ಜಿಎಸ್‍ಟಿ ನಷ್ಟ ಪರಿಹಾರ ಇನ್ನೂ 5 ವರ್ಷ ಮುಂದುವರಿಸಲು ಸಿಎಂ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25-ಜಿಎಸ್‍ಟಿ ವಸೂಲಾತಿಯಲ್ಲಿ ಉಂಟಾಗುವ ನಷ್ಟಕ್ಕೆ ಪರಿಹಾರ ನೀಡುವ ಯೋಜನೆಯನ್ನು ಇನ್ನೂ ಐದು ವರ್ಷಗಳ ಕಾಲ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ನಗರದ ಖಾಸಗಿ ಹೊಟೇಲ್‍ನಲ್ಲಿ 15ನೇ ಹಣಕಾಸು ಆಯೋಗದ ಸಭೆ ಉದ್ಘಾಟಿಸಿ ಮಾತನಾಡಿದ ಅವರು,

ಈ ಮೊದಲು ಕರ್ನಾಟಕ ಸರ್ಕಾರ ವ್ಯಾಟ್ ಸಂಗ್ರಹದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಜಿಎಸ್‍ಟಿ ಜಾರಿಗೊಳಿಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿಗದಿತ ಮೊತ್ತದ ತೆರಿಗೆ ಸಂಗ್ರಹವಾಗದೆ ಇದ್ದರೆ ಬಾಕಿ ಇರುವ ವ್ಯತ್ಯಾಸದ ಹಣವನ್ನು ಪರಿಹಾರ ರೂಪದಲ್ಲಿ ಪಾವತಿಸುವುದಾಗಿ ಭರವಸೆ ನೀಡಿದೆ. ಈ ಭರವಸೆಯನ್ನು ಇನ್ನು ಐದು ವರ್ಷಗಳ ಕಾಲ ವಿಸ್ತರಣೆ ಮಾಡಬೇಕು ಎಂದು ಕೋರಿದರು.

ಕೇಂದ್ರ ಸರ್ಕಾರ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡಲಾಗುವ ಅನುದಾನವನ್ನು ಕಡಿತ ಮಾಡಿದೆ. ಅದೇ ರೀತಿ ಕೇಂದ್ರ ಪುರಸ್ಕøತ ಯೋಜನೆಗಳಿಗೂ ಹಣ ಕಡಿಮೆ ಮಾಡಲಾಗಿದೆ. ಇದು ಸರಿಯಲ್ಲ. ಎನ್‍ಡಿಆರ್‍ಎಫ್, ಎಫ್‍ಡಿ ಆರ್‍ಎಫ್ ಯೋಜನೆಗಳಡಿ ಅನುದಾನ ಹಂಚಿಕೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಹಲವಾರು ಬಾರಿ ಕೇಂದ್ರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಕಲ್ಯಾಣ ಕಾರ್ಯಕ್ರಮ ಗಳಿಗೆ ಹೆಚ್ಚಿನ ಅನುದಾನ ನೀಡ ಬೇಕು. ರಾಜ್ಯ ಸರ್ಕಾರ ಸುಮಾರು 43 ಸಾವಿರ ಕೋಟಿ ರೂ.ಗಳಷ್ಟು ರೈತರ ಸಾಲ ಮನ್ನಾ ಮಾಡಿದೆ. ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಯೋಜನೆಗಳು ಇನ್ನಷ್ಟು ಜಾರಿಯಾಗಬೇಕು ಎಂದು ಹೇಳಿದರು.

ರಾಜ್ಯಸರ್ಕಾರ ಆರ್ಥಿಕ ಶಿಸ್ತನ್ನು ಉತ್ತಮವಾಗಿ ಕಾಪಾಡಿಕೊಂಡು ಬಂದಿದೆ. ವಿತ್ತೀಯ ಕೊರತೆಯನ್ನು ಕೇಂದ್ರ ಸರ್ಕಾರದ ಕಾನೂನಿನ ಚೌಕಟ್ಟಿನಲ್ಲೇ ಕಾಯ್ದುಕೊಳ್ಳಲಾಗಿದೆ. ಮೋಟಾರು ತೆರಿಗೆ, ಸ್ಟ್ಯಾಂಪ್ ಅಂಡ್ ರಿಜಿಸ್ಟ್ರೇಷನ್, ಅಬಕಾರಿ ಸೇರಿದಂತೆ ತೆರಿಗೆಗಳ ಸಂಗ್ರಹ ಮತ್ತು ಸಂಪನ್ಮೂಲ ಕ್ರೋಢೀಕರಣ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ಅನ್ನಭಾಗ್ಯ, ಕೃಷಿಭಾಗ್ಯ, ಮಾತೃಪೂರ್ಣ, ಮಾತೃವಂದನಾದಂತಹ ಯೋಜನೆಗಳನ್ನು ಜಾರಿಗೊಳಿಸಿ ದ್ದೇವೆ.

ನಮ್ಮ ಸರ್ಕಾರ ಇಸ್ರೇಲ್ ಮಾದರಿಯ ಕಿರು ನೀರಾವರಿ ಪದ್ಧತಿಯನ್ನು ಜಾರಿಗೊಳಿಸುತ್ತಿದೆ. ಸಿರಿಧಾನ್ಯ ಬೆಳೆಗಳಿಗೆ ಬೆಂಬಲ ನೀಡುತ್ತಿದೆ. ಶೂನ್ಯ ಕೃಷಿ ಮತ್ತು ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಎಸ್ಸಿ-ಎಸ್ಟಿ ಸಮುದಾಯಗಳಿಗೆ ಜನಸಂಖ್ಯೆಗನುಗುಣವಾಗಿ ಅನುದಾನ ನಿಗದಿ ಮಾಡಿ ಈವರೆಗೂ ಸುಮಾರು 1.11 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅಂತರ್ಜಲ ಮಟ್ಟ 1500 ಅಡಿಗಳಿಗೆ ಕುಸಿದಿದೆ. ಕೇಂದ್ರ ಸರ್ಕಾರ ಅಂತರ್ಜಲ ಸುಧಾರಣೆ, ರೈತರ ಬದುಕನ್ನು ಉತ್ತಮಗೊಳಿಸುವಂತಹ ಯೋಜನೆಗಳಿಗೆ ರಾಜ್ಯಕ್ಕೆ ಸಹಕಾರ ನೀಡಬೇಕು. ತಲಾ ಆದಾಯ, ವಿತ್ತೀಯ ಕೊರತೆ ಆಧರಿಸಿ ವಿಶೇಷ ನೆರವನ್ನು ಘೋಷಿಸಬೇಕು. ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂದು ಅವರು ಮನವಿ ಮಾಡಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎ.ಸುಬ್ರಹ್ಮಣ್ಯ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್.ಪ್ರಸಾದ್ ಮತ್ತಿತರರು ಹಾಜರಿದ್ದರು.

Facebook Comments