ಅಸಮಾಧಾನದ ಗಾಯಕ್ಕೆ ‘ಸಂಪುಟ ಪುನಾರಚನೆ’ಯ ಮುಲಾಮು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಉಭಯ ಪಕ್ಷಗಳ ನಾಯಕರು ಕಾರ್ಯತಂತ್ರ ರೂಪಿಸಿದ್ದು, ಸದ್ಯದಲ್ಲಿಯೇ ಸಂಪುಟ ಪುನಾರಚನೆ ಮಾಡಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಭಾರೀ ಸೋಲುಂಟಾದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಅತೃಪ್ತರು ಬಿಜೆಪಿಗೆ ಹೋಗುವುದನ್ನು ತಡೆಯಲು ಈ ತಂತ್ರ ಅನುಸರಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಕುರಿತಂತೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸುದೀರ್ಘ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ಪಕ್ಷ ಬಿಡದಂತೆ ತಡೆಯಲು ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ, ಹಾಲಿ ಸಚಿವರಲ್ಲಿ ಕೆಲವರನ್ನು ಕೈ ಬಿಡುವ ಸಾಧ್ಯತೆಗಳು ಇವೆ.

ಕಾಂಗ್ರೆಸ್-ಜೆಡಿಎಸ್‍ನ ಕೆಲವು ಸಚಿವರು ಸ್ವಇಚ್ಛೆಯಿಂದ ಸಚಿವ ಸ್ಥಾನ ತ್ಯಾಗ ಮಾಡುವುದಾಗಿಯೂ ಹೇಳಿದ್ದಾರೆ. ಖಾಲಿ ಇರುವ 3 ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದರ ಜೊತೆಗೆ ಕೆಲವು ಸಚಿವರನ್ನು ಕೈಬಿಟ್ಟು ಅತೃಪ್ತರಿಗೆ ಸಚಿವ ಸ್ಥಾನ ನೀಡಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಸಚಿವ ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿವೆ. ಅತೃಪ್ತ ಕಾಂಗ್ರೆಸ್ ಶಾಸಕರಾದ ಡಾ.ಸುಧಾಕರ್, ಬಿ.ಸಿ.ಪಾಟೀಲ್ ಸೇರಿದಂತೆ ಕೆಲವರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಲಾಗುತ್ತದೆ.

ಅತೃಪ್ತರಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂದು ಹೇಳಲಾಗುತ್ತಿದೆ.ಒಂದು ವರ್ಷ ಸಚಿವರಾಗಿದ್ದು, ಉತ್ತಮ ಸಾಧನೆ ಮಾಡದ ಕೆಲವರನ್ನು ಸಚಿವ ಸ್ಥಾನದಿಂದ ಕೈಬಿಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ.

ಸಚಿವರಾದ ಕೃಷ್ಣಭೈರೇಗೌಡ, ಯು.ಟಿ.ಖಾದರ್ ಸ್ವಇಚ್ಛೆಯಿಂದ ಸಚಿವ ಸ್ಥಾನ ಬಿಟ್ಟುಕೊಡುವುದಾಗಿ ಲೋಕಸಭೆ ಚುನಾವಣಾ ಪೂರ್ವದಲ್ಲಿಯೇ ಹೇಳಿದ್ದರು. ಸಂಪುಟದಿಂದ ಕೈಬಿಡುವವರ ಪಟ್ಟಿಯಲ್ಲಿ ಸಚಿವೆ ಜಯಮಾಲಾ, ಪುಟ್ಟರಂಗಶೆಟ್ಟಿ, ವೆಂಕಟರಮಣಪ್ಪ ಅವರ ಹೆಸರುಗಳು ಕೇಳಿಬರುತ್ತಿವೆ.

ಮತ್ತೆ ಬಿಜೆಪಿ ಆಪರೇಷನ್ ಕಮಲ ನಡೆಸುವ ಸಾಧ್ಯತೆಗಳಿದ್ದು, ಆಡಳಿತ ಪಕ್ಷದ ಅತೃಪ್ತ ಶಾಸಕರು ಬಿಜೆಪಿಗೆ ಹೋಗುವುದನ್ನು ತಡೆಯಲು ಬೇಕಾದ ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು, ಶತಾಯಗತಾಯ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಸರ್ಕಸ್ ನಡೆಸುತ್ತಿದ್ದಾರೆ. ಹೀಗಾಗಿ ಒಂದೆರಡು ದಿನದಲ್ಲಿ ಯಾರು ಸಂಪುಟ ಸೇರಲಿದ್ದಾರೆ, ಯಾರು ಸಂಪುಟದಿಂದ ನಿರ್ಗಮಿಸಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin