ಸಾಲ ಮನ್ನಾದ ಫೈನಲ್ ರಿಪೋರ್ಟ್ ರೆಡಿ, ಒಟ್ಟು 48000ಕೋಟಿ ರೂ. ರೈತರ ಸಾಲಮನ್ನಾ

ಈ ಸುದ್ದಿಯನ್ನು ಶೇರ್ ಮಾಡಿ

CM-Kumaraswamy--01

ಬೆಂಗಳೂರು. ಜು. 21 : ರೈತರ ಬೆಳೆ ಸಾಲ ಮನ್ನಾ ಯೋಜನೆ ಕುರಿತು ಸರ್ಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಸಭೆ ಇಂದು ನಡೆದಿದ್ದು, ಸರ್ಕಾರವು ಸಹಕಾರಿ ವಲಯದ ಸಾಲ, ಪ್ರೋತ್ಸಾಹಧನ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಬೆಳೆ ಸಾಲ ಸೇರಿ ಒಟ್ಟು ಸುಮಾರು 48 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.  ಸಾಲ ಮನ್ನಾ ಕುರಿತು ಮುಖ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾಲಮನ್ನಾ ಯೋಜನೆಯನ್ನು ಸುಲಲಿತವಾಗಿ ಅನುಷ್ಠಾನಗೊಳಿಸಲು ಹಾಗೂ ರೈತರಿಗೆ ಹೊಸ ಬೆಳೆ ಸಾಲ ನೀಡಲು ಅನುಕೂಲ ಕಲ್ಪಿಸುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡುವ ಕುರಿತು ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗಿದೆ ಹೇಳಿದರು. ಈ ಕುರಿತು ರಾಷ್ಟ್ರೀಕೃತ ಬ್ಯಾಂಕಿನ ಅಧಿಕಾರಿಗಳು ಒಪ್ಪಿಗೆ ಕೊಟ್ಟಿದ್ದು, ತಮ್ಮ ಕೇಂದ್ರ ಕಚೇರಿ ಅಧಿಕಾರಿಗಳ ಜೊತೆ ಚರ್ಚಿಸಿ, ನಿರ್ದೇಶಕ ಮಂಡಳಿ ಅನುಮೋದನೆಪಡೆಯುವವುದಾಗಿ ತಿಳಿಸಿದ್ದಾರೆ.

ಬ್ಯಾಂಕುಗಳು ಅರ್ಹ ಸಾಲಗಳ ಅಂಕಿ ಅಂಶಗಳನ್ನು ನಿಗದಿತ ನಮೂನೆಯಲ್ಲಿ ಡಿಜಿಟಲ್ ಸಹಿಯೊಂದಿಗೆ ಸರ್ಕಾರಕ್ಕೆ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಸಾಲ ಮನ್ನಾ ಮಾಡಲು ರೂಪು ರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.  37,159 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳ ಬೆಳೆ ಸಾಲ, 9448 ಕೋಟಿ ರೂ. ಹೊಸಚಾಲ್ತಿ ಸಾಲ ಎಲ್ಲ ಸೇರಿ ಸುಮಾರು48 ಸಾವಿರ ಕೋಟಿರೂ. ಗಳಷ್ಟಾಗುತ್ತವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.  ಹಿಂದಿನ ಸರ್ಕಾರದ ಅವಧಿಯಲ್ಲಿ ಮನ್ನಾ ಮಾಡಲಾಗಿದ್ದ ಸಾಲದ ಕುರಿತ ಅನುದಾನವನ್ನು ಆರ್ಥಿಕ ಇಲಾಖೆ ಈಗಾಗಲೇ ಬಿಡುಗಡೆ ಮಾಡಿದೆ.  ಆದ್ದರಿಂದ ರೈತರು ಯಾವುದೇ ಕಾರಣಕ್ಕೆ ಆತಂಕ ಪಡಬೇಕಾಗಿಲ್ಲ. ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

# ಉಪಸಮಿತಿ ರಚನೆ : 
ರಾಜ್ಯ ಸರ್ಕಾರದ ಬೆಳೆ ಸಾಲ ಮನ್ನಾ ಯೋಜನೆಗೆ ಬ್ಯಾಂಕ್‌ಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಹಣ ಮರುಪಾವತಿ ಹಾಗೂ ಕಂತುಗಳ ಕುರಿತಂತೆ ರೂಪುರೇಷೆ ನಿರ್ಧರಿಸಲು ಉಪ ಸಮಿತಿ ರಚನೆಗೆ ನಿರ್ಧರಿಸಲಾಗಿದೆ.  ಉಪಸಮಿತಿಯು ಮುಂದಿನ ಮೂರು ವಾರಗಳಲ್ಲಿ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ನೀಡಬೇಕು. ಈ ವರದಿ ಆಧರಿಸಿ, ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.  ರಾಜ್ಯದಲ್ಲಿರುವ ಒಟ್ಟು ಬೆಳೆಸಾಲದ ಪ್ರಮಾಣ, ಆ ಪೈಕಿ ಸುಸ್ತಿಸಾಲ, ಅನುಪಯುಕ್ತ ಸಾಲದ ಪ್ರಮಾಣ, ಮರು ಹೊಂದಾಣಿಕೆ ಸಾಲದ ಮೊತ್ತ ಸೇರಿದಂತೆ ಬೆಳೆಸಾಲ ಒಟ್ಟು ಪ್ರಮಾಣ ನಿರ್ಧರಿಸಿ, ಆಯಾ ಬ್ಯಾಂಕ್‌ಗಳ ನಿಯಮಗಳಿಗೆ ಅನುಗುಣವಾಗಿ ಮನ್ನಾ ಮಾಡಬಹುದಾದ ಸಾಲದ ಮೊತ್ತವನ್ನು ನಿರ್ಧರಿಸುವುದು ಈ ಉಪ ಸಮಿತಿಯ ಜವಾಬ್ದಾರಿಯಾಗಿದೆ.

ಇದೇ ವೇಳೆ ಬ್ಯಾಂಕ್‌ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಸಾಲ ಮರು ಪಾವತಿ ಮಾಡುವಾಗ ಯಾವ ಬ್ಯಾಂಕ್‌ಗಳ ಪ್ರಮಾಣ ಎಷ್ಟಿರಬೇಕು ಹಾಗೂ 500 ಕೋಟಿ ರೂ.ಗಳಿಗಿಂತ ಹೆಚ್ಚು ಬೆಳೆ ಸಾಲ ನೀಡಿರುವ ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಬೆಳೆ ಸಾಲ ನೀಡಿರುವ ಬ್ಯಾಂಕ್‌ಗಳ ಮರುಪಾವತಿ ಸಾಮರ್ಥ್ಯವನ್ನು ಉಪ ಸಮಿತಿ ನಿರ್ಧರಿಸಲಿದೆ.  ಈ ಎಲ್ಲ ಅಂಶಗಳನ್ನು ಪರಿಗಣಿಸಿ ಉಪ ಸಮಿತಿ ನೀಡುವ ವರದಿಯ ಆಧಾರದ ಮೇಲೆ ರಾಜ್ಯ ಸರ್ಕಾರ ಬೆಳೆ ಸಾಲ ಮನ್ನಾ ಯೋಜನೆಯಡಿ ಆಯಾ ಬ್ಯಾಂಕ್‌ಗಳಿಗೆ ನಾಲ್ಕು ವಾರ್ಷಿಕ ಕಂತುಗಳಲ್ಲಿ ಬ್ಯಾಂಕ್‌ಗಳಿಗೆ ಹಣವನ್ನು ಭರಿಸಲಿದೆ.

# ಬೆಳೆಸಾಲ ಕೋಶ ಸ್ಥಾಪನೆ :
ಮುಖ್ಯಮಂತ್ರಿಗಳ ಹಣಕಾಸು ಸಲಹೆಗಾರ ಸುಬ್ರಹ್ಮಣ್ಯ ಅವರು ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ರೈತರು ಪಡೆದಿರುವ ಬೆಳೆಸಾಲದ ಪ್ರಮಾಣವನ್ನು ನಿಖರವಾಗಿ ಗುರುತಿಸುವ ಕಾರ್ಯವನ್ನು ಕಂದಾಯ ಇಲಾಖೆ ನಾಳೆಯಿಂದಲೇ ಆರಂಭಿಸಬೇಕು. ರಾಷ್ಟ್ರೀಕೃತ, ಖಾಸಗಿ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಅವಧಿಯಲ್ಲಿ ಪಡೆದಿರುವ ಮೊತ್ತವನ್ನು ಜಿಲ್ಲಾವಾರು ಪತ್ತೆ ಮಾಡಿ, ಒಬ್ಬ ಲಾನುಭವಿ ಎರಡೆರಡು ಬ್ಯಾಂಕ್‌ಗಳಲ್ಲಿ ಬೆಳೆಸಾಲ ಪಡೆದಿರುವ ಪ್ರಕರಣಗಳನ್ನೂ ಗುರುತಿಸುವಂತೆ ಸೂಚನೆ ನೀಡಿದರು.

ಪ್ರಸಕ್ತ ವರ್ಷದಿಂದಲೇ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯಡಿ ಬೆಳೆಸಾಲ ಕೋಶವನ್ನು ಆರಂಭಿಸಿ, ಪ್ರತಿವರ್ಷ ಬೆಳೆಸಾಲ ಪಡೆದವರ ಮಾಹಿತಿಯನ್ನು ಸಂಗ್ರಹಿಸುವಂತೆ ತಿಳಿಸಿದರು. ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಸಂಯೋಜಕ ಹಾಗೂ ಸಿಂಡಿಕೇಟ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್.ಮಲ್ಲಿಕಾರ್ಜುನರಾವ್ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚನೆಯಾಗಲಿದೆ. ಉಪ ಸಮಿತಿಯಲ್ಲಿ ರಾಜ್ಯ ಸರ್ಕಾರದ ಒಬ್ಬ ಪ್ರತಿನಿಧಿ ಮತ್ತು 500 ಕೋಟಿ ರೂ.ಗಳಿಗಿಂತ ಹೆಚ್ಚು ಬೆಳೆಸಾಲ ನೀಡಿರುವ ಬ್ಯಾಂಕ್‌ಗಳ ತಲಾ ಒಬ್ಬ ಪ್ರತಿನಿಧಿ ಸದಸ್ಯರಾಗಿರುತ್ತಾರೆ.

# ಕೃಷಿ ವಲಯಕ್ಕೆ 98,655 ಕೋಟಿ ರೂ.ಗಳು :
ಪ್ರಸಕ್ತ ಹಣಕಾಸು ವರ್ಷದಲ್ಲಿ ವಾರ್ಷಿಕ ಸಾಲ ಯೋಜನೆಯನ್ನು ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಪ್ರಕಟಿಸಿದ್ದು, ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಅಂದರೆ, 98,655 ಕೋಟಿ ರೂ.ಗಳ ಸಾಲ ನೀಡಲು ನಿರ್ಧರಿಸಿದೆ. ಪ್ರಸಕ್ತ ವರ್ಷ ಉತ್ತಮ ಮಳೆ ಆಗಿರುವುದರಿಂದ ಕೃಷಿ ಹಾಗೂ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಕಳೆದ ವರ್ಷಕ್ಕಿಂತ ಶೇ.102ರಷ್ಟು ಹೆಚ್ಚು ಮೊತ್ತದ ಸಾಲ ವಿತರಣೆಗೆ ನಿರ್ಧರಿಸಿವೆ.  ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ 40,874 ಕೋಟಿ ರೂ., ಶೈಕ್ಷಣಿಕ ಸಾಲಕ್ಕೆ 4,604 ಕೋಟಿ ರೂ. ಮತ್ತು ಗೃಹಸಾಲಕ್ಕೆ 16,786 ಕೋಟಿ ರೂ.ಗಳ ಸಾಲ ನೀಡುವ ಗುರಿ ಹೊಂದಲಾಗಿದೆ.
ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಸಂಯೋಜಕ ಎಸ್.ಎಸ್. ಮಲ್ಲಿಕಾರ್ಜುನರಾವ್, ಭಾರತೀಯ ರಿಸರ್ವ್ ಬ್ಯಾಂಕ್‌ನ ವಲಯ ನಿರ್ದೇಶಕ ಪಿ.ಜೆ.ಥಾಮಸ್, ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಸಿ.ಬಿ.ಎಲ್.ನರಸಿಂಹರಾವ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook Comments

Sri Raghav

Admin