ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಸರ್ಕಾರದಿಂದ ಸ್ವಂತ ಮನೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಬೆಂಗಳೂರು,ಜೂ.22- ಕನ್ನಡ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಸ್ವಂತ ಮನೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.   ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಗರದಲ್ಲಿ ಏರ್ಪಡಿಸಿದ್ದ ಕಲಾಕುಲದ ಅಭಿನಂದನಾ ಸಿಂಚನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ತಮಗೆ ಇಲ್ಲಿನ ಸಮಸ್ಯೆ, ಕಲಾವಿದರು, ಸಹ ಕಲಾವಿದರು ತಂತ್ರಜ್ಞರು, ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪರಿಚಯವಿದೆ. ಅನೇಕರಿಗೆ ಸ್ವಂತ ಸೂರಿಲ್ಲ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ರಾಮನಗರದಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿ ನಿರ್ಮಿಸುವ ಚಿಂತನೆ ಇದೆ. ಇಂತಹ ಯೋಜನೆಯಿಂದ ಎರಡು ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಚಿತ್ರರಂಗದ ಸಮಗ್ರ ಅಭಿವೃದ್ದಿಗೆ ನೀಲನಕ್ಷೆ ಸಿದ್ದಪಡಿಸಿದರೆ ಅದಕ್ಕೆ ಬೇಕಿರುವ ಸಹಕಾರವನ್ನು ತಾವು ನೀಡಲು ಸಿದ್ದ. ಮಾಜಿ ಸಚಿವರು ಆದ ಹಿರಿಯ ನಟ ಅಂಬರೀಶ್ ಅವರು ಇದರ ನೇತೃತ್ವ ವಹಿಸಿಕೊಳ್ಳಲಿ ಎಂದು ಹೇಳಿದರು. ಈ ಹಿಂದಿನ ಸರ್ಕಾರ ಮೈಸೂರು-ನಂಜನಗೂಡು ರಸ್ತೆಯಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ 150 ಎಕರೆ ಜಮೀನು ಮೀಸಲಿಟ್ಟಿದೆ. ಮೈಸೂರು ನಗರವನ್ನು ಪ್ರವಾಸೋದ್ಯಮ ತಾಣವಾಗಿ ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ ಎಂದರು.

ನಿರ್ಮಾಪಕರಿಗೆ ಸರ್ಕಾರದಿಂದ ಸಿಗಬೇಕಿರುವ ಸಬ್ಸಿಡಿ ಹಣ 40 ಕೋಟಿ ರೂ.ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಮಲ್ಟಿಫ್ಲೆಕ್ಸ್‍ಗಳಲ್ಲಿ ಚಿತ್ರಗಳಿಗೆ ಇರುವ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಇದರೊಂದಿಗೆ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ ವಾಣಿಜ್ಯ ಮಂಡಳಿಗೆ 1.50 ಕೋಟಿ ರೂ. ದಂಡ ವಿಧಿಸಿದೆ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಈ ಶುಲ್ಕವನ್ನು ಕಡಿತಗೊಳಿಸಬೇಕು,ಕಲಾವಿದರ ಕ್ಷೇಮಾಭಿವೃದ್ದಿ ನಿಧಿಗೆ 10 ಕೋಟಿ ನೀಡಬೇಕು ಎಂದು ಕೋರಿದರು.

ನಟ ಅಂಬರೀಶ್ ಮಾತನಾಡಿ, ದೇವೇಗೌಡರಂಥವರಿಗೆ ದಿನದ 24 ಗಂಟೆ ಕೆಲಸ ಮಾಡಲು ಸಾಲುವುದಿಲ್ಲ. ಒಂದು ಗಂಟೆ ಇಲ್ಲಿದ್ದರೆ ಮತ್ತೊಂದು ಗಂಟೆ ಇನ್ನೆಲ್ಲೊ ಇರುತ್ತಾರೆ. ಇಂತಹ ಕ್ರಿಯಾಶೀಲರ ಮಗನಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಚಿತ್ರರಂಗದ ಕಷ್ಟ ಗೊತ್ತಿದೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲಿ ಎಂದು ಹೇಳಿದರು.  ಇದೇ ವೇಳೆ ಕುಮಾರಸ್ವಾಮಿ ಅವರು ನಡೆದು ಬಂದ ಹಾದಿಯ ಬಗ್ಗೆ ನಿರ್ದೇಶಕ ಎಸ್.ನಾರಾಯಣ್ ನಿರ್ಮಿಸಿದ್ದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.  ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲ, ಹಿರಿಯ ನಟಿ ಬಿ.ಸರೋಜಾದೇವಿ, ನಟ ದರ್ಶನ್ ಸೇರಿದಂತೆ ಚಿತ್ರರಂಗದ ನಟ,ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರು ಉಪಸ್ಥಿತರಿದ್ದರು.

Facebook Comments

Sri Raghav

Admin