ಖಾತೆ ಹಂಚಿಕೆ ಸೇರಿದಂತೆ ಯಾವುದೇ ವಿಷಯಗಳಲ್ಲಿ ಗೊಂದಲಗಳಿಲ್ಲ : ಸಿಎಂ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಬೆಂಗಳೂರು, ಜೂ.5- ಖಾತೆ ಹಂಚಿಕೆ ಸೇರಿದಂತೆ ಯಾವುದೇ ವಿಷಯಗಳಲ್ಲಿ ಗೊಂದಲಗಳಿಲ್ಲ. ಅನಗತ್ಯವಾಗಿ ಯಾರೂ ಈ ವಿಷಯದಲ್ಲಿ ಆತಂಕಕ್ಕೆ ಒಳಗಾಗಬಾರದು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇಂಧನ ಖಾತೆ ಬಿಟ್ಟು ಕೊಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವೆಲ್ಲ ಪಕ್ಷದ ಆಂತರಿಕ ವಿಚಾರ. ಖಾತೆ ಹಂಚಿಕೆ ವಿಷಯ ಬಂದಾಗ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಈ ಬಗ್ಗೆ ಯಾರೂ ಆತಂಕಪಡುವುದು ಬೇಡ. ಕಾಂಗ್ರೆಸ್ ನಾಯಕರು ಇಂದು ದೆಹಲಿಗೆ ತೆರಳಿದ್ದಾರೆ. ಅಲ್ಲಿ ಚರ್ಚೆಯಾದ ನಂತರ ಎಲ್ಲವೂ ಇತ್ಯರ್ಥವಾಗಲಿದೆ ಎಂದು ಹೇಳಿದರು.

ಜೆಡಿಎಸ್‍ನ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಬಾರದು ಎಂಬ ನಿರ್ಧಾರವಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ. ಅದೆಲ್ಲ ಆಂತರಿಕ ವಿಚಾರ. ಅದೆನ್ನೆಲ್ಲಾ ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು ಪುನರುಚ್ಚರಿಸಿದರು. ಪ್ಯಾಸ್ಟಿಕ್ ಮೇಲೆ ಶೇ.4ರಿಂದ 5ರಷ್ಟು ತೆರಿಗೆಯನ್ನು ಹೆಚ್ಚಿಸಿ ಅದರ ಬಳಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನಗರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಅರಣ್ಯ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಏರ್ಪಡಿಸಲಾಗಿದ್ದ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವರ್ಷ ಪರಿಸರ ದಿನಾಚರಣೆಗಾಗಿ ಪ್ಲ್ಯಾಸ್ಟಿಕ್ ಮಾಲಿನ್ಯ ಹಿಮ್ಮಟ್ಟಿ ಎಂಬ ಧ್ಯೇಯ ವಾಕ್ಯ ಅಳವಡಿಸಿಕೊಳ್ಳಲಾಗಿದೆ. ಪರಿಸರ ರಕ್ಷಣೆಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡದೇ ಇದ್ದರೆ ನಿಧಾನವಾದ ವಿಷವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗುತ್ತೇವೆ. ಯಾವುದೇ ದಿನಸಿ ಅಂಗಡಿ, ಹಣ್ಣು-ತರಕಾರಿ, ಬಟ್ಟೆ ಅಂಗಡಿಗೆ ಹೋದರೂ ಪ್ಲ್ಯಾಸ್ಟಿಕ್ ಬಳಕೆ ಸಾಮಾನ್ಯವಾಗಿದೆ. ಅದನ್ನು ನಿಯಂತ್ರಿಸಲು ಪ್ಲ್ಯಾಸ್ಟಿಕ್ ಮೇಲೆ ಶೇ.4ರಿಂದ 5ರಷ್ಟು ಹೆಚ್ಚುವರಿ ತೆರಿಗೆ ಹಾಕುವ ಕುರಿತು ಚಿಂತನೆ ನಡೆದಿದೆ ಎಂದರು.

ಇದರ ಜತೆಯಲ್ಲಿ ತೆಂಗು, ನಾರು ಉತ್ಪನ್ನಗಳ ಗುಡಿ ಕೈಗಾರಿಕೆಗಳಿಗೆ ಆದ್ಯತೆ ನೀಡಲು ಪ್ರಯತ್ನಿಸಲಾಗುವುದು. ಇದರಿಂದ ರೈತರ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಉತ್ಪನ್ನಗಳ ಬಳಸಿ ಕೈಗೊಳ್ಳಬಹುದಾದ ಉದ್ಯೋಗಾವಕಾಶಗಳನ್ನು ಮರೆತು ಯುವಕರು ನಗರ ಪ್ರದೇಶದತ್ತ ಬರುತ್ತಿದ್ದಾರೆ. ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ಗ್ರಾಮೀಣ ಉದ್ಯೋಗಗಳು ಹೆಚ್ಚಾಗುತ್ತವೆ. ಪರಿಸರ ರಕ್ಷಣೆಯೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರತಿ ವರ್ಷ ಅರಣ್ಯ ಇಲಾಖೆ ಐದರಿಂದ ಹತ್ತು ಕೋಟಿ ಸಸಿಗಳನ್ನು ನೆಟ್ಟಿರುವುದಾಗಿ ಹೇಳುತ್ತಿದೆ. ದಾಖಲೆಗಳಲ್ಲಿ ಅರಣ್ಯಾಭಿವೃದ್ಧಿ ಆಗುವುದು ಬೇಡ. ಪ್ರಾಮಾಣಿಕ ಪ್ರಯತ್ನಗಳಾಗಬೇಕು. ಪರಿಸರ ರಕ್ಷಣೆಗೆ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಸಮತೋಲನ ಹೆಚ್ಚಾಗುತ್ತದೆ. ನಾವು ಚಿಕ್ಕ ಹುಡುಗರಾಗಿದ್ದಾಗ ಸುಮಾರು 1970, 72ರಲ್ಲಿ ಸ್ವೆಟರ್ ಇಲ್ಲದೆ ಬೆಳಗ್ಗೆ ಮತ್ತು ಸಂಜೆ ಹೊರಗೆ ಬರಲಾಗುತ್ತಿರಲಿಲ್ಲ. ಆದರೆ ಈಗಿನ ಪರಿಸ್ಥಿತಿ ನೋಡಿ ತಾಪಮಾನ ಹೆಚ್ಚಾಗಿದೆ. ಇದಕ್ಕೆ ಕಾರಣ ಕೆರೆ ಮತ್ತು ಮರಗಳ ನಾಶ. ಬೆಂಗಳೂರು ನಿರ್ಮಿಸಿದ ನಮ್ಮ ಹಿರಿಯರು ನೂರಾರು ಕೆರೆ-ಕಟ್ಟೆಗಳನ್ನು ಕಟ್ಟಿಸಿದರು. ಅವುಗಳನ್ನು ಒತ್ತುವರಿ ಮಾಡಿಕೊಂಡು ಮುಚ್ಚಿ ಹಾಕಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾಳಾಗಿದೆ. ಮೆಟ್ರೋ ಕಾಮಗಾರಿಗಾಗಿ ನೂರಾರು ವರ್ಷಗಳ ಹಳೆಯ ಮರಗಳನ್ನು ಕಡಿಯಲಾಗಿದೆ. ಪರ್ಯಾಯವಾಗಿ ಮರ ಬೆಳೆಸುವ ಕಾರ್ಯವಾಗಿಲ್ಲ. ಕೇವಲ ದಾಖಲೆಗಳಲ್ಲಿ ಮಾತ್ರ ಮರಗಳನ್ನು ಬೆಳೆಸಲಾಗಿದೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.

ಪರಿಸರ ಎಂಬುದು ಕೇವಲ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದಲೂ ಪರಿಸರ ಹಾಳಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು. 1973ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಪರಿಸರ ರಕ್ಷಣೆಗಾಗಿ ವಿಶ್ವ ಜಾಗೃತಿ ಮೂಡಿಸಲು ಪ್ರಯತ್ನ ಮಾಡಿದರು. ಅದಕ್ಕೂ ಮೊದಲು 1972ರಲ್ಲಿ ವಿಶ್ವ ಶೃಂಗಸಭೆಗಳಲ್ಲಿ ಪರಿಸರ ಜಾಗೃತಿ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಆದರೆ ಇಂದಿಗೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಹೇಳಿದರು.

ಪ್ರತಿಯೊಬ್ಬರೂ ತಮ್ಮ ಮನೆಯ ಕಾಂಪೌಂಡ್‍ನಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಕರೆ ನೀಡಿದರು.
ಚಾಲೆಜಿಂಗ್ ಸ್ಟಾರ್ ದರ್ಶನ್ ಮಾತನಾಡಿ, ಹೆತ್ತ ತಾಯಿಯಂತೆಯೇ ಪರಿಸರವನ್ನು ಪ್ರೀತಿಸಬೇಕೆಂದು ಕರೆ ನೀಡಿದರು. ಈವತ್ತು ಮಾತ್ರ ಪರಿಸರ ದಿನಾಚರಣೆ ಆಚರಿಸಿ ನಿರ್ಲಕ್ಷಿಸಿ ಬಿಡಬಾರದು. ಪ್ರತಿಯೊಬ್ಬರೂ ಗಿಡ ನೆಡಬೇಕು. ಅದಕ್ಕೆ ಪ್ರತಿ ದಿನ ನೀರುಣಿಸಿ ಬೆಳೆಸಬೇಕೆಂದು ಮನವಿ ಮಾಡಿದರು.  ಶಾಸಕರಾದ ಅಶ್ವತ್ಥನಾರಾಯಣ, ಮೇಯರ್ ಸಂಪತ್‍ರಾಜ್, ಬಿಬಿಎಂಪಿ ಸದಸ್ಯರಾದ ಲಕ್ಷ್ಮಿನಾರಾಯಣ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಹಿರಿಯ ಅಧಿಕಾರಿಗಳಾದ ವಂದಿತಾಶರ್ಮ, ರಾಮಚಂದ್ರ, ವಿನಯ್‍ಕುಮಾರ್ ಗೋಗಿ, ಹುನಟಿ ಶ್ರೀಧರ್, ಜಯರಾಂ, ವೆಂಕಟೇಶ್‍ಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪರಿಸರ ರಕ್ಷಣೆಗಾಗಿ ಶ್ರಮಿಸಿದ ಗಣ್ಯರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಪರಿಸರ ಜಾಗೃತಿಯ ಹಲವಾರು ಸ್ಮರಣ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು.

Facebook Comments

Sri Raghav

Admin