ಸಾ.ರಾ.ಮಹೇಶ್‍ ಭೇಟಿಯಾದ ಮುರಳೀಧರ ರಾವ್‌ಗೆ ಬಿಜೆಪಿ ವರಿಷ್ಠರಿಂದ ಕ್ಲಾಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.12- ಆಡಳಿತಾರೂಢ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲಗಳು ಉಂಟಾಗಿರುವ ಸಂದರ್ಭದಲ್ಲೇ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರನ್ನು ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಭೇಟಿಯಾಗಿರುವುದಕ್ಕೆ ಕೇಂದ್ರ ಬಿಜೆಪಿ ವರಿಷ್ಠರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಏನು ಬೆಳವಣಿಗೆ ನಡೆಯುತ್ತದೆ ಎಂಬುದು ನಿಮಗೆ ಗೊತ್ತಿಲ್ಲವೇ? ಆಡಳಿತಾರೂಢ ಪಕ್ಷದ ಸಚಿವರನ್ನು ನೀವು ಭೇಟಿಯಾದರೆ ಕಾರ್ಯಕರ್ತರಿಗೆ ಯಾವ ಸಂದೇಶವನ್ನು ನೀಡಬೇಕು. ಕೂಡಲೇ ಬೆಂಗಳೂರು ಬಿಟ್ಟು ತೆರಳಬೇಕೆಂದು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಸಚಿವ ಸಾರಾ ಮಹೇಶ್ ಅವರನ್ನು ಭೇಟಿಯಾಗಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಯಡಿಯೂರಪ್ಪ ಸೇರಿ ಎಲ್ಲರೂ ಮುರುಳೀಧರ್ ರಾವ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡ್ಯಾಮೇಜ್ ಕಂಟ್ರೋಲ್ ಸಲುವಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಅವರಿಗೆ ಕೂಡಲೇ ಬೆಂಗಳೂರು ಬಿಡುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮುರುಳೀಧರ್ ರಾವ್ ಹೈದರಾಬಾದ್‍ಗೆ ಜೂಟ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಈಶ್ವರಪ್ಪಗೂ ಯಡಿಯೂರಪ್ಪ ಕೆಂಡ ಕಾರಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಹಾಗೂ ಈಶ್ವರಪ್ಪ ಅವರ ಜೊತೆ ಸಾ.ರಾ ಮಹೇಶ್ ನಿನ್ನೆ ರಾತ್ರಿ ಸಭೆ ನಡೆಸಿದ್ದರು. ಸಭೆ ಬಳಿಕ ಸಾ.ರಾ. ಮಹೇಶ್ ಅವರು ಕೆಕೆ ಗೆಸ್ಟ್ ಹೌಸ್ ಬಳಿ ಬಿಜೆಪಿ ನಾಯಕರ ಜೊತೆ ಮಾಧ್ಯಮಗಳಿಗೆ ಸೆರೆ ಸಿಕ್ಕಿದ್ದರು. ಈ ಮೂಲಕ ಮೂವರು ನಾಯಕರ ರಹಸ್ಯ ಭೇಟಿ ಬಯಲಾಗಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin