ಬಜೆಟ್’ನಲ್ಲಿ ಜನರ ಮೇಲೆ ಹೇರಿರುವ ತೆರಿಗೆ ಭಾರ ಕಡಿಮೆ ಮಾಡಲು ಸಿಎಂ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-CM

ಬೆಂಗಳೂರು,ಜು.7- ಪೆಟ್ರೋಲ್, ಡೀಸೆಲ್ ಹಾಗೂ ವಿದ್ಯುತ್ ಬೆಲೆ ಏರಿಕೆ ಮಾಡಿರುವ ರಾಜ್ಯ ಬಜೆಟ್ ಬಗ್ಗೆ ಜನಸಾಮಾನ್ಯರು ಮತ್ತು ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತೆರಿಗೆ ಭಾರ ಕಡಿಮೆ ಮಾಡುವ ಚಿಂತನೆ ನಡೆಸಿದ್ದಾರೆ. ಇದೇ 12ರಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿರುವ ಕುಮಾರಸ್ವಾಮಿ, ಪೆಟ್ರೋಲ್, ಡೀಸೆಲ್ ಸೆಸ್ ಹಾಗೂ ವಿದ್ಯುತ್ ದರ ಹಿಂಪಡೆಯುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಈಗಾಗಲೇ ಈ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಅವರು, ಡೀಸೆಲ್-ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆ ಹಾಗೂ ಪ್ರತಿ ಯೂನಿಟ್‍ಗೆ ಹೆಚ್ಚಿಸಲಾಗಿದ್ದ ವಿದ್ಯುತ್ ದರವನ್ನು ಹಿಂಪಡೆಯಲು ಸೂಚನೆ ಕೊಟ್ಟಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಮಂಡಿಸಿದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್‍ನಲ್ಲಿ ತೈಲ ಬೆಲೆ ಹಾಗೂ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ತೆರಿಗೆ ಬಿಸಿ ಮುಟ್ಟಿಸಿದ್ದರು. ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರು ಪಡೆದಿದ್ದ ಸುಸ್ತಿ ಸಾಲ ಮನ್ನಾ ಮಾಡಲು ತೆರಿಗೆ ವಿಧಿಸುವುದು ಅನಿವಾರ್ಯ ಎಂಬುದು ಅವರ ಉತ್ತರವಾಗಿತ್ತು. ರೈತರ ಎರಡು ಲಕ್ಷದವರೆಗಿನ ಸುಮಾರು 34000 ಕೋಟಿ ಸಾಲ ಮನ್ನಾ ಮಾಡಬೇಕಾದರೆ ಸಂಪನ್ಮೂಲ ಕ್ರೋಢೀಕರಣಕ್ಕೆ ತಮ್ಮದೇ ಆದ ಪರಿಹಾರ ಕಂಡುಕೊಂಡಿದ್ದರು.  ಪ್ರತಿ ಲೀಟರ್ ಪೆಟ್ರೋಲ್‍ಗೆ 1. 14 ರೂ. ಒಂದು ಲೀಟರ್ ಡೀಸೆಲ್‍ಗೆ 1. 12 ರೂ. ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 10ರಿಂದ 20 ಪೈಸೆ ಹಾಗೂ ಅಬಕಾರಿ ಶುಲ್ಕವಾಗಿ ಶೇ.4ರಷ್ಟು ತೆರಿಗೆ ಹೆಚ್ಚಳ ಮಾಡಿದ್ದರು.

ಸಾರ್ವಜನಿಕರ ಆಕ್ರೋಶ:
ರೈತರ ಸಾಲಮನ್ನಾ ಮಾಡುವುದರಿಂದ ತೆರಿಗೆ ಹೆಚ್ಚಳಕ್ಕೆ ಜನರಿಂದ ವಿರೋಧ ವ್ಯಕ್ತವಾಗುವುದಿಲ್ಲ ಎಂಬುದು ಸರ್ಕಾರದ ವಾದವಾಗಿತ್ತು. ಆದರೆ ಬಜೆಟ್ ಮಂಡನೆಯಾದ ಬೆನ್ನಲ್ಲೇ ಬಜೆಟ್‍ಗೆ ಅಲ್ಲಲ್ಲಿ ಅಸಮಾಧಾನದ ಹೊಗೆ ಕಂಡುಬಂದಿದೆ. ಬಿಜೆಪಿ, ರೈತರು ಈಗಾಗಲೇ ಬಜೆಟ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಡೀಸೆಲ್ ಮತ್ತು ಪೆಟ್ರೋಲ್ ದರ ಏರಿಕೆಯಿಂದಾಗಿ ನೆರವಾಗಿ ಜನಸಾಮಾನ್ಯರಿಗೆ ಬಿಸಿ ಮುಟ್ಟುತ್ತದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಇಂಥ ಸಂದರ್ಭದಲ್ಲಿ ಮತ್ತೊಂದು ತೆರಿಗೆ ಭಾರ ಹೊರಲು ಜನರು ಸಿದ್ದವಿಲ್ಲ. ಹೀಗಾಗಿ ಅನೇಕ ಕಡೆ ಪ್ರತಿಭಟನೆ ನಡೆದಿದ್ದವು. ತೈಲ ಬೆಲೆ ಏರಿಕೆಯಾಗಿರುವುದರಿಂದ ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಬೆಲೆ ಏರಿಕೆಯಾಗುತ್ತದೆ. ಇದರ ಬಿಸಿಯೂ ನೇರವಾಗಿ ಗ್ರಾಮೀಣ ಜನರಿಗೆ ತಟ್ಟುತ್ತದೆ. ಹೀಗಾಗಿ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್‍ನಿಂದಲೂ ವಿರೋಧ:
ಇನ್ನು ಕುಮಾರಸ್ವಾಮಿ ಮಂಡಿಸಿದ ಬಜೆಟ್‍ಗೆ ಕಾಂಗ್ರೆಸ್‍ನಿಂದಲೇ ಅಪಸ್ವರ ಕೇಳಿಬಂದಿದೆ. ಮಾಜಿ ಸಚಿವ ಎಚ್.ಕೆ.ಪಾಟೀಲ್ ನೇರವಾಗಿಯೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ಪತ್ರ ಬರೆದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಬಜೆಟ್‍ನಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇದನ್ನೇ ಪ್ರತಿಪಕ್ಷಗಳು ಅಸ್ತ್ರವಾಗಿಟ್ಟುಕೊಂಡು ಬೀದಿಗಿಳಿದರೆ ಲೋಕಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ತೈಲ ಬೆಲೆ ಏರಿಕೆಯಾದಾಗ ನಾವೇ ವಿರೋಧ ವ್ಯಕ್ತಪಡಿಸಿದ್ದೇವೆ. ಅಲ್ಲದೆ ಅಧ್ಯಕ್ಷರಾದ ರಾಹುಲ್ ಗಾಂಧಿ ಅನೇಕ ಬಾರಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದಲ್ಲದೆ ನರೇಂದ್ರ ಮೋದಿಗೆ ಬೆಲೆ ಇಳಿಕೆ ಮಾಡುವಂತೆ ಸವಾಲು ಹಾಕಿದ್ದರು. ನಮ್ಮ ರಾಜ್ಯದಲ್ಲೇ ನಾವು ತೈಲ ಬೆಲೆ ಏರಿಕೆ ಮಾಡಿರುವುದರಿಂದ ಕೇಂದ್ರ ಸರ್ಕಾರವನ್ನು ಟೀಕಿಸುವ ನೈತಿಕತೆ ಕಳೆದುಕೊಳ್ಳಲಿದ್ದೇವೆ ಎಂದು ಅನೇಕ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರ ಹಾಕಿದ್ದರು. ಈ ಎಲ್ಲವನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ತೈಲ ಬೆಲೆ ಇಳಿಸುವ ನಿರೀಕ್ಷೆ ಇದೆ.

Facebook Comments

Sri Raghav

Admin