ಮೋದಿ ಬಂದಿರುವುದೇ ಪರ್ಸೆಂಟೇಜ್ ಹಿನ್ನೆಲೆಯಿಂದ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.14-ಪ್ರಧಾನಮಂತ್ರಿ ನರೇಂದ್ರ ಮೋದಿ ಬಂದಿರುವುದೇ ಪರ್ಸೆಂಟೇಜ್ ಹಿನ್ನೆಲೆಯಿಂದ. ಹಾಗಾಗಿ ಅವರು ರಾಜ್ಯಕ್ಕೆ ಬಂದಾಗಲೆಲ್ಲ ಪರ್ಸಂಟೇಜ್ ವಿಷಯವನ್ನೇ ಮಾತಾಡುತ್ತಾರೆ, ಅದರ ವ್ಯಾಪ್ತಿಯಿಂದ ಹೊರಬಂದು ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗವಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಮೋದಿಯವರ ಹಿನ್ನೆಲೆ ನೋಡಿದರೆ ಅವರು ಬಂದಿರುವುದೇ ಪರ್ಸಂಟೇಜ್ ನಿಂದಾಗಿ. ಅದಕ್ಕಾಗಿ ಅವರಿಗೆ ಅದೇ ಚಿಂತೆ. ಅದರ ವ್ಯಾಪ್ತಿ ಬಿಟ್ಟು ಬೇರೆ ಏನು ಮಾತನಾಡುವುದಿಲ್ಲ.

ಅವರಿಂದ ಬೇರೆ ಏನನ್ನೂ ಬಯಸಲಾಗುವುದಿಲ್ಲ. ರಾಜ್ಯ ಸರ್ಕಾರದ ಬಗ್ಗೆ ಮಾತನಾಡಲು ಬೇರೆ ಯಾವ ವಿಷಯವೂ ಇಲ್ಲದಿರುವುದರಿಂದ ಪರ್ಸಂಟೇಜ್ ಎಂಬ ಸುಳ್ಳು ಆರೋಪ ಮಾಡಿ ಹೋಗುತ್ತಾರೆ ಎಂದು ಕಿಡಿಕಾರಿದರು.

ಮೋದಿ ಮಟ್ಟಕ್ಕೆ ನಾನು ಇಳಿದಿಲ್ಲ. ಆದಾಯ ತೆರಿಗೆ ಸೇರಿದಂತೆ ಯಾವುದೇ ತನಿಖೆಗೂ ನಾನು ಹೆದರಿಲ್ಲ. ಏಕೆಂದರೆ ನಾನು ಮುಖ್ಯಮಂತ್ರಿಯಾಗಿ ಗೋದ್ರಾದಂತಹ ಘಟನೆ ನಡೆಸಿ ಅಮಾಯಕರನ್ನು ಬಲಿ ಪಡೆದು ಮೋದಿಯವರ ಮಟ್ಟಕ್ಕೆ ಇಳಿದಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಐಟಿ ದಾಳಿ ಬಗ್ಗೆ ನಾವು ಪ್ರತಿಭಟನೆ ಮಾಡಿದ್ದು, ಮೋದಿ ಲೇವಡಿ ಮಾಡುತ್ತಾರೆ. ಐಟಿ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ನೋಡಬೇಕಿದೆ. ದೇವೇಗೌಡರು ಹಳ್ಳಿಯೊಂದರಲ್ಲಿ ಯಾರದೋ ಮನೆಗೆ ಊಟಕ್ಕೆ ಹೋದರೆ ಮಾರನೆ ದಿನ ಐಟಿ ಅವರು ಆ ಮನೆ ಮೇಲೆ ದಾಳಿ ಮಾಡುತ್ತಾರೆ. ಇದೊಂದು ಮಾನವೀಯತೆ ಇರುವ ಸರ್ಕಾರವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನಾನು ಆದಾಯ ತೆರಿಗೆ ದಾಳಿಗೆ ಹೆದರಿಲ್ಲ. ಯಾವುದೇ ತನಿಖೆಗೂ ಹೆದರಿಲ್ಲ. ಪ್ರಧಾನಮಂತ್ರಿಯವರು ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾ ಹತ್ಯಾಕಾಂಡಕ್ಕಾಗಿ ಪೊಲೀಸ್ ತನಿಖೆ ಎದುರಿಸಿದ್ದರು. ನಾನು ಅವರ ಮಟ್ಟಕ್ಕೆ ಇಳಿದಿಲ್ಲ. ಮುಖ್ಯಮಂತ್ರಿಯಾಗಿ ಅಮಾಯಕರನ್ನು ಬಲಿ ಪಡೆದ ಮೋದಿಯವರಿಂದ ನಾನು ನೀತಿ ಪಾಠ ಕಲಿಯಬೇಕಿಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಮೋದಿಯವರು ಕರ್ನಾಟಕಕ್ಕೆ ಆಗಮಿಸಿದಾಗ ದೊಡ್ಡದೊಂದು ಬಾಕ್ಸ್‍ನ್ನು ಮೂರು ಜನ ಎಸ್‍ಪಿಜಿ ಅಧಿಕಾರಿಗಳು ತೆಗೆದುಕೊಂಡು ಹೋದರಲ್ಲ ಅದು ಏನು? ಆ ಬಾಕ್ಸ್ ಇಟ್ಟ ಇನ್ನೋವಾ ಕಾರು ಯಾರದು? ಎಂಬ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರ ನೀಡಬೇಕು.ನಾವು ಅಂತಹ ಯಾವ ಕೆಲಸಗಳನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ನಮ್ಮದು ರಿಮೋಟ್ ಕಂಟ್ರೋಲ್ ಸರ್ಕಾರ ಎಂದು ಮೋದಿ ಹೇಳುತ್ತಾರೆ. ಪ್ರಧಾನಿ ಯಾವ ರಿಮೋಟ್ ಕಂಟ್ರೋಲ್‍ನಲ್ಲಿ ಇದ್ದಾರೆ ಎಂದು ಹೇಳಬೇಕು. ನಾನು ಯಾರ ರಿಮೋಟ್‍ನ ನಿಯಂತ್ರಣದಲ್ಲೂ ಇಲ್ಲ. ಮುಕ್ತ ಆಡಳಿತ ನೀಡುತ್ತಿದ್ದೇನೆ. ಭಯದ ವಾತಾವರಣದಲ್ಲಿ ಆಡಳಿತ ನಡೆಸುತ್ತಿಲ್ಲ. ಮೋದಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಅಂಬೇಡ್ಕರ್ ಅವರ ಗುಣಗಾನ ಮಾಡಿದ ಮುಖ್ಯಮಂತ್ರಿಯವರು, ಸಂವಿಧಾನಶಿಲ್ಪಿಯಾಗಿ ಪ್ರಜಾಪ್ರಭುತ್ವದ ಉಳಿವು ಹಾಗೂ ಸಾಮಾಜಿಕ ನ್ಯಾಯಕ್ಕೆ ಅಂಬೇಡ್ಕರ್‍ರವರ ಕೊಡುಗೆ ಅಪಾರವಾದುದು.ಅವರ ಕೊಡುಗೆಯನ್ನು ನಾವು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‍ಖರ್ಗೆ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ