ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ಬೆನ್ನಲ್ಲಿ ಬಿಜೆಪಿಗೆ ಶುರುವಾಯ್ತು ಹೊಸ ತಲೆನೋವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.10- ಭಿನ್ನಮತೀಯರನ್ನು ಮನವೊಲಿಸಲು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೂ ಕೆಲವರು ಸ್ಥಾನ ಅಲಂಕರಿಸಲು ಹಿಂದೇಟು ಹಾಕಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ವಿಶೇಷವಾಗಿ ಶರತ್ ಬಚ್ಚೇಗೌಡ, ನಂದೀಶ್ ರೆಡ್ಡಿ, ಯು.ಬಿ.ಬಣಕಾರ್, ಅಶೋಕ್ ಪೂಜಾರ್, ಬಸವನಗೌಡ ತುರುವಿಹಾಳ ಮತ್ತಿತರರು ನಿಗಮಮಂಡಳಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಹಿಂದೇಟು ಹಾಕಿದ್ದಾರೆ. ಇದು ಉಪಚುನಾವಣೆಯಲ್ಲಿ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಕಳೆದ ರಾತ್ರಿಯಿಂದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯಲು ಮೀನಮೇಷ ಎಣಿಸುತ್ತಿರುವವರ ಜೊತೆ ಮಾತುಕತೆ ನಡೆಸಿದ್ದರಾದರೂ ಸಂಧಾನ ಯಶಸ್ವಿಯಾಗಿಲ್ಲ ಎಂದು ತಿಳಿದುಬಂದಿದೆ. ನೀವು ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧೆವೊಡ್ಡಿದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಿಗಮಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದ್ದು, ಪಕ್ಷದಲ್ಲೂ ಸ್ಥಾನಮಾನ ನೀಡಲಾಗುವುದು.

ಉಪಚುನಾವಣೆ ಪಕ್ಷ ಮತ+್ತು ಸರ್ಕಾರಕ್ಕೆ ಪ್ರತಿಷ್ಠೆಯಾಗಿದ್ದು, ಒಂದೊಂದು ಸ್ಥಾನವೂ ಮುಖ್ಯವಾಗಿರುವುದರಿಂದ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಯೋಚನೆಯನ್ನು ಮಾಡಬೇಡಿ. ನಿಮಗೆ ಸೂಕ್ತ ಸ್ಥಾನಮಾನ ಕೊಟ್ಟ ಮೇಲೂ ಭಿನ್ನಮತ ಸಾರುವುದು ಸರಿಯಲ್ಲ. ನಾವು ಕೊಟ್ಟ ಮಾತಿನಂತೆ ಅನರ್ಹ ಶಾಸಕರಿಗೆ ಟಿಕೆಟ್‍ಕೊಡಲೇಬೇಕು.

ರಾಜೀನಾಮೆ ನೀಡುವ ಮೊದಲು ನಾವು ಅವರಿಗೆ ಮಾತು ಕೊಟ್ಟಿದ್ದೇವೆ. ಈಗ ಮಾತಿಗೆ ತಪ್ಪಿದರೆ ವಚನಭ್ರಷ್ಟ ಆರೋಪಕ್ಕೆ ಸಿಲುಕುತ್ತೇವೆ. ಹೀಗಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ಮನವೊಲಿಸುವ ಕಸರತ್ತು ನಡೆಸಿದ್ದಾರೆ.

ಆದರೆ ಶರತ್ ಬಚ್ಚೇಗೌಡ, ರಾಜು ಕಾಗೆ ಮಾತ್ರ ಸುತಾರಾಂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿಲ್ಲ ಎಂದು ತಿಳಿದುಬಂದಿದೆ. ವಿರೋಧ ಪಕ್ಷದವರ ಮಾತಿಗೆ ಮರಳಾಗಿ ನಿಮ್ಮ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ.

ಇದು ಉಪಚುನಾವಣೆಯಾಗಿರುವುದರಿಂದ ಅನರ್ಹರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಲು ಸಾಧ್ಯವೇ ಇಲ್ಲ. ನಿಗಮಮಂಡಳಿ ಸ್ಥಾನಮಾನ ನೀಡಿದ ಮೇಲೂ ಪಕ್ಷದ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ.

ಸಂಪುಟದಲ್ಲಿ ಕೆಲವರಿಗೆ ಸೂಕ್ತವಾದ ಸ್ಥಾನಮಾನ ಸಿಗದಿದ್ದರೂ ಯಾರೊಬ್ಬರೂ ಅಸಮಾಧಾನಗೊಂಡಿಲ್ಲ. ಪಕ್ಷದ ತೀರ್ಮಾನವನ್ನು ಎಲ್ಲರೂ ಗೌರವಿಸಿದ್ದಾರೆ. ನಿಮಗೆ ಸ್ಥಾನಮಾನ ಕೊಟ್ಟ ಮೇಲೂ ಈ ರೀತಿ ವರ್ತಿಸುವುದು ಎಷ್ಟರಮಟ್ಟಿಗೆ ಸರಿ? ಒಂದು ಹಂತದವರೆಗೂ ನಿಮ್ಮ ವರ್ತನೆಯನ್ನು ಸಹಿಸಿಕೊಳ್ಳಬಹುದು.

ಪಕ್ಷಕ್ಕಿಂತ ಯಾರೊಬ್ಬರೂ ದೊಡ್ಡವರಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಷ್ಟಕ್ಕೂ ನೀವು ಪಕ್ಷದ ವಿರುದ್ಧವಾಗಿ ಸ್ಪರ್ಧೆ ಮಾಡುತ್ತೇನೆಂದರೆ ನಾನೇನು ಮಾಡಲು ಸಾಧ್ಯ ಎಂದು ಭಿನ್ನಮತೀಯರಿಗೆ ಬಿಎಸ್‍ವೈ ಪ್ರಶ್ನೆ ಮಾಡಿದ್ದಾರೆ.

Facebook Comments

Sri Raghav

Admin