ಸುಪ್ರೀಂ ತೀರ್ಪಿನ ಬಗ್ಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.17- ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ವಿಧಾನಸಭಾಧ್ಯಕ್ಷರ ಅಧಿಕಾರವನ್ನು ಎತ್ತಿ ಹಿಡಿದಿರುವುದು ಸ್ವಾಗತಾರ್ಹ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ಪೂರ್ಣ ಮಾಹಿತಿ ಇಲ್ಲ. ಹೀಗಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ವಿಧಾನಸಭೆ ಸದಸ್ಯರಾದವರು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂಬುದು ತಮ್ಮ ಅಭಿಪ್ರಾಯ ಎಂದರು.

ಪ್ರಸಕ್ತ ರಾಜಕೀಯ ಬೆಳವಣಿಗೆಗಳು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಕೋರುತ್ತಿರುವುದು ಹಾಗೂ ಪಕ್ಷದ ಮುಂದಿನ ನಿರ್ಧಾರದ ಬಗ್ಗೆ ತಮ್ಮ ಶಾಸಕರು ಹಾಗೂ ನಾಯಕರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸುಪ್ರೀಂ ಮಹತ್ವದ ತೀರ್ಪು :
ಕಾಂಗ್ರೆಸ್ ಹಾಗೂ ಜೆಡಿಎಸ್‍ನ 15 ಮಂದಿ ಶಾಸಕರ ರಾಜೀನಾಮೆಯನ್ನು ವಿಧಾನಸಭೆಯ ಸ್ಪೀಕರ್ ತೀರ್ಮಾನಿಸಬೇಕೆಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್, ನಾಳೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಭಿನ್ನಮತೀಯರಿಗೆ ವಿಪ್ ಹಾಗೂ ಒತ್ತಾಯ ಮಾಡುವಂತಿಲ್ಲ ಎಂಬ ಮಹತ್ವದ ಮಧ್ಯಂತರ ತೀರ್ಪು ನೀಡಿದೆ.

ನ್ಯಾಯಾಲಯದ ಈ ತೀರ್ಪಿನಿಂದಾಗಿ ರಾಜೀನಾಮೆ ನೀಡಿರುವ 16 ಮಂದಿ(ರಾಮಲಿಂಗಾರೆಡ್ಡಿ ಸೇರಿ) ಶಾಸಕರ ಭವಿಷ್ಯವನ್ನು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ತೀರ್ಮಾನಿಸಲಿದ್ದಾರೆ.

ಒಂದು ವೇಳೆ ಸ್ಪೀಕರ್ 16 ಮಂದಿ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದರೆ ಇಲ್ಲವೇ ಸದಸ್ಯತ್ವದಿಂದ ಅವರನ್ನು ಅನರ್ಹಗೊಳಿಸಿದರೆ ಸಮ್ಮಿಶ್ರ ಸರ್ಕಾರ ನಾಳೆ ಸದನದಲ್ಲಿ ಬಹುಮತ ಕಳೆದುಕೊಳ್ಳುವುದು 100ಕ್ಕೆ ನೂರರಷ್ಟು ಖಚಿತ. ಸ್ಪೀಕರ್ ಏನೇ ನಿರ್ಧಾರ ಕೈಗೊಂಡರೂ ಬಿಜೆಪಿ ಅಧಿಕಾರ ರಚನೆಗೆ ದಾರಿ ಬಹುತೇಕ ಸುಗಮವಾಗಿದೆ. ಅಂತಿಮವಾಗಿ ಸ್ಪೀಕರ್ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಎಲ್ಲವೂ ಅವಲಂಬಿತವಾಗಿದೆ.

ತಮ್ಮ ರಾಜೀನಾಮ ಪತ್ರವನ್ನು ತ್ವರಿತವಾಗಿ ಅಂಗೀಕರಿಸುವಂತೆ ಸ್ಪೀಕರ್‍ಗೆ ನಿರ್ದೇಶನ ನೀಡುವಂತೆ 15 ಮಂದಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಎರಡೂ ಕಡೆ ನಿನ್ನೆ ಸುಧೀರ್ಘ ವಾದ-ವಿವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್, ದೀಪಕ್ ಗುಪ್ತ ಹಾಗೂ ಅನಿರುದ್ಧ್ ಬೋಸ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಂದಿಗೆ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿತು.

Facebook Comments

Sri Raghav

Admin