“ಹೈಕಮಾಂಡ್‍ಗೆ ಯಡಿಯೂರಪ್ಪ ಒಲ್ಲದ ಗಂಡ”

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ :  ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಒಲ್ಲದ ಗಂಡನಂತಾಗಿದ್ದಾರೆ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ಯಡಿಯೂರಪ್ಪನವರಿಗೂ ಬೆಂಬಲ ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಠಿಯಿಂದ ಭಾರೀ ಅನಾಹುತ ಸಂಭವಿಸಿದೆ. ಪ್ರವಾಹದಿಂದ ಕೆಟ್ಟ ಪರಿಸ್ಥಿತಿಯನ್ನು ಉಂಟು ಮಾಡಿದೆ. ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಲು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಕೇಂದ್ರ ಸರ್ಕಾರ ಪರಿಹಾರವನ್ನು ಕೊಟ್ಟಿಲ್ಲ.

ಪ್ರಧಾನಿ ಭೇಟಿಗೆ ಮುಖ್ಯಮಂತ್ರಿ ಬಿಎಸ್‍ವೈ ಅವರಿಗೆ ಅವಕಾಶವನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದರು. ಎಲ್ಲರೂ ಉಪಚುನಾವಣೆ ಕಡೆ ಗಮನ ಹರಿಸುತ್ತಿದ್ದಾರೆ. ಸಂಕಷ್ಟದಲ್ಲಿರುವವರನ್ನು ಕಡೆಗಣಿಸುತ್ತಿದ್ದಾರೆ ಎಂದು ಹೇಳಿದರು. ಮನ್ ಕಿ ಬಾತ್‍ನಲ್ಲಿ ಪ್ರಧಾನಿಯವರು ರಾಜ್ಯದ ನೆರೆ ಮತ್ತು ಬರದ ಬಗ್ಗೆ ಮಾತನಾಡಬೇಕಿತ್ತು. ಆದರೆ ಅವರು ಈ ಬಗ್ಗೆ ಚಕಾರವೆತ್ತಿಲ್ಲ ಎಂದರು.

ಮುಂದಿನ ಜನವರಿಯಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಎಂದು ಭವಿಷ್ಯ ನುಡಿದರು. ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಾರೋ ಇಲ್ಲವೋ ಎಂಬುದನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಹೇಳಲಿ.

ಬ್ಯಾಂಕ್‍ಗಳು ದಿವಾಳಿಯಾಗಿ ಹಾನಿಯಾಗಿದೆ. ರೂಪಾಯಿ ಮೌಲ್ಯ ಕುಸಿದಿದೆ. ದೇಶ ವಿನಾಶಕ್ಕೆ ಹೋಗುವ ಸೂಚನೆ ಕಂಡುಬರುತ್ತಿದೆ. ಕೃಷಿ ಕೈಗಾರಿಕೆ ಸೇರಿದಂತೆ ಇತರೆ ಉದ್ಯಮ ನೆಲ ಕಚ್ಚಿವೆ. ಅರ್ಥ ಮಂತ್ರಿ ನಿರ್ಮಲಾ ಸೀತಾರಾಮನ್ ಈ ಕುರಿತು ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ದೇಶದ ಆಂತರಿಕ ಪರಿಸ್ಥಿತಿ ಬಗ್ಗೆ ಯೋಚಿಸಬೇಕಿದೆ.

ದೀಪಾವಳಿಯಲ್ಲಿ ಕ್ರೆಡಿಟ್ ಕಾರ್ಡಾಯ ನಮಃ, ಡಿಜಿಟಲಾಯ ನಮಃ, ಜಿಎಸ್ಟಿಯಾಯ ನಮಃ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು. ಬೇರೆ ಪಕ್ಷದವರನ್ನು ಬಿಜೆಪಿಗೆ ಕರೆ ತರುವುದು ಹೇಗೆ, ಬಾರದವರನ್ನು ಜೈಲಿಗೆ ಹಾಕೋದು ಹೇಗೆ ಎಂದು ಬಿಜೆಪಿ ಚಿಂತಿಸುತ್ತಿದೆ.

ಡಿಕೆಶಿ ಜಾಮೀನಿನ ಮೇಲೆ ಬಿಡುಗಡೆ ಬಳಿಕ ಬೃಹತ್ ಮೆರವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಭಿಮಾನಿಗಳು ಪ್ರೀತಿ ತೋರಿದ್ದಾರೆ ಎಂದರು. ಉಪ ಚುನಾವಣೆ ಬಳಿಕ ಸರ್ಕಾರ ಬೀಳಬಾರದು. ಸರ್ಕಾರ ಬೀಳಿಸೋದು ಬಿಡುವುದು ನನ್ನ ಕೈಲಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರ ಗಾಡಿ ಎತ್ತ ಹೋಗುತ್ತದೆ ನೋಡೋಣ ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗಲ್ಲಾ. ತಂದೆ ತಾಯಿ ಒಪ್ಪಿಗೆ ಇಲ್ಲದ ಯುವತಿ ಲವ್ ಮ್ಯಾರೇಜ್ ಮಾಡಿಕೊಂಡ ಸ್ಥಿತಿ ಅನರ್ಹ ಶಾಸಕರದ್ದಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin