ಮುಂದಿನ ವಾರ ಉಪಚುನಾವಣೆ ಪ್ರಚಾರಕ್ಕ ‘ರಾಜಾಹುಲಿ’ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.5- ಬೆಳಗಾವಿ ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಗೆಲ್ಲಲು ಆಡಳಿತಾರೂಢ ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಮುಂದಿನ ವಾರದಿಂದ ಪ್ರಚಾರಕ್ಕೆ ಧುಮ್ಮುಕಲಿದ್ದಾರೆ.  ತಮಿಳುನಾಡು ಹಾಗೂ ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿರುವ ಸಚಿವರು ಹಿಂದಿರುಗಲಿದ್ದು, ಮುಖ್ಯಮಂತ್ರಿ ಜೊತೆ ಪ್ರಚಾರದಲ್ಲಿ ತೊಡಗಲಿದ್ದಾರೆ.

ಈ ಮೂರು ಕ್ಷೇತ್ರಗಳಲ್ಲಿ ಗೆಲ್ಲುವುದು ಬಿಜೆಪಿಗೆ ಮಹತ್ವದ್ದಾಗಿದ್ದು, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳಕ್ಕೆ ತೆರಳಿರುವ ಮುಖಂಡರು, ವಾಪಸ್ಸಾಗಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವಂತೆ ಬಿಜೆಪಿ ಕೇಳಿಕೊಂಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತಿತರ ಸಚಿವರು, ಪಕ್ಷದ ಮುಖಂಡರು ಈ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಯಡಿಯೂರಪ್ಪ ಪ್ರತಿ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ರಸ್ತೆಗಿಳಿದು ಪ್ರಚಾರ ನಡೆಸುವ ನಿರೀಕ್ಷೆಯಿದೆ. 2019ರಲ್ಲಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗಿನಿಂದಲೂ ನಡೆದ 17 ಉಪಚುನಾವಣೆಗಳಲ್ಲಿ 14ರಲ್ಲಿ ಬಿಜೆಪಿ ಗೆಲುವು ಕಂಡಿದೆ.

ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ ನಾರಾಯಣ, ಬಿ. ಸಿ. ಪಾಟೀಲ್ , ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್, ಸುರೇಶ್ ಕುಮಾರ್, ಅರವಿಂದ್ ಲಿಂಬಾವಳಿ ಮತ್ತಿತರರು ಪ್ರಚಾರ ನಡೆಸಲಿದ್ದಾರೆ. ತಮಿಳುನಾಡು, ಕೇರಳ,ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ತೆರಳಿರುವರು ಇಂದು ಸಂಜೆ ನಗರಕ್ಕೆ ವಾಪಸ್ಸಾಗುವ ಸಾಧ್ಯತೆಯಿದೆ ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ನಾಲ್ಕರಿಂದ ಐದು ಗ್ರಾಮ ಪಂಚಾಯಿತಿ ಅಥವಾ ಹೋಬಳಿಗಳಲ್ಲಿ ಪ್ರಚಾರ ನಡೆಸುವಂತೆ ಸಚಿವರಿಗೆ ಹೇಳಲಾಗಿದೆ. ಮುಂದಿನ ವಾರ ಬಿಸಿ ಪಾಟೀಲ್, ಸೋಮಶೇಖರ್, ಮತ್ತು ಬೈರತಿ ಬಸವರಾಜ್ ಮೂರು ದಿನ ಮಸ್ಕಿಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕಳೆದ 20 ದಿನಗಳಿಂದ ಕೇರಳದಲ್ಲಿರುವ ಡಾ. ಸಿ. ಎನ್. ಅಶ್ವತ್ ನಾರಾಯಣ, ಇಂದು ಬೆಂಗಳೂರಿಗೆ ವಾಪಸ್ಸಾಗಲಿದ್ದು, ಮುಂದಿನ ವಾರ ಮುಖ್ಯಮಂತ್ರಿ ಜೊತೆಗೆ ಪ್ರಚಾರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

Facebook Comments