SHOCKING : ಸಿಎಂ ಕೈಸೇರಿತು ಮೈತ್ರಿ ಸರ್ಕಾರ ಬೀಳಿಸುವ ಬಿಜೆಪಿ ಆಡಿಯೋ..!

ಈ ಸುದ್ದಿಯನ್ನು ಶೇರ್ ಮಾಡಿ

BJP--congress

ಬೆಂಗಳೂರು, ಡಿ.3-ಬೆಳಗಾವಿ ಅಧಿವೇಶನದ ಒಳಗಡೆ ಸುಮಾರು 25 ಶಾಸಕರನ್ನು ತನ್ನತ್ತ ಸೆಳೆದು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಡೆಸಿದ ಪ್ರಯತ್ನದ ಆಡಿಯೋವೊಂದು ಗುಪ್ತಚರ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಕೈ ಸೇರಿದೆ. ಕಾಂಗ್ರೆಸ್ ಶಾಸಕರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನದ ಜೊತೆಗೆ 20 ರಿಂದ 25 ಕೋಟಿ ರೂ. ಹಣ ನೀಡುತ್ತೇವೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬನ್ನಿ. ಮತ್ತೆ ನಾವೇ ಚುನಾವಣಾ ವೆಚ್ಚ ಭರಿಸಿ ಶಾಸಕರನ್ನಾಗಿ ಮಾಡುತ್ತೇವೆ ಎಂಬ ಆಮಿಷವನ್ನು ಒಡ್ಡಿದ್ದಾರೆ.

ಕಾಂಗ್ರೆಸ್‍ನ 25ಕ್ಕೂ ಹೆಚ್ಚು ಶಾಸಕರನ್ನು ಬಿಜೆಪಿ ಮುಖಂಡರಾದ ಆರ್.ಅಶೋಕ್, ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಿ.ಪಿ.ಯೋಗೇಶ್ವರ್, ಜನಾರ್ಧನ್‍ರೆಡ್ಡಿ, ಶ್ರೀರಾಮುಲು ಹಾಗೂ ಇನ್ನಿತರ ಉದ್ಯಮಿಗಳು ಸೇರಿದಂತೆ ಹಲವರು ಸಂಪರ್ಕಿಸಿದ್ದಾರೆ. ಇದರ ಭಾಗವಾಗಿ ಶ್ರೀರಾಮುಲು ಅವರ ಆಪ್ತ ಸಹಾಯಕ ದುಬೈ ಮೂಲದ ಉದ್ಯಮಿಯೊಬ್ಬರಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿರುವ ಆಡಿಯೋವೊಂದು ಬಹಿರಂಗವಾಗಿದೆ.

ಇದರಲ್ಲಿ ಕಾಂಗ್ರೆಸ್ ಶಾಸಕರ ಹೆಸರುಗಳನ್ನು ಉಲ್ಲೇಖಿಸಿ ಮಾತನಾಡಿರುವುದು, ಅಧಿವೇಶನದೊಳಗಡೆ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇವೆಂದು ಹೇಳಿದ್ದ ಬಿಜೆಪಿಯವರ ಮಾತುಗಳ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಯು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳು ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕತ್ವದ ಗಮನಕ್ಕೆ ತಂದು ಬಿಜೆಪಿಯ ಗೇಮ್ ಪ್ಲ್ಯಾನ್ ಬಗ್ಗೆ ನಿಗಾ ವಹಿಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಹೇಗಾದರೂ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಕಳೆದ ಆರು ತಿಂಗಳಿನಿಂದ ನಿರಂತರ ಪ್ರಯತ್ನ ನಡೆಸುತ್ತಿದೆ. ಯಾವುದೇ ಕಾಂಗ್ರೆಸ್ ಶಾಸಕರು ಬಿಜೆಪಿ ಮುಖಂಡರೊಂದಿಗೆ ಸಂಪರ್ಕದಲ್ಲಿ ಇರದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.

Facebook Comments

Sri Raghav

Admin