ಮನೆ ಮೇಲ್ಚಾವಣಿ ಕುಸಿದು 6 ಜನ ಮೃತಪಟ್ಟಿದ್ದ ಕುಟುಂಬಕ್ಕೆ 24ಲಕ್ಷ ಪರಿಹಾರ ಚೆಕ್ ನೀಡಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬಸವಕಲ್ಯಾಣ : ಇಲ್ಲಿ ಬುಧವಾರ ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ 6 ಜನರು ಮೃತಪಟ್ಟ ಮನೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಭೇಟಿ ನೀಡಿ ಪರಿಹಾರದ 24ಲಕ್ಷ ರೂ. ಚೆಕ್ ವಿತರಿಸಿ ಸಾಂತ್ವಾನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು 100 ವರ್ಷಕ್ಕೂ ಹಳೆಯದಾದ ಇಂತಹ ನೂರಾರು ಮನೆಗಳು ಇರುವ ಬಗ್ಗೆ ಮಾಹಿತಿ ದೊರೆತಿದ್ದು ಅಂತಹ ಮನೆಗಳ ಸಮೀಕ್ಷೆಯನ್ನು ನಡೆಸಿ ವರದಿಯನ್ನು ಸಲ್ಲಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದೇನೆ.

ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಬೀದರ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಲಾಗುವುದು. ಬಸವಕಲ್ಯಾಣ ತಾಲೂಕಿನಲ್ಲಿ 2ಸಾವಿರ ಮನೆಗಳ ನಿರ್ಮಾಣಕ್ಕೆ ಆದೇಶಿಸಿದ್ದೇನೆ ಎಂದರು. ಸಚಿವರಾದ ಬಂಡೆಪ್ಪ ಕಾಶೆಂಪೂರ್, ರಾಜಶೇಖರ ಪಾಟೀಲ್, ರಹೀಂಖಾನ್, ಶಾಸಕ ಬಿ. ನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಹೈದರಾಬಾದ್ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿ :
ಹೈದರಾಬಾದ್ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಯುವಕರ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ದೂರದೃಷ್ಟಿ ಹೊಂದಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.

ಅವರು ಇಂದು ಕಲಬುರಗಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಹೈ.ಕ. ಭಾಗದ ಎಲ್ಲ ಜಿಲ್ಲೆಗಳಲ್ಲಿ ಅವಶ್ಯಕವಿರುವ ಶಾಲಾ ಕೊಠಡಿಗಳ ಮಾಹಿತಿಯನ್ನು ಪಡೆಯಲಾಗಿದೆ. ಮುಂದಿನ 8-10 ದಿನಗಳಲ್ಲಿ ಸಭೆ ಕರೆದು ಎಲ್ಲ ಶಾಲೆಗಳ ದುರಸ್ತಿ, ಹೆಚ್ಚುವರಿ ಕಟ್ಟಡ ಮತ್ತು ಶಿಕ್ಷಕರ ಕೊರತೆ ನೀಗಿಸುವಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು .

ಹೈ.ಕ. ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಸಿಗುವ ಹಾಗೆ ಕ್ರಮ ಕೈಗೊಳ್ಳಲಾಗುವುದು. ಈ ವರ್ಷ ಬೇರೆ ಜಿಲ್ಲೆಗಳಿಗೆ ಹೋಲಿಕೆಯಾಗುವ ಹಾಗೆ ಹೈ.ಕ. ಭಾಗದ ಜಿಲ್ಲೆಯ ಫಲಿತಾಂಶವೂ ಹೆಚ್ಚಿಸುವಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು. ಈ ಹಿಂದೆ ಕಲಬುರಗಿ ಜಿಲ್ಲೆಯ ಹೇರೂರ ಬಿ. ಗ್ರಾಮದಲ್ಲಿ ನಿಗದಿಯಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಮಳೆಯಿಂದಾಗಿ ಮುಂದೂಡಲ್ಪಟ್ಟಿತ್ತು ಈ ಗ್ರಾಮದಲ್ಲಿ ಸುಮಾರು 500 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದ್ದು , ಗ್ರಾಮದ ಅಭಿವೃದ್ಧಿಗೆ ಕ್ರಮ ಜರುಗಿಸಲಾಗಿದೆ.

ಗ್ರಾಮ ವಾಸ್ತವ್ಯ ಮಾಡುವ ಹಳ್ಳಿಗಳಲ್ಲಿದೆ ಎಲ್ಲ ಹಳ್ಳಿಗಳಲ್ಲಿಯೂ ಮೂಲ ಭೂತ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಜರುಗಿಸಲಾಗುವುದು. ಗ್ರಾಮ ವಾಸ್ತವ್ಯದ ಮೂಲಕ ಮೈತ್ರಿ ಸರಕಾರವನ್ನು ಜನರ ಹತ್ತಿರಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಿಸಲಾಗುತ್ತಿದೆ ಈಗಾಗಲೇ ಎರಡು ಗ್ರಾಮ ವಾಸ್ತವ್ಯ ಗಳು ಪೂರ್ಣಗೊಂಡಿವೆ ಎಂದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin