ರಾಜ್ಯದ ಒಳಿತಿಗಾಗಿ ಶೃಂಗೇರಿಯಲ್ಲಿ ಸಿಎಂ ಹೋಮ-ಹವನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ2- ಭೀಕರ ಬರಗಾಲದಿಂದಾಗಿ ಉಂಟಾಗಿರುವ ಕುಡಿಯುವ ನೀರಿನ ಅಭಾವ, ಜಾನುವಾರುಗಳ ಮೇವಿನ ಸಮಸ್ಯೆ, ಜನರು ಗುಳೆ ಹೋಗುವುದನ್ನು ತಪ್ಪಿಸಲು ಹಾಗೂ ರಾಜ್ಯದಲ್ಲಿ ಉತ್ತಮ ಮಳೆಬೆಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶೇಷ ಪೂಜೆ, ಹೋಮ-ಹವನಗಳನ್ನು ಹಮ್ಮಿಕೊಂಡಿದ್ದಾರೆ.

ಸದ್ಯ ಅವರು ಉಡುಪಿಯ ಕಾಪು ಬಳಿ ಇರುವ ಸಾಯಿರಾಧಾ ರೆಸಾರ್ಟ್‍ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದು, ಶುಕ್ರವಾರ ಮತ್ತು ಶನಿವಾರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಿಗ್ಗಾದಲ್ಲಿ ಹೋಮ-ಹವನ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಂಡಿದ್ದಾರೆ.

ನಂತರ ಶೃಂಗೇರಿಯ ಶಾರದಾಂಬೆ ದೇವಸ್ಥಾನದಲ್ಲೂ ನಾಡಿನ ಒಳಿತಿಗಾಗಿ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಅವರೊಂದಿಗೆ ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಪತ್ನಿ ಚನ್ನಮ್ಮ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಕುಟುಂಬದ ಆಪ್ತರು ಭಾಗವಹಿಸಲಿದ್ದಾರೆ.

ಖ್ಯಾತ ಜ್ಯೋತಿಷಿ ದ್ವಾರಕನಾಥ್ ಅವರ ಸಲಹೆ ಮೇರೆಗೆ ಕಿಗ್ಗಾ ಮತ್ತು ಶೃಂಗೇರಿಯಲ್ಲಿ ಈ ವಿಶೇಷ ಪೂಜೆ ಕೈಗೊಂಡಿದ್ದು, ಈ ಬಾರಿ ವಾಡಿಕೆಯಂತೆ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ನಿಟ್ಟಿನಲ್ಲಿ ರಾಜ್ಯದ ಕಲ್ಯಾಣಕ್ಕಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರೆ ಒಳಿತಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷಿ ದ್ವಾರಕನಾಥ್ ಸಲಹೆ ನೀಡಿದ್ದಾರೆ. ರಾಜಗುರು ಎಂದೇ ಕರೆಯುವ ದ್ವಾರಕನಾಥ್ ಅವರ ಯಾವುದೇ ಸಲಹೆ-ಸೂಚನೆಗಳನ್ನು ಕುಮಾರಸ್ವಾಮಿ ಅವರು ಚಾಚೂತಪ್ಪದೆ ಮಾಡುತ್ತಾರೆ. ಮೊದಲಿನಿಂದಲೂ ದೇವೇಗೌಡರ ಕುಟುಂಬ ದ್ವಾರಕನಾಥ್ ಅವರ ಮಾರ್ಗದರ್ಶನದಂತೆ ನಡೆದುಕೊಂಡು ಬಂದಿದೆ.

# ಎಲ್ಲೆಡೆ ನೀರಿನ ಹಾಹಾಕಾರ:
ರಾಜ್ಯದ 26 ಜಿಲ್ಲೆಗಳ 2150 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಮೂಲಗಳಾದ ನದಿ, ಹಳ್ಳಕೊಳ್ಳ, ಕೆರೆಕಟ್ಟೆ ಬತ್ತಿ ಹೋಗಿವೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ , ದಕ್ಷಿಣ ಕರ್ನಾಟಕ ಸೇರಿದಂತೆ ಎಲ್ಲ ಕಡೆ ಟ್ಯಾಂಕರ್ ಮೂಲಕ ವಾರಕ್ಕೆ ಒಂದು ಬಾರಿ ನೀರು ಪೂರೈಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಸರ್ಕಾರ ಜಿಲ್ಲಾಡಳಿತಕ್ಕೆ ಖಾಸಗಿಯವರಿಂದಾದರೂ ಸರಿಯೇ ಖರೀದಿ ಮಾಡಿ ನೀರು ಪೂರೈಕೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಆದರೆ ನೀರಿನ ಮೂಲಗಳೇ ಬತ್ತಿ ಹೋಗಿರುವುದರಿಂದ ಖರೀದಿ ಮಾಡಲು ಜಿಲ್ಲಾಡಳಿತ ಮುಂದೆ ಬಂದರೂ ನೀರೇ ಸಿಗುತ್ತಿಲ್ಲ. ಸದ್ಯಕ್ಕೆ ಮಳೆ ಬಾರದೆ ಇದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಊಹಿಸಲು ಕಷ್ಟಸಾಧ್ಯ.

# ಮೇವಿನ ಕೊರತೆ:
ಈ ಬಾರಿ ಬರಗಾಲದಿಂದಾಗಿ ನೀರಿನ ಮೂಲ ಬತ್ತಿ ಹೋಗಿರುವುದರ ಜೊತೆಗೆ ಜಾನುವಾರುಗಳಿಗೆ ಮೇವು ಕೂಡ ಇಲ್ಲದಂತಾಗಿದೆ. ಅನೇಕ ಕಡೆ ಹಸು, ಎಮ್ಮೆ, ಕರುಗಳಿಗೆ ಒಂದು ಹೊತ್ತಿನ ಮೇವಿಗೂ ಕೊರತೆ ಉಂಟಾಗಿದೆ.

ಇನ್ನು ಗೋಶಾಲೆಗಳಲ್ಲೂ ಇರುವ ಜಾನುವಾರುಗಳಿಗೆ ಮೇವಿಲ್ಲ, ಕುಡಿಯಲು ನೀರಿಲ್ಲ, 10-15 ಕಿ.ಮೀ ದೂರ ಸಾಗಿ ಹಳ್ಳಕೊಳ್ಳಗಳಲ್ಲಿ ಸಂಗ್ರಹವಾಗಿದ್ದರೆ ನೀರು ಕುಡಿಸಬೇಕಾದ ಪರಿಸ್ಥಿತಿ ಇದೆ.

ಮೇ ತಿಂಗಳು ಆರಂಭಾವಾಗಿದ್ದರೂ ಮುಂಗಾರು ಆರಂಭವಾಗಿಲ್ಲ. ತಿಂಗಳ ಅಂತ್ಯಕ್ಕೆ ಪ್ರಾರಂಭವಾಗಬಹುದೆಂಬ ನಿರೀಕ್ಷೆಯನ್ನು ಸರ್ಕಾರ ಇಟ್ಟುಕೊಂಡಿದೆ. ದೇವರ ಇಷ್ಟಾರ್ಥವನ್ನು ಈಡೇರಿಸಿದರೆ ವರುಣನ ಆಗಮನವಾಗಬಹುದೆಂಬ ನಿರೀಕ್ಷೆಯೊಂದಿಗೆ ಮುಖ್ಯಮಂತ್ರಿಗಳು ಹೋಮಹವನ ಹಮ್ಮಿಕೊಂಡಿದ್ದಾರೆ.

ಇದು ಕೇವಲ ಪ್ರಜೆಗಳು ಹಾಗೂ ನಾಡಿನ ಕಲ್ಯಾಣಕ್ಕಾಗಿ ನಡೆಸುತ್ತಿರುವ ಪೂಜೆ ಎಂದು ಹೇಳುತ್ತಿದ್ದರೂ ಒಳಾರ್ಥದಲ್ಲಿ ಇದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನಗಳು ಕೇಳಿಬರುತ್ತಿವೆ.  ಇತ್ತೀಚೆಗೆ ಸಮ್ಮಿಶ್ರ ಸರ್ಕಾರ ಹಳಿ ತಪ್ಪಿದ ರೈಲಿನಂತಾಗಿದೆ.

ಉಭಯ ಪಕ್ಷಗಳ ಮುಖಂಡರಲ್ಲಿ ನಂಬಿಕೆಗಿಂತ ಅಪನಂಬಿಕೆಯೇ ಹೆಚ್ಚಾಗಿದೆ. ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ಮಾತುಗಳು ಪುಂಖಾನುಪುಂಕವಾಗಿ ಕೇಳಿಬರುತ್ತಿದೆ. ಭವಿಷ್ಯದಲ್ಲಿ ಸರ್ಕಾರಕ್ಕೆ ಯಾವುದೇ ಗಂಡಾಂತರ ಎದುರಾಗಬಾರದೆಂಬ ಕಾರಣಕ್ಕಾಗಿ ಸಿಎಂ ಈ ತಂತ್ರ ಅನುಸರಿಸಿದ್ದಾರೆಂಬ ಪುಕಾರು ಕೂಡ ಕೇಳಬಿರುತ್ತಿದೆ.

Facebook Comments

Sri Raghav

Admin