ಉಪಚುನಾವಣೆ ಪ್ರಚಾರದ ಅಖಾಡಕ್ಕೆ ಎಂಟ್ರಿ ಕೊಡಲು ಸಿಎಂ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.29-ಉಪಚುನಾವಣೆ ಪ್ರಚಾರದ ಅಖಾಡಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವೇಶಿಸಲು ಸಿದ್ಧತೆ ನಡೆಸಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಮುಗಿಯುತ್ತಿದ್ದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಏಪ್ರಿಲ್ 17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮತದಾನ ನಡೆಯಲಿದ್ದು, ಮೂರು ಕ್ಷೇತ್ರಗಳಲ್ಲಿ ಎರಡೆರಡು ದಿನ ಸಿಎಂ ಪ್ರಚಾರ ಮಾಡಲಿದ್ದಾರೆ.

ನಿಯೋಜಿತ ದಿನಾಂಕದಂದು ಸಮಾವೇಶಗಳನ್ನು ನಡೆಸಲು ಆಯೋಜನೆ ಮಾಡಲಾಗುತ್ತಿದೆ. ಬಹಿರಂಗ ಪ್ರಚಾರ, ಮೆರವಣಿಗೆ ಮೂಲಕ ಬಿಎಸ್‍ವೈ ತಮ್ಮ ಅಭ್ಯರ್ಥಿಗಳ ಪರ ಮತ ಬೇಟೆಯಾಡಲಿದ್ದಾರೆ. ಪ್ರತಿಷ್ಠೆಯ ಕಣವಾಗಿರುವ ಉಪಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಸುಲಭದಲ್ಲಿ ಗೆಲುವು ಸಿಕ್ಕುವುದಿಲ್ಲ ಎನ್ನುವುದು ಆಡಳಿತಾರೂಢ ಪಕ್ಷಕ್ಕೆ ಮನವರಿಕೆಯಾಗಿರುವ ಕಾರಣ ಇಡೀ ಸಂಪುಟವನ್ನೇ ಉಪ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.

ಸದ್ಯ ನಾಮಪತ್ರ ಸಲ್ಲಿಕೆ ಕಾರ್ಯ ಬಾಕಿ ಇದ್ದು, ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬಿಜೆಪಿಯಿಂದ ಅಬ್ಬರದ ಚುನಾವಣಾ ಪ್ರಚಾರ ನಡೆಯಲಿದೆ. ಪಂಚರಾಜ್ಯ ಚುನಾವಣೆ ಹಿನ್ನೆಲೆ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳಕ್ಕೆ ತೆರಳಿರುವ ಬಿಜೆಪಿ ನಾಯಕರು, ಸಚಿವರು ವಾಪಸ್ಸಾಗಲಿದ್ದು, ಏಪ್ರಿಲ್ ಮೊದಲ ದಿನದಿಂದಲೇ ಪ್ರಚಾರ ಕಾರ್ಯಕ್ಕೆ ಧುಮುಕಲಿದ್ದಾರೆ.

ಒಟ್ಟಿನಲ್ಲಿ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಪಕ್ಷ ಜಯಕ್ಕಾಗಿ ತಂತ್ರಗಾರಿಕೆ ನಡೆಸುತ್ತಿದೆ. ಆದರೆ ಮತದಾರರು ಯಾರ ಕಡೆ ವಾಲುತ್ತಾರೆ ಎಂಬುದು ಮಾತ್ರ ಫಲಿತಾಂಶದ ನಂತರ ಗೊತ್ತಾಗಲಿದೆ.

# ನಾಳೆ ನಾಮಪತ್ರ ಸಲ್ಲಿಕೆ:
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರಮಾಜಿ ಸಚಿವ ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳ ಅಂಗಡಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರು, ಸಂಸದರು, ಶಾಸಕರು ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ.

ಶತಾಯಗತಾಯ ಕ್ಷೇತ್ರವನ್ನು ತಮ್ಮ ಬಳಿ ಉಳಿಸಿಕೊಳ್ಳಲೇಬೇಕೆಂದು ರಣತಂತ್ರ ರೂಪಿಸಿರುವ ಬಿಜೆಪಿ ಗೆಲುವಿಗೆ ಎಲ್ಲಾ ಶಕ್ತಿಯನ್ನು ಧಾರೆ ಎರೆಯಲಿದೆ. ನಾಮಪತ್ರ ಪರಿಶೀಲನೆ ಮುಗಿದ ಬಳಿಕ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟವರು ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸಲಿದ್ದಾರೆ. ಸಿಎಂ ಯಡಿಯೂರಪ್ಪ ಸೇರಿದಂತೆ ಮತ್ತಿತರರು ಕೂಡ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

Facebook Comments