ಪಿಎಂ ಮೋದಿ ಭೇಟಿ ನಂತರ ಸಿಎಂ ಕುಮಾರಸ್ವಾಮಿ ಹೇಳಿದ್ದೇನು..?
ನವದೆಹಲಿ, ಜೂ.18- ನವದೆಹಲಿ- ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ” ಕಾವೇರಿ ಪ್ರಾಧಿಕಾರ ರಚನೆ “ಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ರಾಜ್ಯಕ್ಕೆ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿಗೆ ಒತ್ತಾಯಿಸಿದ್ದಾರೆ.ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕುಮಾರಸ್ವಾಮಿ ಅವರು, ಪ್ರಸ್ತುತ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗಲಿ ಎಂಬುದನ್ನು ಮನವರಿಕೆ ಮಾಡಿಕೊಟ್ಡರು.
ಪ್ರಧಾನಿ ಭೇಟಿ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಮುಖ್ಯಮಂತ್ರಿಯವರು ತಾವು ಪ್ರಧಾನಿ ಗೃಹ ಸಚಿವರಾದ ರಾಜನಾಥ್ ಸಿಂಗ್ ಹಾಗೂ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಕೆಲವು ಯೋಜನೆಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದರು. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕೇದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿರುವ ಲೋಪದೋಷಗಳನ್ನು ಹೆಸರಿಸಿ ಗಮನ ಸೆಳೆದಿರುವುದಾಗಿ ತಿಳಿಸಿದರು. ಪ್ರಮುಖವಾಗಿ ಪ್ರತಿ ಹತ್ತು ದಿನಕ್ಕೆ ಡ್ಯಾಂ ನೀರು ಅಳತೆ ಮಾಡುವುದು, ನಮ್ಮ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದು ಪ್ರಾಧಿಕಾರ ನಿರ್ಧಾರ ಮಾಡಲಿರುವ ಅವೈಜ್ಞಾನಿಕ ಅಂಶ ಹಾಗೂ ಮಳೆ ಕೊರತೆ ಆಧರಿಸಿ ನೀರು ಬಿಡುವ ವ್ಯವಸ್ಥೆ, ಬೆಳೆ ಬೆಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಮನವೊಲಿಸುವುದು ಕಷ್ಟ ಎಂಬುವುದನ್ನು ಮನವರಿಕೆ ಮಾಡಿದ್ದಾಗಿ ತಿಳಿಸಿದರು. ಈ ಕುರಿತು ಇನ್ನೊಂದು ಸಭೆ ಸೇರಿ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಅಧಿಸೂಚನೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ಆಗಬೇಕಿತ್ತು. ಕೆಲ ಬದಲಾವಣೆ ಇದ್ದಲ್ಲಿ ಅಲ್ಲಿ ಚರ್ಚೆ ಬಳಿಕ ಬದಲಾಗಲಿಸಲಾಗುವುದು ಎಂದು ತಿಳಿಸಿದ್ದಾಗಿ ವಿವರಿಸಿದರು.
ಗೃಹ ಸಚಿವರ ಭೇಟಿ ವೇಳೆ ರಾಜ್ಯಕ್ಕೆ ಪೊಲೀಸ್ ಇಲಾಖೆ ಭದ್ರತೆಯ ಕೆಲವು ಹೆಚ್ಚುವರಿ ಯೋಜನೆ ಜಾರಿ ತರಲು ಆರ್ಥಿಕ ನೆರವು ಕೇಳಲಾಗಿದೆ. ಪ್ರಕೃತಿ ವಿಕೋಪಕ್ಕೆ ಎನ್ಡಿಆರ್ ಎಫ್ ಮೂಲಕ ರಾಜ್ಯಕ್ಕೆ ಕಡಿಮೆ ಹಣ ಬಿಡುಗಡೆ ಆಗಿರುವ ಕುರಿತು ಗಮನ ಸೆಳೆದಿದ್ದು, ಇತರೆ ರಾಜ್ಯಗಳಿಗೆ ನೀಡಿರುವ ಅನುದಾನದ ಪ್ರಮಾಣವನ್ನು ತಿಳಿಸಿ ಚರ್ಚೆ ನಡೆಸಿದ್ದೇವೆ. ಈ ಕುರಿತು ಸಚಿವರು ಆಗಿರುವ ವ್ಯತ್ಯಾಸವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಶ್ವಾಸನೆ ನೀಡಿದ್ದಾಗಿ ಸ್ಪಷ್ಟಪಡಿಸಿದರು. ಬಳಿಕ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ಭೇಟಿ ಮಾಡಿ ರಾಜ್ಯದ ರಸ್ತೆಗಳ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದ್ದಾಗಿ ಹಾಗೂ ರಾಜ್ಯಕ್ಕೆ 34 ಸಾವಿರ ಕೋಟಿ ರೂ. ಯೋಜನೆಗೆ ಒಪ್ಪಿಗೆ ಸಿಕ್ಕಿರುವುದಾಗಿ ತಿಳಿಸಿದರು. ಅಲ್ಲದೇ ಚರ್ಚೆ ವೇಳೆ ಸಾಗರ, ಸಿಗಂಧೂರು, ಹಾಸನ, ತುಮಕೂರು ಹೆದ್ದಾರಿ ಸೇರಿದಂತೆ ಹಲವು ಹೊಸ ಯೋಜನೆಗಳಿಗೆ ಅನುದಾನಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದರು.
ಸಾಲಮನ್ನಾ ಮಾಡಲು ಬದ್ದ :
ರೈತರ ಸಾಲಮನ್ನಾ ಕುರಿತಂತೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಮನವಿ ಮಾಡಿದ ಕುಮಾರಸ್ವಾಮಿ ಅವರು, ಚುನಾವಣೆಗೂ ಮುನ್ನ ನಾಡಿನ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಲು ನಮ್ಮ ಸರ್ಕಾರ ಬದ್ದವಿದೆ ಎಂದರು. ಸಾಲಮನ್ನಾ ವಿಷಯದಲ್ಲಿ ಸಮ್ಮಿಶ್ರ ಸರ್ಕಾರಗಳ ನಡುವೆ ಗೊಂದಲವಿದೆ ಎಂಬುದು ಕೇವಲ ಉಹಾಪೋಹ.ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ತೀರ್ಮಾನ ಕೈಗೊಳ್ಳಲಿದ್ದೇವೆ.ರೈತರು ಗೊಂದಲಕ್ಕೆ ಒಳಗಾಗಬಾರದೆಂದು ಮನವಿ ಮಾಡಿದರು.
ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಸಾಲಮನ್ನಾ ಕ್ಕೆ ವಿರೋಧ ವ್ಯಕ್ತಪಡಿಸಿಲ್ಲ.ಸರ್ಕಾರದ ತೀರ್ಮಾನಕ್ಕೆ ಅವರ ಸಂಪೂರ್ಣ ಬೆಂಬಲವಿದೆ. ಅವರ ರಾಜಕೀಯ ಬದ್ದತೆಯ ಬಗ್ಗೆ ನನಗೆ ಎಳ್ಳಷ್ಟು ಸಂಶಯವಿಲ್ಲ ಎಂದು ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಡಿಯಲ್ಲಿ ಸಚಿವರಾದ ಹೆಚ್.ಡಿ ರೇವಣ್ಣ, ಸಿ.ಎಸ್ ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.