ನಾಳೆ ದೆಹಲಿಗೆ ತೆರಳಿದ್ದಾರೆ ಸಿಎಂ ಬೊಮ್ಮಾಯಿ, ರಾಷ್ಟ್ರೀಯ ನಾಯಕರ ಜತೆ ಚರ್ಚಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.6- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ನವದೆಹಲಿಗೆ ತೆರಳುತ್ತಿದ್ದು, ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಕುರಿತಾಗಿ ರಾಷ್ಟ್ರೀಯ ನಾಯಕರ ಜತೆ ಚರ್ಚಿಸಲಿದ್ದಾರೆ. ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಬೇಕೆಂದು ಸಚಿವಾಕಾಂಕ್ಷಿಗಳು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ನಾಳೆಯ ಭೇಟಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಮತ್ತಿತರರನ್ನು ಭೇಟಿ ಮಾಡಿ ಮಾತುಕತೆ ನಡೆಸುವರು.

ಈ ಬಾರಿಯ ದೆಹಲಿ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರದ ಕೆಲವು ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳಿಗೆ ಅನುಮತಿ ನೀಡಬೇಕೆಂದು ಮನವಿ ಮಾಡುವರು. ಅದರಲ್ಲೂ ಪ್ರಮುಖವಾಗಿ ಮೇಕೆದಾಟು, ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಅನುಮತಿ ಕೊಡುವಂತೆ ಪ್ರಧಾನಿ ಹಾಗೂ ಸಂಬಂಧಪಟ್ಟ ಸಚಿವರ ಬಳಿ ಮನವಿ ಪತ್ರ ಸಲ್ಲಿಸಲಿದ್ದಾರೆ.

ಕಳೆದ ಬಾರಿ ದೆಹಲಿಗೆ ತೆರಳಿದ ಸಂದರ್ಭದಲ್ಲೇ ಸಂಬಂಧಪಟ್ಟ ಇಲಾಖೆಯ ಸಚಿವರನ್ನು ಭೇಟಿ ಮಾಡಿ ರಾಜ್ಯದ ನಿಲುವನ್ನು ತಿಳಿಸಿದ್ದರು. ಇದೀಗ ಪುನಃ ಮತ್ತೆ ಕೆಲವರನ್ನು ಭೇಟಿಯಾಗಲಿರುವ ಸಿಎಂ ರಾಜ್ಯಕ್ಕೆ ಅಗತ್ಯವಿರುವ ಯೋಜನೆಗಳಿಗೆ ಸಮ್ಮತಿ ಪಡೆಯುವ ಸಂಭವವಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿರುವ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಚರ್ಚೆ ನಡೆಸುವರು. ಖಾಲಿ ಇರುವ ಸ್ಥಾನಗಳಿಗೆ ಆಕಾಂಕ್ಷಿಗಳಿಂದ ಲಾಬಿ ಹೆಚ್ಚಾಗುತ್ತಿರುವ ಕಾರಣ ಅಧಿವೇಶನದೊಳಗೆ ಇಲ್ಲವೇ ಮುಂದಿನ ತಿಂಗಳು ಭರ್ತಿ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಇದರ ಜತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ನೇಮಕಗೊಂಡಿದ್ದ ನಿಗಮಮಂಡಳಿ ಅಧ್ಯಕ್ಷರನ್ನು ಬದಲಾವಣೆ ಮಾಡುವ ಬಗ್ಗೆಯೂ ಚರ್ಚೆ ಮಾಡಲಿದ್ದಾರೆ. ಈಗಾಗಲೇ ನೇಮಕಗೊಂಡಿರುವ ಅಧ್ಯಕ್ಷರನ್ನು ಬದಲಾಯಿಸಿ ಹೊಸದಾಗಿ ನೇಮಕ ಮಾಡಬೇಕೆಂದು ಮೂಲ ಬಿಜೆಪಿಗರು ಪಟ್ಟು ಹಿಡಿದಿದ್ದಾರೆ.

ನಡ್ಡಾ ಅವರ ಜತೆ ಈ ಸಂಬಂಧ ಚರ್ಚಿಸಲಿರುವ ಬಸವರಾಜ ಬೊಮ್ಮಾಯಿ ಅವರು, ಒಪ್ಪಿಗೆ ನೀಡಿದರೆ ನಿಗಮ ಮಂಡಳಿಗಳಿಗೆ ಹೊಸದಾಗಿ ನೇಮಕ ಮಾಡುವ ಸಂಭವವಿದೆ. ಕಳೆದ ಬಾರಿಗಿಂತ ಈ ಬಾರಿಯ ಮುಖ್ಯಮಂತ್ರಿಗಳ ದೆಹಲಿ ಪ್ರವಾಸ ಬಿಜೆಪಿ ಪಾಳಯದಲ್ಲಿ ಗರಿಗೆದರುವಂತೆ ಮಾಡಿದೆ.

Facebook Comments