“ಅನಾಥ ಮಕ್ಕಳು ಪರಿಚಯ ಮಾಡಿಕೊಂಡಂತಿದೆ” : ನೂತನ ಸಚಿವರಿಗೆ ಇಬ್ರಾಹಿಂ ಲೇವಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14- ಅನಾಥ ಮಕ್ಕಳು ಎದ್ದು ನಿಂತು ತಮ್ಮನ್ನು ತಾವು ಪರಿಚಯ ಮಾಡಿಕೊಂಡಂತಿದೆ ಎಂದು ಕಾಂಗ್ರೆಸ್‍ನ ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ ನೂತನ ಸಚಿವರನ್ನು ಲೇವಡಿ ಮಾಡಿದರು. ಕಲಾಪ ಆರಂಭವಾಗುತ್ತಿದ್ದಂತೆ ಸದನಕ್ಕೆ ಹಾಜರಾದ ಸಚಿವರು ತಮ್ಮ ಪರಿಚಯ ಮಾಡಿಕೊಳ್ಳುವಂತೆ ಸಭಾಪತಿ ಬಸವ ರಾಜ ಹೊರಟ್ಟಿ ಸೂಚಿಸಿದರು.

ಆಗ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡರು, ಬೈರತಿ ಬಸವರಾಜ್, ನಾರಾಯಣಗೌಡ, ಬಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಎಂ.ಟಿ.ಬಿ.ನಾಗರಾಜ್ ಮತ್ತು ಹಾಲಪ್ಪ ಆಚಾರ್ ತಮ್ಮ ಪರಿಚಯ ಮಾಡಿಕೊಂಡರು. ಆಗ ಸಿ.ಎಂ.ಇಬ್ರಾಹಿಂ ಅವರು, ಮುಖ್ಯಮಂತ್ರಿಗಳು ಅಥವಾ ಸಭಾನಾಯಕರು ನೂತನ ಸಚಿವರನ್ನು ಪರಿಚಯಿಸಬೇಕು. ಇಲ್ಲಿಗೆ ಮುಖ್ಯಮಂತ್ರಿಗಳು ಬಂದಿಲ್ಲ, ಸಭಾನಾಯಕರು ಇಲ್ಲ.

ಸಚಿವರು ಪಾಪ ತಮ್ಮಷ್ಟಕ್ಕೆ ತಾವೇ ಪರಿಚಯಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದು ಅನಾಥ ಮಕ್ಕಳು ತಮ್ಮನ್ನು ತಾವು ಪರಿಚಯಿಸಿಕೊಂಡಂತಾಗಿದೆ ಎಂದರು. ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸಚಿವರ ಸ್ವಯಂ ಪರಿಚಯ ಒಳ್ಳೆಯ ಸಂಪ್ರದಾಯವಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದರು.

ಹೊಸ ಸಚಿವರನ್ನು ಪರಿಚಯಿಸದಿದ್ದರೆ, ಸದನದಲ್ಲಿ ಇರುವ ಸಚಿವರು ಯಾರು ಎಂಬ ಆಕ್ಷೇಪ ವ್ಯಕ್ತ ಪಡಿಸುತ್ತೀರಾ. ಅದಕ್ಕಾಗಿ ನಾನೇ ಪರಿಚಯಿಸಿಕೊಳ್ಳಲು ಸಲಹೆ ನೀಡಿದ್ದೆ ಎಂದು ಸಭಾಪತಿ ಹೇಳಿದರು. ಒಂದು ವೇಳೆ ನಿಮಗೆ ಸಮಧಾನವಾಗದಿದ್ದರೆ ಸಭಾನಾಯಕರು ಬಂದ ಮೇಲೆ ಮತ್ತೊಮ್ಮೆ ಪರಿಚಯ ಮಾಡಿಕೊಡುತ್ತೇವೆ ಎಂದು ಹೇಳಿದರು.

Facebook Comments