ದೆಹಲಿಗೆ ನೂತನ ಮುಖ್ಯಮಂತ್ರಿ ನೇಮಕ ಮಾಡಿದ ರಾಷ್ಟ್ರಪತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.15- ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಧಿಕೃತವಾಗಿ ನೇಮಕ ಮಾಡಿದ್ದಾರೆ. ಆರನೆ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಗಳ ಸಲಹೆ ಮೇರೆಗೆ ಇತರೆ ಆರು ಶಾಸಕರನ್ನು ದೆಹಲಿ ಸರ್ಕಾರದ ಸಚಿವರನ್ನಾಗಿ ರಾಷ್ಟ್ರಪತಿಗಳು ಇದೇ ವೇಳೆ ನೇಮಕ ಮಾಡಿದ್ದಾರೆ.

ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೇಜ್ರಿವಾಲ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಅವರನ್ನು ನೇಮಕ ಮಾಡಲು ಸಂತಸವಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಸಿಎಂ ಆಗಿ ಕಾರ್ಯಾರಂಭ ಮಾಡಲಿದ್ದಾರೆ ಎಂದು ರಾಷ್ಟ್ರಪತಿಗಳ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

70 ಕ್ಷೇತ್ರಗಳ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಪ್ 62 ಸ್ಥಾನಗಳಲ್ಲಿ ಗೆದ್ದು ಪ್ರಚಂಡ ಗೆಲುವು ಸಾಧಿಸಿತ್ತು. ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ, ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಈ ವಿಧಾನಸಭೆ ಚುನಾವಣೆಯಲ್ಲೂ ಖಾತೆ ತೆರೆಯುವಲ್ಲಿ ವಿಫಲವಾಗಿ ಶೂನ್ಯ ಸಾಧನೆಯೊಂದಿಗೆ ನಿರಾಸೆ ಅನುಭವಿಸಿತು.

Facebook Comments