ಬಿಎಸ್‍ವೈ ರಾಜೀನಾಮೆ ವದಂತಿ..! ಕುರ್ಚಿಯಿಂದ ಕೆಳಗಿಳಿಯಲು ನಿಗದಿಯಾಯ್ತಾ ಮಹೂರ್ತ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.17- ಮಹತ್ವದ ಬೆಳವಣಿಗೆ ಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡಲು ಕೇಂದ್ರ ವರಿಷ್ಠರು ಸೂಚನೆ ನೀಡಿದ್ದಾರೆ ಎಂಬ ವದಂತಿಗಳು ಹರಿದಾಡಿವೆ. ಆದರೆ ಇದನ್ನು ನಿರಾಕರಿಸಿರುವ ಯಡಿಯೂರಪ್ಪ, ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಕೊಟ್ಟಿದ್ದರೆ ಕದ್ದುಮುಚ್ಚಿ ಕೊಡುವುದಿಲ್ಲ. ಎಲ್ಲವನ್ನೂ ಮಾಧ್ಯಮದವರ ಮುಂದೆ ಬಹಿರಂಗಪಡಿಸುತ್ತೇನೆ ಎಂದು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಮ್ಮನ್ನು ಭೇಟಿ ಯಾದ ಸಂದರ್ಭದಲ್ಲಿ ರಾಜೀನಾಮೆ  ನೀಡುವಂತೆ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದಾರೆ ಎಂಬ ವದಂತಿ ಬಲವಾಗಿ ಕೇಳಿಬರುತ್ತಿದೆ. ಕೊನೆ ಕ್ಷಣದಲ್ಲಿ ಕುರ್ಚಿಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಯಡಿಯೂರಪ್ಪ ಕನಿಷ್ಟ ಪಕ್ಷ ಒಂದು ತಿಂಗಳಾದರೂ ಅವಕಾಶ ಕೊಡಬೇಕೆಂದು ರಾಷ್ಟ್ರೀಯ ನಾಯಕರ ಮುಂದೆ ಮನವಿ ಮಾಡಿದ್ದಾರೆ.

ಇದನ್ನು ನಯವಾಗಿ ತಿರಸ್ಕರಿಸಿರುವ ವರಿಷ್ಠರು ಗೌರವಯುತವಾಗಿ ರಾಜೀನಾಮೆ ನೀಡಬೇಕು. ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಬಲಾಬಲ ಪ್ರದರ್ಶನ ನಡೆಸದೆ ಬೇರೊಬ್ಬರಿಗೆ ಸ್ಥಾನ ಬಿಟ್ಟುಕೊಡಬೇಕೆಂದು ಸೂಚಿಸಿರುವುದಾಗಿ ತಿಳಿದುಬಂದಿದೆ. ಯಡಿಯೂರಪ್ಪ ಅವರು ಮತ್ತೆ ನಾನು ಆಗಸ್ಟ್‍ನಲ್ಲಿ ದೆಹಲಿಗೆ ಬರುತ್ತೇನೆ ಎಂದು ಹೇಳಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಮೂಲಗಳ ಪ್ರಕಾರ ಜು.26ರೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವರಿಷ್ಠರು ಬಿಎಸ್‍ವೈಗೆ ನಿರ್ದೇಶಿಸಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗಲೇ ಸಿಎಂಗೆ ಈ ಸೂಚನೆ ನೀಡಲಾಗಿತ್ತು. ನೀವು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ. ಅರ್ಹತೆಗೆ ತಕ್ಕಂತೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಮೋದಿ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜೆ.ಪಿ.ನಡ್ಡಾ ಬಳಿ ಚರ್ಚಿಸುವ ಸಂದರ್ಭದಲ್ಲಿ ಕಡೆ ಪಕ್ಷ ನನಗೆ ಒಂದು ತಿಂಗಳಾದರೂ ಅವಕಾಶ ಕೊಡಿ. ಪಕ್ಷದ ಸೂಚನೆಯಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಬಿಎಸ್‍ವೈ ಕೇಳಿರುವುದಾಗಿ ತಿಳಿದುಬಂದಿದೆ. ಯಡಿಯೂರಪ್ಪನವರ ಅಧಿಕೃತ ಪ್ರವಾಸದ ಪಟ್ಟಿಯಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಇಂದು ಭೇಟಿಯಾಗಬೇಕಿತ್ತು. ನಡ್ಡಾ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ಬಂದು ಬೆಂಗಳೂರಿನತ್ತ ಸಿಎಂ ಹೊರಟ್ಟಿದ್ದರು. ಕೊನೆಕ್ಷಣದಲ್ಲಿ ಅವರಿಗೆ ಬುಲಾವ್ ನೀಡಲಾಯಿತು.

ಉತ್ತರಾಖಂಡ್‍ನಂತೆ ಕರ್ನಾಟಕದಲ್ಲೂ ನಾಯಕತ್ವ ಬದಲಾವಣೆ ಮಾಡಲು ವರಿಷ್ಠರು ಮುಂದಾಗಿದ್ದಾರೆ. ಜು.26ರೊಳಗೆ ಬಿಎಸ್‍ವೈ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಹೊಸ ನಾಯಕತ್ವದತ್ತ ದೆಹಲಿ ವರಿಷ್ಠರು ಚಿತ್ತ ಹರಿಸಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ಖಚಿತಪಡಿಸಿವೆ. ಆದರೆ ಇದಾವುದೇ ಗುಟ್ಟನ್ನು ರಟ್ಟು ಮಾಡದೆ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ದೆಹಲಿ ಪ್ರವಾಸ ಯಶಸ್ವಿಯಾಗಿದೆ ಎಂದು ಮಾಧ್ಯಮಗಳ ಮುಂದೆ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಯಡಿಯೂರಪ್ಪ ಕೂಡ ದೆಹಲಿಗೆ ಬಂದ ನಂತರ ನಾಯಕರನ್ನು ಭೇಟಿಯಾದಾಗ ಅವರ ಮುಖದ ಭಾವ ನಗುಮುಖದಿಂದಲೇ ಇತ್ತು. ಒಂದು ವೇಳೆ ವರಿಷ್ಠರು ರಾಜೀನಾಮೆ ನೀಡಲು ಸೂಚಿಸಿದ್ದರೆ ಹಠಮಾರಿ ಸ್ವಭಾವದ ಯಡಿಯೂರಪ್ಪ ಸುಮ್ಮನಿರುತ್ತಿದ್ದರೇ..? ಒಟ್ಟಿನಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ಕುರ್ಚಿ ಗೊಂದಲಗಳು ಮುಂದುವರೆದಿದ್ದು, ಯಡಿಯೂರಪ್ಪ ಕುರ್ಚಿ ಗಟ್ಟಿಯೇ ಇಲ್ಲವೇ ಅಭದ್ರವೇ ಎಂಬುದನ್ನು ಕಾಲವೇ ತಿಳಿಸಲಿದೆ.

Facebook Comments