“ಕೆಲ ರೈತ ಮುಖಂಡರು ಬದುಕಿದ್ದೇವೆಂದು ತೋರಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ”
ಬೆಂಗಳೂರು,ಜ.26-ಕೆಲ ರೈತ ಮುಖಂಡರು ತಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಕೆಲವರಿಗೆ ತಾವು ಏಕೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಯಾವ ಕಾರಣಕ್ಕಾಗಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂಬ ಮಾಹಿತಿಯೂ ಇಲ್ಲ. ರೈತರ ಹೆಸರಿನಲ್ಲಿ ಕೆಲವರು ತಾವು ಬದುಕಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ನಾವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿಲ್ಲ. ರೈತರ ಪ್ರತಿಭಟನೆ ಹತ್ತಿಕ್ಕಿಲ್ಲ. ಟ್ರ್ಯಾಕ್ಟರ್ ಗಳಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಪ್ರತಿಭಟನೆ ಬೇಡ ಎಂದು ಹೇಳಿದ್ದೇವಷ್ಟೇ ಎಂದು ಸಮರ್ಥಿಸಿಕೊಂಡರು.
ನನ್ನ ಮನೆ ಬಾಗಿಲು ಯಾವತ್ತೂ ತೆರೆದೇ ಇರುತ್ತದೆ. ರೈತರು ಯಾವಾಗ ಬೇಕಾದರೂ ಬಂದು ಮಾತುಕತೆ ನಡೆಸಬಹುದು. ಮೊದಲು ನಿಮ್ಮ ಪ್ರತಿಭಟನೆಯನ್ನು ಹಿಂಪಡೆಯಿರಿ ಎಂದು ಸಿಎಂ ಮನವಿ ಮಾಡಿದರು.
# ಸಿದ್ದು-ಬಿಎಸ್ವೈ ಮುಖಾಮುಖಿ:
ನಗರದ ಮೆಜೆಸ್ಟಿಕ್ ಸಮೀಪ ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪರಸ್ಪರ ಎದುರುಗೊಂಡರು.
ಆ ವೇಳೆಗಾಗಲೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿದ್ದರಾಮಯ್ಯನವರು ಸಿಎಂ ಯಡಿಯೂರಪ್ಪ ಬರುತ್ತಿದ್ದಂತೆ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದರು. ನಂತರ ಇಬ್ಬರು ಪರಸ್ಪರ ಕೈ ಮುಗಿದರಲ್ಲದೆ ಕೈ ಹಿಡಿದು ಅಭಿನಂದನೆ ವಿನಿಮಯ ಮಾಡಿಕೊಂಡರು.