ಬಿಎಸ್ವೈ ಆರೋಗ್ಯ ಸ್ಥಿರ, ಶೀಘ್ರ ಗುಣಮುಖರಾಗುವಂತೆ ಗಣ್ಯರ ಹಾರೈಕೆ, ಸಂಪರ್ಕದಲ್ಲಿದ್ದ ಸಚಿವರಿಗೆ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3- ಕೊರೊನಾ ಪಾಸಿಟಿವ್ ಕಂಡು ಬಂದ ಕಾರಣ ಮಣಿಪಾಲ್ ಅಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ನುರಿತ ತಜ್ಞರ ತಂಡ ಯಡಿಯೂರಪ್ಪನವರಿಗೆ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗಿಲ್ಲ. ಈಗಲೂ ಅವರು ಸದೃಡವಾಗಿದ್ದಾರೆಂದು ಮಣಿಪಾಲ್ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಯಡಿಯೂರಪ್ಪ ಆರೋಗ್ಯ ಕುರಿತಂತೆ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದು, ಯಡಿಯೂರಪ್ಪ ಅವರು ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ನಮ್ಮ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯ ಐದನೇ ಮಹಡಿಯಲ್ಲಿರುವ ವಿಶೇಷ ಘಟಕದಲ್ಲಿ ಮುಖ್ಯಮಂತ್ರಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕ ಪಡುವ ಆಗತ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಹಗಲುರಾತ್ರಿ ಶ್ರಮಿಸುತ್ತಿದ್ದ ಯಡಿಯೂರಪ್ಪ ಅವರು ಪ್ರತಿನಿತ್ಯ ಅನೇಕ ಸಚಿವರು, ಅಧಿಕಾರಿಗಳು, ವೈದ್ಯರು, ಖಾಸಗಿ ಆಶ್ಪತ್ರೆಗಳು ಸೇರಿದಂತೆ ಇತರೆ ಪ್ರಮುಖರೊಂದಿಗೆ ಸಭೆಗಳಲ್ಲಿ ಭಾಗವಹಿಸುತ್ತಿದ್ದ ಕಾರಣ ಪ್ರತಿ ವಾರವೂ ಅವರಿಗೆ ಕೊರೋನಾ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಅವರಿಗೆ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಯಡಿಯೂರಪ್ಪ ಅವರು ಕೋವಿಡ್ ಸೋಂಕಿಗೆ ಒಳಗಾದ ದೇಶದ 2ನೇ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪಾಟಿಸಿವ್ ಬಂದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.

ಕಳೆದ ಎರಡು ದಿನಗಳ ಹಿಂದೆ ಕೊರೋನಾ ಪರೀಕ್ಷೆಗೆ ಒಳಗಾಗಿದ್ದೆ. ಈಗ ಪಾಸಿಟಿವ್ ಬಂದಿದೆ. ಆದರೆ ತಮಗೆ ಯಾವುದೇ ರೋಗ ಲಕ್ಷಣಗಳಲ್ಲಿಲ್ಲ ಆದರೂ ಆಸ್ಪತ್ರೆಗೆ ದಾಖಲಾಗುತ್ತಿರುವುದಾಗಿ ಸಿಎಂ ಹೇಳಿದ್ದಾರೆ.

ಅಲ್ಲದೆ ಕಳೆದ ಎರಡು ದಿನಗಳಿಂದ ಯಾವುದೆ ಸಭೆ,ಸಮಾರಂಭ ನಡೆಸದಿದ್ದರೂ ಜುಲೈ 31ರಂದು ಕಸ್ತೂರಿ ರಂಗನ್ ಅವರನ್ನು ಭೇಟಿ ಮಾಡಿದ್ದರು. ಜೊತೆಗೆ ಅಂದು ಸಂಜೆ ತಮ್ಮ ನಿವಾಸದಲ್ಲಿ ಕೆಲವು ಸಚಿವರು, ಶಾಸಕರ ಜೊತೆ ಸಭೆ ನಡೆಸಿದ್ದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ತಂದೆ ಕೂಡ ಮಣಿಪಾಲ್ ಆಸ್ಪತ್ರೆಯಲ್ಲೇ ದಾಖಲಾಗಿ, ಬೇಗ ಗುಣಮುಖರಾಗಿದ್ದರಿಂದ ಅವರ ಸಲಹೆಯ ಮೇರೆಗೆ ಸಿಎಂ ಯಡಿಯೂರಪ್ಪನವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಎಂ ಆರೋಗ್ಯದ ಸ್ಥಿತಿಗತಿ ಬಗ್ಗೆ ಪ್ರತಿ 2 ಗಂಟೆಗಳಿಗೊಮ್ಮೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲು ಮಣಿಪಾಲ್ ಆಸ್ಪತ್ರೆ ನಿರ್ಧರಿಸಿದೆ.

ಆಸ್ಪತ್ರೆಗೆ ದಾಖಲಾಗಿರುವ ಯಡಿಯೂರಪ್ಪನವರಿಗೆ ಮನೆಯಿಂದಲೇ ಊಟ, ತಿಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಗ್ಗೆ ಅವರ ಆಪ್ತ ಸಹಾಯಕರು ವೈದ್ಯರ ಸೂಚನೆ ಮೇರೆಗೆ ಇಡ್ಲಿ, ವಡೆ, ದೋಸೆ ಹಾಗೂ ಕಷಾಯವನ್ನು ನೀಡಿದ್ದಾರೆ.

ಯಡಿಯೂರಪ್ಪನವರ ಪುತ್ರರಾದ ಸಂಸದ ರಾಘವೇಂದ್ರ, ವಿಜಯೇಂದ್ರ ಹಾಗೂ ಪುತ್ರಿಯರು ಮತ್ತು ಸಂಬಂಧಿಕರು ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಕ್ಷಣ ಕ್ಷಣಕ್ಕೂ ತಮ್ಮ ತಂದೆಯ ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಹೋಂ ಕ್ವಾರಂಟೈನ್: ಬಿಎಸ್‍ವೈಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ವಿಜಯೇಂದ್ರ, ಪುತ್ರಿಯರಾದ ಅರುಣಾದೇವಿ, ಉಮಾದೇವಿ, ಪದ್ಮಾವತಿ ಸೇರಿದಂತೆ ಕುಟುಂಬದವರು ಒಂದು ವಾರಗಳ ಕಾಲ ಹೋಂ ಕ್ವಾರಂಟೈನ್‍ಗೆ ಒಳಗಾಗಲಿದ್ದಾರೆ.

# ಗಣ್ಯರ ಹಾರೈಕೆ :
ಮುಖ್ಯಮಂತ್ರಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವ ವರದಿ ತಿಳಿಯುತ್ತಿದ್ದಂತೆಯೇ ಹಲವು ಗಣ್ಯರು ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ, ಸಚಿವರಾದ ಡಾ.ಕೆ.ಸುಧಾಕರ್, ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಭೈರತಿ ಬಸವರಾಜ್, ಆರ್.ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರು ಶೀಘ್ರ ಗುಣಮುಖರಾಗಲಿ ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ಹಾರೈಸಿದ್ದಾರೆ.

ಇನ್ನು ರಾಜ್ಯದ ಅನೇಕ ಕಡೆ ಬಿಜೆಪಿ ಕಾರ್ಯಕರ್ತರು ಹಾಗೂ ಯಡಿಯೂರಪ್ಪನವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಶೀಘ್ರ ಗುಣಮುಖರಾಗಲಿ ಎಂದು ಪೂಜೆ, ಹೋಮಹವನ ನಡೆಸಿದ್ದಾರೆ.

# ಬಿಗಿಭದ್ರತೆ:
ಮಣಿಪಾಲ್ ಆಸ್ಪತ್ರೆಯ ಬಳಿ ಭಾರೀ ಪೊಲೀಸ್ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ಯಡಿಯೂರಪ್ಪನವರ ಆರೋಗ್ಯ ವಿಚಾರಿಸಲು ಯಾರೊಬ್ಬರೂ ಆಸ್ಪತ್ರೆ ಬಳಿ ಬಾರದಂತೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಆಸ್ಪತ್ರೆ ಬಳಿ ಮೊಕ್ಕಾಂ ಹೂಡಿದ್ದು, ಭದ್ರತಾ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

Facebook Comments

Sri Raghav

Admin