“ಖಾತೆ ಹಂಚಿಕೆಯಲ್ಲಿ ಗೌಡರು ಮಧ್ಯ ಪ್ರವೇಶಿಸಿಲ್ಲ, ಡಿಕೆಶಿ-ರೇವಣ್ಣ ನಡುವೆ ಜಟಾಪಟಿಯೂ ನಡೆದಿಲ್ಲ’
ಬೆಂಗಳೂರು, ಜೂ.2-ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ ಮತ್ತು ಮಾಜಿ ಸಚಿವರಾದ ಎಚ್.ಡಿ.ರೇವಣ್ಣ – ಡಿ.ಕೆ.ಶಿವಕುಮಾರ್ ನಡುವೆ ಇಂಧನ ಖಾತೆಗಾಗಿ ಜಟಾಪಟಿ ನಡೆದಿತ್ತು ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಕೊಟ್ಟು-ತೆಗೆದುಕೊಳ್ಳುವ ನೀತಿ ಅನುಸರಿಸಲಾಗುತ್ತಿದೆ. ಇಂಧನ ಖಾತೆ ಬಗ್ಗೆ ರೇವಣ್ಣ ಹಾಗೂ ಡಿ.ಕೆ.ಶಿವಕುಮಾರ್ ಆಸಕ್ತಿ ಹೊಂದಿದ್ದು ನಿಜ. ಆದರೆ ರೇವಣ್ಣ ಅವರಿಗೆ ಇಂಧನ ಖಾತೆ ಕೊಡಿಸಲು ದೇವೇಗೌಡರು ಖಾತೆ ಹಂಚಿಕೆಯಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ ಎಂಬುದು ಸರಿಯಲ್ಲ. ಕಪೋಲಕಲ್ಪಿತ ವರದಿ ಮಾಡುವುದನ್ನು ಬಿಡಿ. ಸತ್ಯಾಂಶ ಮತ್ತು ವಾಸ್ತವಸಂಗತಿ ವರದಿ ಮಾಡಿ ಎಂದು ಹೇಳಿದರು.
ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಉಭಯ ಪಕ್ಷಗಳ ನಡುವಿನ ಖಾತೆ ಹಂಚಿಕೆ ಪಟ್ಟಿ ಅಂತಿಮಗೊಳಿಸಲು ನಿನ್ನೆ ದೇವೇಗೌಡರೊಂದಿಗೆ ಚರ್ಚೆ ನಡೆಸಿದ್ದು ಬಿಟ್ಟರೆ ಬೇರೆ ಯಾವುದೇ ಖಾತೆ ಹಂಚಿಕೆ ಕುರಿತಂತೆ ದೇವೇಗೌಡರು ನಿರ್ದೇಶನ ನೀಡಿಲ್ಲ. ಇದು ಕಾಂಗ್ರೆಸ್ನ ರಾಷ್ಟ್ರೀಯ ನಾಯಕರಿಗೂ ಗೊತ್ತಿದೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರವನ್ನು ಉತ್ತಮ ರೀತಿಯಲ್ಲಿ ಅಪಸ್ವರವಿಲ್ಲದಂತೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಉಭಯ ಪಕ್ಷಗಳ ನಾಯಕರ ಅಭಿಮತವೂ ಇದೆ. ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರೂ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನತೆಗೆ ನೀಡಿರುವ ಭರವಸೆ ಈಡೇರಿಸಲು ಅಗತ್ಯವಾಗಿರುವ ಹಣಕಾಸು ಇಲಾಖೆ ಕುರಿತಂತೆ ನಾವು ಪ್ರಸ್ತಾಪ ಮಾಡಿದ್ದೆವು. ಆದರೆ ಬೇರೆ ಇಲಾಖೆ ವಿಚಾರದಲ್ಲಿ ಯಾವುದೇ ಜಟಾಪಟಿಯೂ ನಡೆದಿಲ್ಲ ಹಾಗೂ ಒತ್ತಾಯದಿಂದಲೂ ಯಾವುದೇ ಖಾತೆ ಪಡೆದಿಲ್ಲ ಎಂದು ಮಾಹಿತಿ ನೀಡಿದರು. ಮಂತ್ರಿಮಂಡಲ ರಚನೆ ನಂತರ ಯಾರಿಗೆ ಯಾವ ಖಾತೆ ಎಂದು ಹಂಚಿಕೆ ಮಾಡಲಾಗುವುದು. ಇನ್ನೂ ಕೂಡ ನೂತನ ಸಚಿವರ ಪಟ್ಟಿ ಸಿದ್ಧವಾಗಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.