ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ತಂತ್ರಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy

ಮೈಸೂರು, ಸೆ.11-ರಾಜ್ಯದಲ್ಲಿ ನೆರೆ, ಬರ ಪರಿಸ್ಥಿತಿ ಉಂಟಾಗಿದ್ದರೂ ಸಹ ಅದರ ಬಗ್ಗೆ ಚಿಂತಿಸದೆ ಬಿಜೆಪಿಯವರು ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಕಲಾಮಂದಿರ ಆವರಣದಲ್ಲಿ ಮೈಸೂರು ನಗರ ಪತ್ರಿಕಾ ಛಾಯಾಗ್ರಾಹಕರ ವತಿಯಿಂದ ಏರ್ಪಡಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮುಂದಾಗಿ ದೆಯೇ ಎಂದು ವರದಿಗಾರರು ಪ್ರಶ್ನಿಸಿದ್ದಕ್ಕೆ ಅವರು ಏನಾದರೂ ಮಾಡಿಕೊಳ್ಳಲಿ. ನಾನು ರಾಜ್ಯದಲ್ಲಿ ನೆರೆ ಸಂತ್ರಸ್ತರಿಗಾಗಿ ಕೈಗೊಳ್ಳಬೇಕಾದ ಕಾರ್ಯತಂತ್ರದ ಬಗ್ಗೆ ಮಾತ್ರ ಚಿಂತಿಸುತ್ತಿದ್ದೇನೆ, ಬಿಜೆಪಿಯವರ ಯಾವ ಕಾರ್ಯತಂತ್ರಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿಯ ಪ್ರಥಮ ವರದಿಯನ್ನು ತರಿಸಿಕೊಳ್ಳಲಾಗಿದೆ. 1197 ಕೋಟಿ ರೂ.ಗಳ ನಷ್ಟದ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. ಪೂರ್ಣ ಪ್ರಮಾಣದ ವರದಿ ಬಂದ ನಂತರ ಮುಂದಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಲು ತಂಡವನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದೆ. ಅದಕ್ಕೆ ಸ್ಪಂದಿಸಿರುವ ಪ್ರಧಾನಿಗಳು ತಂಡವೊಂದನ್ನು ಕಳುಹಿಸುತ್ತಿದ್ದ ತಂಡವು ಸಂಜೆ ವೇಳೆಗೆ ಬೆಂಗಳೂರು ತಲುಪಲಿದೆ. ರಾಜ್ಯದಲ್ಲಿ ಈ ತಂಡವು 2 ದಿನಗಳ ಕಾಲ ಪ್ರವಾಸ ಕೈಗೊಂಡು ವರದಿಯನ್ನು ಪ್ರಧಾನಿಗೆ ಸಲ್ಲಿಸಲಿದೆ ಎಂದು ಹೇಳಿದರು. ಕೊಡಗಿನ ಪ್ರವಾಹದ ವಿವರವನ್ನು ಪ್ರಧಾನಿಗಳಿಗೆ ತಿಳಿಸಿ 8ಸಾವಿರ ಕೋಟಿ ರೂ. ನೀಡುವಂತೆ ಕೋರಿದ್ದೇನೆ. ಅದಕ್ಕೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ತಕ್ಷಣಕ್ಕೆ ಎರಡು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದೇನೆ ಎಂದು ಸಿಎಂ ಹೇಳಿದರು.

ಸಾಹಸ ವೃತ್ತಿ: ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಛಾಯಾಗ್ರಾಹಕ ವೃತ್ತಿ ಒಂದು ಸಾಹಸ ಹಾಗೂ ಅದ್ಭುತ ವೃತ್ತಿಯಾಗಿದೆ. ದೂರದರ್ಶನ ಬರುವ ಮುನ್ನ ಛಾಯಾಗ್ರಾಹಕರು ತಮ್ಮ ಕೌಶಲ್ಯವನ್ನು ಪತ್ರಿಕೆಗಳ ಮೂಲಕ ತೋರುತ್ತಿದ್ದರು ಎಂದು ತಿಳಿಸಿದರು. ಪತ್ರಿಕೆಗಳಲ್ಲಿ ಬರುವ ನೂರಾರು ಸಾಲುಗಳನ್ನು ಛಾಯಾಗ್ರಾಹಕ ತೆಗೆದ ಒಂದು ಫೋಟೋ ಅಷ್ಟನ್ನೂ ಹೇಳುತ್ತದೆ. ಛಾಯಾಗ್ರಾಹಕ ಕೂಡ ಭಾವನಾತ್ಮಕ ಜೀವಿ. ಹಲವಾರು ಮಂದಿ ಪತ್ರಕರ್ತರು, ಛಾಯಾಗ್ರಾಹಕರು ಕೆಲಸ ನಿರ್ವಹಿಸುತ್ತಿದ್ದಾರೆ. ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಆ ಸಮಿತಿ ಹಲವು ನೀತಿ ನಿಮಯಗಳನ್ನು ರೂಪಿಸಿದೆ. ಅದರಲ್ಲಿ ಕೆಲವು ನ್ಯೂನ್ಯತೆಗಳಿವೆ ಎಂಬುದನ್ನು ನನ್ನ ಗಮನಕ್ಕೆ ತಂದಿದ್ದೀರಿ. ಅದನ್ನು ಬದಲಾವಣೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ಸಮಾರಂಭದಲ್ಲಿ ಪತ್ರಿಕಾ ಛಾಯಾಗ್ರಾಹಕ ಪ್ರಗತಿ ಗೋಪಾಲಕೃಷ್ಣ ಅವರನ್ನು ಸಿಎಂ ಸನ್ಮಾನಿಸಿದರು. ಸಚಿವರುಗಳಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಪತ್ರಕರ್ತ ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Facebook Comments

Sri Raghav

Admin