ಅಮೆರಿಕದಲ್ಲಿರುವ ಕನ್ನಡಿಗರ ನೆರವಿಗೆ ನಿಂತ ಅಕ್ಕ, ಸಿಎಂ ಜೊತೆ ಸಂವಾದ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಏ.12-ಡೆಡ್ಲಿ ಕೊರೊನಾ ವೈರಸ್ ದಾಳಿಯಿಂದ ಅಮೆರಿಕ ಕಂಗಲಾಗಿದ್ದು, ಅಲ್ಲಿನ ವಿವಿಧ ನಗರಗಳಲ್ಲಿ ಇರುವ ಕನ್ನಡಿಗರ ನೆರವಿಗಾಗಿ ಹೆಸರಾಂತ ಸಂಸ್ಥೆ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಮುಂದಾಗಿದೆ. ಕೋವಿಡ್-19 ಸೋಂಕು ವ್ಯಾಪನೆಯಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ಅಮೆರಿಕ ಕನ್ನಡಿಗರ ಅನುಕೂಲಕ್ಕಾಗಿ ಅಕ್ಕ ಸಂಸ್ಥೆಯು ಇಮಿಗ್ರೇಷನ್ ವೆಬ್ನಾರ್ (ವೆಬ್ ಮೂಲಕ ವಲಸಿಗರೊಂದಿಗೆ ಸಂವಾದ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದೆ.

ವಾಷಿಂಗ್ಟನ್, ನ್ಯೂಯಾರ್ಕ್ ಸೇರಿದಂತೆ ಅಮೆರಿಕದ ವಿವಿಧ ನಗರಗಳು ಮತ್ತು ರಾಜ್ಯಗಳಲ್ಲಿರುವ ಲಕ್ಷಾಂತರ ಕನ್ನಡಿಗರು ತಮ್ಮ ವಲಸೆ ಸ್ಥಿತಿಗತಿ ಮತ್ತು ಪ್ರವಾಸ ಪರಿಸ್ಥಿತಿ ಕುರಿತು ಗೊಂದಲಕ್ಕೆ ಒಳಗಾಗಿದ್ದಾರೆ. ಅವರ ಗೊಂದಲ, ಅನುಮಾನ ಮತ್ತು ಅಗಾಗ ಕೇಳಲ್ಪಡುವ ಪ್ರಶ್ನೆಗಳು (ಎಫ್‍ಎಕ್ಯೂ) ಮತ್ತಿತರ ವಿಷಯಗಳಿಗೆ ಸಂಬಂಧಪಟ್ಟಂತೆ ಅಮೆರಿಕ ಕನ್ನಡಿಗರು ಅಕ್ಕ ಸಂಸ್ಥೆಯಿಂದ ಅತ್ಯಂತ ಮಹತ್ವದ ಮಾಹಿತಿ ಮತ್ತು ಸಲಹೆ-ಮಾರ್ಗದರ್ಶಗಳನ್ನು ಪಡೆದಿದ್ದಾರೆ.

ಅಕ್ಕ ಸಂಸ್ಥೆಯ ರೂವಾರಿ ಮತ್ತು ಲಾ ಅಟಾರ್ನಿ ಆಗಿರುವ ಅಮರನಾಥ್ ಗೌಡ ಅವರು ಈ ವೆಬ್ನಾರ್ ಮೂಲಕ ಅನೇಕಾನೇಕ ಕನ್ನಡಿಗರಿಗೆ ವಲಸೆ ವಿಷಯಗಳಿಗೆ ಸಂಬಂಧಪಟ್ಟ ಪ್ರಶ್ನೆಗಳು ಮತ್ತು ಅನುಮಾನಗಳಿಗೆ ಉತ್ತರಗಳನ್ನು ನೀಡಿ ನೆರವಾಗಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದ ಅಮೆರಿಕದ 50 ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿರುವ ಕನ್ನಡಿಗರ ಹಿತರಕ್ಷಣೆಗೆ ಅಕ್ಕ ಸದಾ ಸಿದ್ಧ.

ಕನ್ನಡಗರು ಯಾವುದೇ ಕಾರಣಕ್ಕೂ ಆತಂಕ ಮತ್ತು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಅವರ ಹಿತಾಸಕ್ತಿ ರಕ್ಷಿಸಲು ಮತ್ತು ಕರ್ನಾಟಕದಲ್ಲಿರುವ ಅವರ ಕುಟುಂಬದವರೊಂದಿಗೆ ಸಂಪರ್ಕ ಹೊಂದಲು ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಅಮರನಾಥ್ ಗೌಡರು ಅಭಯ ನೀಡಿದ್ದಾರೆ.

# ಏನಿದು ವೆಬ್ನಾರ್ ?
ವಿಶ್ವವ್ಯಾಪಿ ವೆಬ್ (ಡಬ್ಲ್ಯುಡಬ್ಲ್ಯುಡಬ್ಲ್ಯು) ಮೂಲಕ ಎಲ್ಲರನ್ನು ಸಂಪರ್ಕಿಸಿ ಸಂವಾದ ಸಮಾವೇಶ ನಡೆಸುವ ಸಂವಹನವೇ ವೆಬ್ನಾರ್. ಇದು ಸಾಮಾನ್ಯವಾಗಿ ನೇರ ಸಂವಾದ, ಪ್ರಾತ್ಯಕ್ಷಿಕೆ, ಉಪನ್ಯಾಸ ಮತ್ತು ಕಾರ್ಯಾಗಾರಗಳನ್ನು ನಡೆಸಲು ಬಳಸಲಾಗುತ್ತದೆ. ರಿಯಲ್ ಟೈಮ್‍ನಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಬಳಕೆದಾರರು ಚಾಟಿಂಗ್, ವಿಡಿಯೋ ಚಾಟಿಂಗ್, ಫೈಲ್ ಶೇರಿಂಗ್, ಹಾಗೂ ಮೈಕ್ರೋಫೋನ್ ಮೂಲಕ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯಬಹುದಾಗಿರುತ್ತದೆ.

# ಕನ್ನಡಿಗರ ಆಪ್ತ ಮಿತ್ರ ಅಮರ್‍ನಾಥ್ :
ಅಮೆರಿಕದ ಕಾನೂನು ಇಲಾಖೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ ಅಮರನಾಥ್ ಗೌಡರು ಅಕ್ಕ ಸಂಸ್ಥೆಯನ್ನು ಸ್ಥಾಪಿಸಿ ದೇಶದಲ್ಲಿರುವ ಕನ್ನಡಗಿರ ಹಿತರಕ್ಷಣೆ ಮಾಡುತ್ತಿದ್ದಾರೆ.  ಅಮೆರಿಕದ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ನಗರಗಳ ಮೇಲೆ ಭಯೋತ್ಪಾದಕರು ಭೀಕರ ದಾಳಿ ನಡೆಸಿದ ಸಂದರ್ಭದಲ್ಲಿಯೂ ಇವರು ಅನೇಕ ಕನ್ನಡಿಗರ ರಕ್ಷಣೆಗೆ ಧಾವಿಸಿ ಆವರಿಗೆ ವಸತಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದರು.

ಅಮೆರಿಕದ ವಿವಿಧ ರಾಜ್ಯಗಳಲ್ಲಿ ವಿನಾಶಕಾರಿ ಪ್ರಕೃತಿ ವಿಕೋಪಗಳು ಸಂಭವಿಸಿ ಕನ್ನಡಿಗರು ಸಂತ್ರಸ್ತರಾಗಿದ್ದ ಸಂದರ್ಭದಲ್ಲಿ ಹೆಮ್ಮೆಯ ಕನ್ನಡಿಗರಾದ ಗೌಡರು ಸಹಾಯ ಹಸ್ತ ಚಾಚಿದ್ದರು. ಸಪ್ತ ಸಾಗರಗಳ ಆಚೆ ಉದ್ಯೋಗ ಅರಸಿಯೋ ಅಥವಾ ಉನ್ನತ ಶಿಕ್ಷಣ ಇಲ್ಲವೇ ಇತರ ಸದುದ್ಧೇಶಗಳಿಗೆ ಕರ್ನಾಟಕದಿಂದ ತೆರಳುವ ಕನ್ನಡಿಗರಿಗೆ ಅಗತ್ಯವಾದಾಗೆಲೆಲ್ಲಾ ನೆರವಾಗುವ ಆಪ್ತಮಿತ್ರ ಎಂಬ ಖ್ಯಾತಿಗೆ ಅಮರನಾಥ ಗೌಡರು ಪಾತ್ರರಾಗಿದ್ದಾರೆ.

# ಉತ್ತರ ಅಮೆರಿಕ ಕನ್ನಡಿಗರ ಜೊತೆ ಬಿಎಸ್‍ವೈ, ಶ್ರೀಗಳ ಸಂವಾದ : 
ಬೆಂಗಳೂರು, ಏ.12-ಮಾರಕ ಕೊರೊನಾ ವೈರಾಣು ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉತ್ತರ ಅಮೆರಿಕದಲ್ಲಿನ ಕನ್ನಡಿಗರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜೆಎಸ್‍ಎಸ್ ಮಠದ ಪೀಠಾಧ್ಯಕ್ಷರಾದ ಶ್ರರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಅವರು ಇಂದು ರಾತ್ರಿ 9 ಗಂಟೆಗೆ ನೇರ ಸಂವಾದ ಮತ್ತು ಭಾಷಣ ಮಾಡಲಿದ್ದಾರೆ.

ಕೋವಿಡ್-19 ವೈರಾಣು ಸೋಂಕು ವ್ಯಾಪನೆಯಿಂದಾಗಿ ಉದ್ಭವಿಸಿರುವ ಸಂಕಷ್ಟ ಮತ್ತು ಅನಿಶ್ಚಿತ ಪರಿಸ್ಥಿತಿ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಸ್ವಾಮೀಜಿ ಅವರು ಉತ್ತರ ಅಮೆರಿಕದ ಕನ್ನಡಗರಿಗೆ ನೈತಿಕ ಸ್ಥೈರ್ಯ ತುಂಬಲಿದ್ದು, ಆರೋಗ್ಯ, ಯೋಗಕ್ಷೇಮ ಮತ್ತು ಸೌಖ್ಯತೆಗಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡಲಿದ್ದಾರೆ.

ಉತ್ತರ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಹಿತಾಸಕ್ತಿ ರಕ್ಷಣೆ ಮತ್ತು ಅವರಿಗೆ ಅಗತ್ಯವಾದ ಸಕಲ ಸಹಕಾರ ಮತ್ತು ನೆರವು ನೀಡಲು ಸರ್ಕಾರ ಬದ್ಧ ಎಂದು ಯಡಿಯೂರಪ್ಪ ಅವರು ಅಭಯ ನೀಡಲಿದ್ದಾರೆ. ಸ್ವಾಮೀಜಿ ಅವರೂ ಕೂಡ ಕನ್ನಡಿಗರ ಒಳಿತಿಗಾಗಿ ಪ್ರವಚನ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಅಲ್ ಸೇವಾ ಇಂಟರ್‍ನ್ಯಾಷನಲ್ ಸಂಸ್ಥೆಯು ಉತ್ತರ ಅಮೆರಿಕದ ಕನ್ನಡಿಗರಿಗೆ ನೀಡುತ್ತಿರುವ ಸೇವೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದೆ. ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆಯು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸ್ವಾಮೀಜಿ ಅವರ ನೇರ ಭಾಷಣ ಮತ್ತು ಸಂವಾದಕ್ಕೆ ನೆರವು ನೀಡಿದೆ.  ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ (ಇಎಸ್‍ಟಿ ಬೆಳಗ್ಗೆ 11.30) ಈ ನೇರ ಸಂವಾದ ಮತ್ತು ಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ಅಕ್ಕ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Facebook Comments

Sri Raghav

Admin