ಸಾಲ ಪಡೆದ ರೈತರ ಮಾಹಿತಿ ನೀಡುವಂತೆ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪತ್ರ ಬರೆಯಲಾಗಿದೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

kumaraswamy

ಬೆಂಗಳೂರು, ಸೆ.29- ಸಾಲ ಮನ್ನಾ ಯೋಜನೆಯ ಯಶಸ್ವಿ ಜಾರಿಗಾಗಿ ಸಾಲ ಪಡೆದ ರೈತರ ಮಾಹಿತಿ ನೀಡುವಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪತ್ರ ಬರೆಯಲಾಗಿದೆ. ಈ ಮಧ್ಯೆ ಸಾಲ ಪಡೆದ ರೈತರ ಆಸ್ತಿ, ಮನೆ ಜಪ್ತಿಗೆ ಮುಂದಾದರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿರುವ ಎರಡು ದಿನಗಳ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದು ಕಾಟಾಚಾರದ ಉದ್ಯೋಗ ಮೇಳ ಅಲ್ಲ. ಯಾರಿಗಾದರೂ ಉದ್ಯೋಗ ಸಿಗಲಿಲ್ಲ ಅಂದರೆ ಮರಳಿ ಯತ್ನ ಮಾಡಬೇಕು. ಖಂಡಿತವಾಗಿಯೂ ಉದ್ಯೋಗ ಸಿಕ್ಕಿಯೆ ಸಿಗುತ್ತದೆ. ರಾಜ್ಯದ ಎಲ್ಲ ಕುಟುಂಬಗಳೂ ನೆಮ್ಮದಿಯ ಬದುಕು ಸಾಗಿಸಬೇಕೆನ್ನುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಒಂದೊಂದು ಜಿಲ್ಲೆಯಲ್ಲಿ ತಲಾ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ವಿಜನ್ ಗ್ರೂಪ್ ರಚಿಸಿ ಕಾರ್ಯತತ್ಪರವಾಗಿದ್ದೇವೆ. ಈ ಸರ್ಕಾರ ಆಗಲೋ ಈಗಲೋ ಬಿದ್ದುಹೋಗುತ್ತದೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ ನಮ್ಮ ಸರಕಾರ ಸುಭದ್ರವಾಗಿದೆ, ಐದು ವರ್ಷಗಳ ಕಾಲ ಸುಭದ್ರವಾಗಿ ಆಡಳಿತ ನೀಡಲಿದೆ ಎಂದು ಹೇಳಿದರು.

ಉದ್ಯೋಗಾಕಾಂಕ್ಷಿಗಳು ಈ ಮೇಳಕ್ಕೆ ಬಹಳ ನಿರೀಕ್ಷೆ ಇಟ್ಟು ಬಂದಿದ್ದಾರೆ. ಕೊಡಗು, ದೂರದ ಬೀದರ್ ಸೇರಿ ಹಲವು ಜಿಲ್ಲೆಗಳಿಂದ ಬಂದಿದ್ದಾರೆ. ಉದ್ಯೋಗ ಮೇಳಕ್ಕೆ ಬಂದಿರುವ ಕಂಪೆನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮೈತ್ರಿ ಸರಕಾರ ಬಂದ ಬಳಿಕ ಎರಡು ಅಧಿಕೃತ ಜನತಾ ದರ್ಶನ ನಡೆಸಿದ್ದೇನೆ. ಜನತಾ ದರ್ಶನದಲ್ಲಿ ಬಂದಿರುವ ಅರ್ಜಿಗಳನ್ನು ನಮ್ಮ ಸರಕಾರ ಲಘುವಾಗಿ ಪರಿಗಣಿಸಿಲ್ಲ. ದೂರದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ನಮ್ಮ ಸರಕಾರ ಹಾಕಿಕೊಂಡಿದೆ ಎಂದು ಹೇಳಿದರು.

ಇತ್ತೀಚೆಗೆ ಮಂಡ್ಯದಲ್ಲಿ ರೈತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದ ಯಜಮಾನ ಜನತಾದರ್ಶನಕ್ಕೆ ಬಂದು ಅರ್ಜಿ ಕೊಟ್ಟಿದ್ದರು. ಆ ವ್ಯಕ್ತಿಗೂ ಸಹ ತಾಳ್ಮೆಯಿಂದ ಇರುವಂತೆ ಹೇಳಿದ್ದೆ, ಆತನಿಗೆ ಸಾಲಗಾರರು ತೊಂದರೆ ಕೊಡದಂತೆ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದೆ. ಆದರೆ ಆತ ದುಡುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಿಷಾದಿಸಿದರು.

ನಿನ್ನೆ ವಿಧಾನಸೌಧದಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ ರೈತನ ಬಗ್ಗೆ ವರದಿಯಾಗಿದೆ. ಆ ಯುವಕನಿಗೆ ಫಿಡ್ಸ್ ಕಾಯಿಲೆ ಇರುವುದರ ಬಗ್ಗೆ ಮಾಹಿತಿ ದೊರಕಿದೆ. ಇಪ್ಪತ್ತು ಲಕ್ಷ ರೂ. ಖಾಸಗಿಯವರಿಂದ ಸಾಲ ಮಾಡಿಕೊಂಡಿದ್ದಾನೆ. ಆ ಸಾಲವನ್ನು ತೀರಿಸುವಂತೆ ನನ್ನಲ್ಲಿ ಕೇಳಿದ್ದಾನೆ. ಪ್ರತಿದಿನ ಹೀಗೆ ಸಾಲ ಮಾಡಿಕೊಂಡು ಹತ್ತಾರು ಜನ ಬಂದರೆ ನಾನು ತೀರಿಸಲು ಸಾಧ್ಯವೇ ಎಂದು ಸಿಎಂ ಪ್ರಶ್ನಿಸಿದರು.

ಇಂತಹ ರೈತರ ಸಮಸ್ಯೆ ನಿವಾರಹನೆಗಾಗಿಯೇ ನಾವು ಋಣಮುಕ್ತ ಕಾಯ್ದೆ ಜಾರಿಗೊಳಿಸುತ್ತಿದ್ದೇನೆ. ರಾಷ್ಟ್ರಪತಿ ಅಂಕಿತ ಹಾಕಿ ಕಾಯ್ದೆ ಜಾರಿಗೆ ಬರುವವರೆಗೆ ತಾಳ್ಮೆಯಿಂದ ಕಾಯಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ಅತಿ ಕಡಿಮೆ ದರದಲ್ಲಿ ಪೆಟ್ರೋಲ್ ಸಿಗುತ್ತಿದೆ. ಸಾಲಮನ್ನಾ ಹೊರೆ ಇದ್ದರೂ ಪೆಟ್ರೋಲ್ ಸೆಸ್ ಕಡಿಮೆ ಮಾಡಲಾಗಿದೆ. ಆದರೂ ನಮಗೆ ದೊಡ್ಡ ಪ್ರಮಾಣದ ಪ್ರಚಾರ ಸಿಗಲಿಲ್ಲ. ಆದರೆ ಕೇಂದ್ರ ಸರ್ಕಾರದ ರಾಷ್ಟ್ರೀಯ ನಾಯಕರಿಗೆ ಮಾತ್ರ ದೊಡ್ಡ ಪ್ರಚಾರ ಕೊಡುತ್ತಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಜನತಾ ದರ್ಶನದಲ್ಲಿ ಉದ್ಯೋಗಕ್ಕಾಗಿ 3198 ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ. 100 ಕ್ಕೂ ಹೆಚ್ಚು ಪ್ರಮುಖ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಿವೆ. ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಸಚಿವ ಆರ್.ವಿ.ದೇಶಪಾಂಡೆ, ಸಂಸದ ವೀರಪ್ಪ ಮೊಯಿಲಿ, ಶಾಸಕ ಉದಯ್ ಗರುಡಾಚಾರ್, ಶಾಸಕಿ ಸೌಮ್ಯ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಶರವಣ, ಜಿಲ್ಲಾಕಾರಿ ವಿಜಯ್ ಶಂಕರ್ ಉಪಸ್ಥಿತಿ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin