ಡಿ.18ರಂದು ಸಿಎಲ್‌ಪಿ ಸಭೆಯಲ್ಲಿ ಅಸಮಾಧಾನದ ಬೆಂಕಿ ಆರಿಸುತ್ತಾರಾ ಸಿಎಂ..?

ಈ ಸುದ್ದಿಯನ್ನು ಶೇರ್ ಮಾಡಿ

Congress--CM--Kumaraswamy

ಬೆಂಗಳೂರು, ಡಿ.9- ಶಾಸಕರ ಅಸಮಾಧಾನಗಳನ್ನು ಶಮನಗೊಳಿಸಲು ಖುದ್ದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ದಿನಾಂಕ ನಿಗದಿಯಾಗಿದೆ. ಇದೇ 18ರಂದು ಬೆಳಗ್ಗೆ 9 ಗಂಟೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಿದ್ದರಾಮಯ್ಯ ಅವರು ನಾಲ್ಕು ದಿನಗಳ ಕಾಲ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಡಿ.17ರಂದು ಸ್ವದೇಶಕ್ಕೆ ಹಿಂದಿರುಗಿದ ಮರು ದಿನ ಶಾಸಕಾಂಗ ಸಭೆ ನಡೆಯಲಿದೆ. ಕಾಂಗ್ರೆಸ್ ಶಾಸಕರ ವಿಷಯದಲ್ಲಿ ತಾರತಮ್ಯವಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಸಚಿವರು ಕೈಗೆ ಸಿಗುತ್ತಿಲ್ಲ. ಶಾಸಕರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂಬ ಆರೋಪ ಮಾಡುತ್ತಾ ಬಹಳಷ್ಟು ಮಂದಿ ಕಾಂಗ್ರೆಸ್ ಶಾಸಕರು ದೋಸ್ತಿ ಸರ್ಕಾರದ ವಿರುದ್ಧ ಬಂಡೇಳಲು ಮುಂದಾಗಿದ್ದರು.

ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಮುಖಂಡರು ಖುದ್ದಾಗಿ ಮುಖ್ಯಮಂತ್ರಿ ಅವರನ್ನು ಕರೆಸಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇವೆ. ನಿಮ್ಮ ಸಮಸ್ಯೆಗಳನ್ನು ಅಲ್ಲಿ ಹೇಳಿಕೊಳ್ಳಿ ಎಂದು ಸಲಹೆ ನೀಡಿದರು. ಅದರಂತೆ ಡಿ.8ರಂದು ಬೆಂಗಳೂರನಲ್ಲಿ ಶಾಸಕಾಂಗ ಸಭೆ ನಡೆಯಬೇಕಿತ್ತು. ಆದರೆ, ಬಹಳಷ್ಟು ಮಂದಿ ಶಾಸಕರು ಸಭೆಗೆ ಗೈರು ಹಾಜರಾಗುವ ಮುನ್ಸೂಚನೆ ನೀಡಿದ್ದರಿಂದ ಸಭೆಯನ್ನು ಮುಂದೂಡಲಾಯಿತು. ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು, ಶಾಸಕರು ಅದರಲ್ಲಿ ಭಾಗವಹಿಸಿರುತ್ತಾರೆ. ಅದೇ ಸಂದರ್ಭದಲ್ಲಿ ಶಾಸಕಾಂಗ ಸಭೆ ನಡೆಸುವುದು ಸೂಕ್ತ ಎಂಬ ಹಿನ್ನೆಲೆಯಲ್ಲಿ ಡಿ.18ರಂದು ಇಲ್ಲಿ ಶಾಸಕಾಂಗ ಸಭೆ ನಡೆಯಲಿದೆ.

ಸಾಮಾನ್ಯವಾಗಿ ಶಾಸಕಾಂಗ ಸಭೆ ಎಂದರೆ ಆಯಾ ಪಕ್ಷಗಳ ಪ್ರಮುಖರು, ಶಾಸಕರು, ಸಂಸದರು, ಸಚಿವರು ಭಾಗವಹಿಸುತ್ತಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕಾಂಗ ಸಭೆಗೆ ಕುಮಾರಸ್ವಾಮಿ ಅವರು ಹಾಜರಾಗುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕರ ದೂರುಗಳನ್ನು ಕೇಳಿ ಅದಕ್ಕೆ ಪರಿಹಾರ ನೀಡಬೇಕೆಂದು ಸಿದ್ದರಾಮಯ್ಯ ಸೂಚಿಸಿದ್ದರು. ಅದರಂತೆ ಕುಮಾರಸ್ವಾಮಿ ಅವರು ಶಾಸಕಾಂಗ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

Facebook Comments

Sri Raghav

Admin