡೆಸಲಾಗಿದೆ ಎಂದರು.

Facebook Comments

Sri Raghav

Admin