ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗಾಗಿ ಮಿಡಿದ ಸಿಎಂ ಹೃದಯ

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy--NDTV

ಚಿಕ್ಕಮಗಳೂರು, ಸೆ.22- ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಸಂಪೂರ್ಣ ಚಿಕಿತ್ಸೆ ಕೊಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಡ ಕುಟುಂಬವೊಂದಕ್ಕೆ ಭರವಸೆ ನೀಡಿದ್ದಾರೆ.   ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶೃಂಗೇರಿಗೆ ಭೇಟಿ ನೀಡಿದ್ದಾರೆ. ಕಳೆದ ರಾತ್ರಿ 11 ಗಂಟೆಗೆ ಶೃಂಗೇರಿಗೆ ಬಂದಿರುವ ಕುಮಾರಸ್ವಾಮಿ, ರಾತ್ರಿ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ ಶಾರದಾಂಬೆಯ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಬಡ ಕುಟುಂಬವೊಂದು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡಾಗ ಮಗುವಿನ ಚಿಕಿತ್ಸೆಯ ಸಂಪೂರ್ಣ ಹೊಣೆಯನ್ನು ಅವರು ಹೊತ್ತುಕೊಂಡಿದ್ದಾರೆ.  ಬಾಳೆಹೊನ್ನೂರು ಸಮೀಪದ ನೆಲ್ಲಿಮಕ್ಕಿಯ ದೇವರಾಜ, ಸುನಿತಾ ದಂಪತಿಯ ಐದು ವರ್ಷದ ಅಮಂತ ಅನಿಮಿಯಾ ಕಾಯಿಲೆಯಿಂದ ಬಳಲುತ್ತಿದ್ದಾನೆ. ಅದಕ್ಕಾಗಿ ಪ್ರತಿ ತಿಂಗಳೂ ಚಿಕಿತ್ಸೆಗೆ 25 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. ಚಿಕಿತ್ಸೆಗೆ ನೆರವು ನೀಡುವಂತೆ ಬಡ ದಂಪತಿ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡಿದೆ. ತಕ್ಷಣ ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ ಅವರು, ಬೆಂಗಳೂರಿಗೆ ಬನ್ನಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿಸುತ್ತೇನೆ ಎಂದು ಬಡ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.

# ಸಂಕಷ್ಟ ನಿವಾರಣೆಗಾಗಿ ಹೋಮ, ಹವನ :
ಶೃಂಗೇರಿಯ ಶಾರದಾಂಬೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬದವರು ವಿವಿಧ ಹೋಮ, ಹವನಗಳನ್ನು ನೆರವೇರಿಸಿದರು.ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವೇಗೌಡರು, ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ರೇವಣ್ಣ, ಚೆನ್ನಮ್ಮ ದೇವೇಗೌಡ, ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಅವರು ಶೃಂಗೇರಿಯ ಶ್ರೀ ಭಾರತಿರ್ಥ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದರು.

ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಮೊದಲಿಗೆ ಗಣಪತಿ ಹೋಮ, ಮೃತ್ಯುಂಜಯ ರುದ್ರಹೋಮ, ನಂತರ ಪ್ರತಿಕ್ರಿಯಾ ಶಾಲಿನಿ ಹೋಮ ನೆರವೇರಿಸಲಾಯಿತು. ವಿಧಾನಸಭೆ ಚುನಾವಣೆಗೂ ಮುನ್ನ ಅತಿರುದ್ರ ಯಾಗ ನೆರವೇರಿಸಲಾಗಿತ್ತು. ಈಗ ಸಂಷ್ಟ ನಿವಾರಣೆಗಾಗಿ ಇಂದು ಶೃಂಗೇರಿಯಲ್ಲಿ ವಿವಿಧ ಹೋಮ-ಹವನಗಳನ್ನು ಗೌಡರ ಕುಟುಂಬದವರು ನೆರವೇರಿಸಿದ್ದಾರೆ. ನಿನ್ನೆ ಮಧ್ಯರಾತ್ರಿ 12.30ರಲ್ಲಿ ಎಚ್.ಡಿ.ಕುಮಾರಸ್ವಾಮಿ ಶೃಂಗೇರಿಗೆ ಆಗಮಿಸಿದ್ದರು. ಈ ವೇಳೆ ಸಂಗಮೇಶ್ವರಪೇಟೆ, ಜಯಪುರ, ಬಾಳೆಹೊನ್ನೂರಿನಲ್ಲಿ ಪಕ್ಷದ ಕಾರ್ಯಕರ್ತರು ತಡರಾತ್ರಿವರೆಗೂ ಕಾದು ನಿಂತು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು. ದೇವರು ನಿಮ್ಮನ್ನು , ಸರ್ಕಾರವನ್ನು ರಕ್ಷಿಸಲಿ ಎಂದು ಜನರು ಈ ವೇಳೆ ಹಾರೈಸಿದರು.

Facebook Comments

Sri Raghav

Admin