ಕೊರೋನಾ ಎಮರ್ಜೆನ್ಸಿ ಮೀಟಿಂಗ್ ನಂತರ ಸಿಎಂ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.16- ಈಗಾಗಲೇ ನೈಟ್ ಕಫ್ರ್ಯೂವನ್ನು ಎಂಟು ನಗರಗಳಲ್ಲಿ ಮುಂದುವರಿಸಲಾಗಿದೆ. ಏಪ್ರಿಲ್ 20ರಂದು ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕಠಿಣ ನಿರ್ಧಾರಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.  ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ತುರ್ತುಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವನ್ನು ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ.

ಈಗಾಗಲೇ ರಾಜ್ಯ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಎಲ್ಲಿಯೂ ಕೂಡ ರೋಗಿಗಳಿಗೆ ಅನಾನುಕೂಲವಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇದರ ನಡುವೆ ಲಸಿಕೆ ಅಭಿಯಾನ ಕೂಡ ಯಶಸ್ವಿಯಾಗಿ ನಡೆಯುತ್ತಿದ್ದು, ಜನತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ರಾತ್ರಿ ಕಫ್ರ್ಯೂ ವಿಧಿಸಲಾಗಿದೆ. ಇದನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸುವ ಸಂಬಂಧ ಏ.20ರಂದು ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು. ಈಗಾಗಲೇ ಜಾರಿ ಮಾಡಿರುವ ಜಿಲ್ಲಾ ಕೇಂದ್ರಗಳಲ್ಲಿ ರಾತ್ರಿ ಕಫ್ರ್ಯೂ ಮುಂದುವರಿಯಲಿದೆ.

ಮಹಾಮಾರಿ ಕೊರೊನಾ ಬೆಂಗಳೂರು ಸೇರಿದಂತೆ ಹಲವೆಡೆ ಮಿತಿಮೀರಿದೆ. ಸೋಂಕು ತೀವ್ರವಾಗಿ ಹೆಚ್ಚುತ್ತಿರುವ ಬಗ್ಗೆ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ. ತಜ್ಞರು ಸಮಿತಿ ಮಾಡಿರುವ ಶಿಫಾರಸು, ಸಲಹೆಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದೆ. ಸೋಂಕು ಹರಡುವಿಕೆ ತಡೆಗೆ ಯಾವ ಯಾವ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆಯೂ ಸಮಗ್ರ ಚರ್ಚೆ ನಡೆಸಲಾಗಿದೆ.

ಸೋಂಕು ಹತೋಟಿಗೆ ಬಾರದಿದ್ದರೆ 20ರಂದು ನಡೆಯುವ ಸಭೆಯಲ್ಲಿ ಮತ್ತೊಮ್ಮೆ ಸಮಗ್ರವಾಗಿ ಚರ್ಚೆ ನಡೆಸಿ ಸೂಕ್ತ ತೀರ್ಮಾನಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.

Facebook Comments