ತಿಂಗಳಾಂತ್ಯಕ್ಕೆ ಸಿಎಂ ಕಪ್-2019 ಫುಟ್ಬಾಲ್ ಟೂರ್ನಮೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಜೂ.4- ನಗರದ ಫುಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ಅಖಿಲ ಭಾರತ ಆಹ್ವಾನ ಫುಟ್ಬಾಲ್ ಟೂರ್ನಮೆಂಟ್ ಸಿಎಂ ಕಪ್-2019 ಇದೇ ತಿಂಗಳ ಕೊನೆಯ ವಾರದಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಇಂದಿಲ್ಲಿ ತಿಳಿಸಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರ್‍ಎಂವಿ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಹೊರ ರಾಜ್ಯದ 15 ತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.

ಪಂದ್ಯಾವಳಿಯಲ್ಲಿ 300 ಮಂದಿ ಆಟಗಾರರು ಹಾಗೂ 50ಕ್ಕೂ ಹೆಚ್ಚು ಅಫಿಷಿಯಲ್ಸ್ ಗಳು ಪಾಲ್ಗೊಳ್ಳಲಿದ್ದಾರೆ. ಫುಟ್ಬಾಲ್ ಟೂರ್ನಮೆಂಟ್ ಅನ್ನು ಅಚ್ಚುಕಟ್ಟಾಗಿ ನಡೆಸಲು ಕ್ರೀಡಾಂಗಣವನ್ನು ಹಸಿರು ಹುಲ್ಲು ಹಾಸಿನಿಂದ ಅಲಂಕರಿಸಲಾಗಿದ್ದು, ಟೂರ್ನಮೆಂಟ್‍ಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

15 ದಿನಗಳ ಕಾಲ ಫುಟ್ಬಾಲ್ ಪಂದ್ಯಾವಳಿ ನಡೆಯಲಿದ್ದು, ಫುಟ್ಬಾಲ್ ಅಭಿಮಾನಿಗಳಿಗೆ ರಸ ದೌತಣ ನೀಡಲಿದೆ. ಈ ಹಿಂದೆಯೂ ರಾಜ್ಯ, ವಲಯ, ಜ್ಯೂನಿಯರ್, ರಾಷ್ಟ್ರೀಯ ಚಾಂಪಿಯನ್ ಪಂದ್ಯಾವಳಿಯನ್ನು ಫುಟ್ಬಾಲ್ ಸಂಸ್ಥೆ ಹಮ್ಮಿಕೊಂಡಿತ್ತು. 1985ರಲ್ಲಿ ಮೊದಲ ಟೂರ್ನಮೆಂಟ್ ನಡೆದಿದ್ದು, ಇದೀಗ 34 ವರ್ಷಗಳ ನಂತರ ಮತ್ತೊಮ್ಮೆ ಟೂರ್ನಮೆಂಟ್ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಟೂರ್ನಮೆಂಟ್‍ಗೆ ಸುಮಾರು 50 ಲಕ್ಷ ರೂ. ವೆಚ್ಚವಾಗಲಿದ್ದು, ಸರ್ಕಾರ ದಿಂದ 10 ಲಕ್ಷ ರೂ. ನೆರವು ನೀಡಿದರೆ ಉಳಿದ ಹಣವನ್ನು ಉಳ್ಳವರು, ದಾನಿಗಳು ಸಹಾಯ ಮಾಡಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ಶಿವಕುಮಾರ್, ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಮಾದಪ್ಪ ಮತ್ತಿತರರು ಉಪಸ್ಥಿತರಿದ್ದರು.

Facebook Comments