ಕಳಪೆ ಸಾಧನೆ ಮಾಡಿದ ಸಚಿವರ ತಲೆದಂಡ ಮಾಡಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 26-ಲೋಕಸಭೆ ಚುನಾವಣೆಯಲ್ಲಿ ತೀರಾ ನಿರಾಸದಾಯಕ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಕಳಪೆ ಸಾಧನೆ ತೋರಿರುವ ಸಚಿವರನ್ನು ತಲೆದಂಡ ಮಾಡುವ ಮೂಲಕ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್‍ನಲ್ಲಿರುವ ಕೆಲವು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಅಸಮಾಧಾನಗೊಂಡಿರುವ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಂಡು ಸಂಕಷ್ಟದಲ್ಲಿರುವ ಸರ್ಕಾರವನ್ನು ರಕ್ಷಣೆ ಮಾಡಿಕೊಳ್ಳುವುದು ಅವರ ಉದ್ದೇಶವಾಗಿದೆ.

ಅದರಲ್ಲೂ ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಮತ್ತು ಮೈಸೂರಿನಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಸೋತಿರುವುದರಿಂದ ಈ ಜಿಲ್ಲೆಗಳಲ್ಲಿರು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲು ದೋಸ್ತಿ ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ.

ಮಂಡ್ಯದಲ್ಲಿ ಸಿ.ಎಸ್.ಪುಟ್ಟರಾಜು ,ಸಾ.ರಾ.ಮಹೇಶ್, ಮೈಸೂರಿನಲ್ಲಿ ಜಿ.ಟಿ.ದೇವೇಗೌಡ, ತುಮಕೂರಿನಿಂದ ಎಸ್.ಆರ್.ಶ್ರೀನಿವಾಸ್ ಇದೇ ರೀತಿ ಕಾಂಗ್ರೆಸ್‍ನಿಂದ ಕೆಲವರನ್ನು ಅನಿವಾರ್ಯ ಕಾರಣಗಳಿಂದ ಸಂಪುಟದಿಂದ ಕೋಕ್ ನೀಡಿ ಭಿನ್ನಮತೀಯರಿಗೆ ಮಣೆ ಹಾಕುವ ಮೂಲಕ ಸದ್ಯಕ್ಕೆ ಸರ್ಕಾರವನ್ನು ಅಪಾಯದಿಂದ ಪಾರು ಮಾಡಲು ಮುಂದಾಗಿದ್ದಾರೆ.

ಮೊದಲೇ ಷರತ್ತು ಹಾಕಲಾಗಿತ್ತು: ಲೋಕಸಭೆ ಚುನಾವಣೆಗೂ ಮೊದಲೇ ಕೆಲವು ಸಚಿವರಿಗೆ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳಿಗೆ ಮುನ್ನಡೆ ಬಾರದಿದ್ದರೆ ತಲೆದಂಡವಾಗುವ ಸುಳಿವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ,ಡಾ.ಜಿ.ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ತಿಳಿಸಿದ್ದರು ಎನ್ನಲಾಗಿದೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳು ಕನಿಷ್ಠ 18ರಿಂದ 20 ಸ್ಥಾನಗಳನ್ನು ಗೆದ್ದು ಬಿಜೆಪಿಯನ್ನು ಒಂದಂಕಿಗೆ ಇಳಿಸಬೇಕೆಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ರಾಜ್ಯದಲ್ಲಿ ಬೀಸಿದ ನರೇಂದ್ರ ಮೋದಿ ಸುನಾಮಿಗೆ ಇತಿಹಾಸದಲ್ಲೇ ಕಂಡು ಕೇಳರಿಯದ ಮಟ್ಟಿಗೆ ಕಾಂಗ್ರೆಸ್-ಜೆಡಿಎಸ್ ಹೀನಾಯ ಸೋಲು ಕಂಡಿತು. ಎಷ್ಟರಮಟ್ಟಿಗೆ ಸೋತಿತು ಎಂದರೆ ದೋಸ್ತಿ ಪಕ್ಷಗಳು ಕೇವಲ ಒಂದೊಂದೆ ಸ್ಥಾನವನ್ನು ಗೆದ್ದು ಮರ್ಮಾಘಾತ ಅನುಭವಿಸಿದವು.

ಅದರಲ್ಲೂ ಮಂಡ್ಯ ಮತ್ತು ತುಮಕೂರಿನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಉಂಟಾದ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಫಲಿತಾಂಶ ಪ್ರಕಟಗೊಂಡ ಬಳಿಕ ದೋಸ್ತಿ ಪಕ್ಷಗಳಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಒಂದು ಕಡೆ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದರೆ ಮತ್ತೊಂದು ಕಡೆ ಅಸಮಾಧಾನಗೊಂಡಿರುವ ಶಾಸಕರು ಸರ್ಕಾರಕ್ಕೆ ಕಂಟಕವಾಗುವ ಲಕ್ಷಣಗಳು ಕಂಡುಬಂದಿವೆ.

ಸುಮಾರು ಒಂದು ಡಜನ್‍ಗೂ ಅಧಿಕ ಶಾಸಕರು ಸರ್ಕಾರದ ವಿರುದ್ಧ ತೊಡೆ ತಟ್ಟಲು ಸಿದ್ದರಾಗಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಉಂಟಾಗಬಹುದಾದ ಸಂಭಾವ್ಯ ಆಪತ್ತನ್ನು ತಡೆಯಲು ಮುಖಂಡರು ರಣತಂತ್ರ ರೂಪಿಸಿದ್ದಾರೆ.

ಮಂಡ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಎಂಟು ಕ್ಷೇತ್ರಗಳು ಜೆಡಿಎಸ್‍ಗೆ ಬಂದ ಪರಿಣಾಮ ಜಿಲ್ಲೆಗೆ ಮೂರು ಮಂತ್ರಿ ಸ್ಥಾನಗಳನ್ನು ನೀಡಲಾಗಿತ್ತು.
ಮದ್ದೂರಿನಿಂದ ಡಿ.ಸಿ.ತಮಣ್ಣ, ಮೇಲುಕೋಟೆಯಿಂದ ಸಿ.ಎಸ್.ಪುಟ್ಟರಾಜು ಹಾಗೂ ಕೆ.ಆರ್.ನಗರದಿಂದ ಸಾ.ರಾ.ಮಹೇಶ್ ಮಂತ್ರಿ ಸ್ಥಾನ ನೀಡಲಾಗಿತ್ತು.
ಈಗ ಸದ್ಯಕ್ಕೆ ಡಿ.ಸಿ.ತಮಣ್ಣ ಮಾತ್ರ ಸಂಪುಟದಲ್ಲಿ ಸಚಿವರಾಗಿ ಮುಂದುವರೆಯುವ ಸಾಧ್ಯತೆ ಇದ್ದು , ಸಿ.ಎಸ್.ಪುಟ್ಟರಾಜು ಹಾಗೂ ಸಾ.ರಾ.ಮಹೇಶ್‍ಗೆ ಗೂಟದ ಕಾರು ಕೈತಪ್ಪುವ ಭೀತಿ ಎದುರಾಗಿದೆ.

ಸಮ್ಮಿಶ್ರ ಸರ್ಕಾರ ಉಳಿಯಬೇಕೆಂದರೆ ಕೆಲವು ತ್ಯಾಗ ಮಾಡಲೇಬೇಕಾಗುತ್ತದೆ ಎಂದು ಕುಮಾರಸ್ವಾಮಿ ಕೆಲವು ದಿನಗಳ ಹಿಂದೆಯೇ ಶಾಸಕರಿಗೆ ಸೂಚನೆ ಕೊಟ್ಟಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.  ಸರ್ಕಾರ ಉಳಿಸಿಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಕೆಲವರನ್ನು ಬಿಟ್ಟು ಅಸಮಾಧಾನಿತರನ್ನು ಸಂಪುಟಕ್ಕೆ ತೆಗೆದುಕೊಂಡು ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿತಂತ್ರವನ್ನು ರೂಪಿಸುವಲ್ಲಿ ಪ್ರತಿಪಕ್ಷದವರು ಮಗ್ನರಾಗಿದ್ದಾರೆ.

ತುಮಕೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಗೆಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಚಿವ ಎಸ್.ಆರ್.ಶ್ರೀನಿವಾಸ್ ತಲೆದಂಡವಾದರೂ ಅಚ್ಚರಿ ಇಲ್ಲ.
ಇದೇ ರೀತಿ ಕಾಂಗ್ರೆಸ್‍ನಿಂದ ಕೆಲವು ಸಚಿವರನ್ನು ಕೈಬಿಡುವ ಬಗ್ಗೆಯೂ ಚಿಂತನೆ ನಡೆದಿದೆ. ಈಗಾಗಲೇ ರೋಷನ್ ಬೇಗ್, ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್ ಬಂಡಾಯ ಸಾರಿರುವುದರಿಂದ ಕೆಲ ಸಚಿವರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ ಉಂಟಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ