“ಸಿಎಂ ಕುರ್ಚಿ ಉಳಿಸಿಕೊಳ್ಳಲು ಯಾರ ಬಳಿಯೂ ಅಂಗಲಾಚುವುದಿಲ್ಲ” : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.19-ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಯಾರ ಬಳಿಯೂ ಅಂಗಲಾಚುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ ಈ ಸದನವು ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟಸಭೆಯಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂಬ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದುವರೆಸಿದ ಮುಖ್ಯಮಂತ್ರಿಗಳು, ಅಧಿಕಾರ ಶಾಶ್ವತವಲ್ಲ.

ಬರುತ್ತೆ -ಹೋಗುತ್ತೆ. ಅಧಿಕಾರಕ್ಕೆ ಅಂಟಿಕೊಂಡು ಕೂರುವ ಜಾಯಮಾನ ನಮ್ಮದಲ್ಲ ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ನಮ್ಮ ಕುಟುಂಬ ಪಂಚಾಯ್ತಿಯಿಂದ ಪ್ರಧಾನಿ ಹುದ್ದೆವರೆಗೂ ಅಧಿಕಾರವನ್ನು ನೋಡಿದೆ ಎಂದರು.

ಕುರ್ಚಿ ಮುಖ್ಯವಲ್ಲ ಎಂದ ಅವರು, ಬಿಜೆಪಿಯವರನ್ನು ಉದ್ದೇಶಿಸಿ, ಇವತ್ತು ಇರುತ್ತೀರಿ ನಾಳೆ ಹೋಗುತ್ತೀರಿ. ಇಂದಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವ ಯಾವ ಘಟನೆಗಳಿಗೆ ಕಾರಣರಾಗುತ್ತೀರಿ? ನೀವು ಅಧಿಕಾರಕ್ಕೆ ಬಂದು ಎಷ್ಟು ದಿನ ಇರುತ್ತೀರೋ ಕುಳಿತು ನೋಡುತ್ತೇನೆ.

ರಾಜ್ಯಕ್ಕೆ ಸುಭದ್ರ ಸರ್ಕಾರ ಯಾವ ರೀತಿ ಕೊಡುತ್ತೀರೋ ನೋಡುತ್ತೇನೆ. ಸರ್ಕಾರ ರಚಿಸಲು ತುದಿಗಾಲಲ್ಲಿ ನಿಂತು ಹರಸಾಹಸ ಮಾಡುತ್ತಿದ್ದೀರಿ ಎಂದು ಹೇಳಿದರು. ಲೋಕಸಭೆಯಲ್ಲಿ ಇನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹುಮತ ಬಂದಿರಬಹುದು.

1984ರಲ್ಲಿ ಆಗಿನ ಪ್ರಧಾನಿ ರಾಜೀವ್‍ಗಾಂಧಿ ಅವರಿಗೂ 400ಕ್ಕೂ ಹೆಚ್ಚು ಸ್ಥಾನ ಗೆದಿದ್ದರು. ಆದರೆ, ಸಚಿವರೊಬ್ಬರು ಅವರ ಮೇಲೆ ಬೋಫೋರ್ಸ್ ಹಗರಣದ ಆರೋಪ ಹೊರಿಸಿದರು. ಆನಂತರ ಏನಾಯಿತು. ಇವೆಲ್ಲ ತಾತ್ಕಾಲಿಕ.

ರಾಜಕೀಯ ನಿವೃತ್ತಿ ಹೊಂದಬೇಕೆಂಬ ನಿರ್ಧಾರಕ್ಕೆ ಬಂದಿದ್ದೆ. ಕಾಂಗ್ರೆಸ್ ನಾಯಕರು ಬಂದು ಮುಖ್ಯಮಂತ್ರಿಯಾಗಬೇಕೆಂದು ಹೇಳಿದ್ದರು. ನಾನೇನು ಬಂದು ಅವರನ್ನು ಸಿಎಂ ಆಗಬೇಕೆಂದು ಕೇಳಿರಲಿಲ್ಲ ಎಂದರು.

ಬಿಜೆಪಿಯವರನ್ನು ಉದ್ದೇಶಿಸಿ ಒಬ್ಬರಿಗೆ ಐದು ಜನ ಹಾಕಿಕೊಂಡಿದ್ದೀರಿ. ರೇಣುಕಾಚಾರ್ಯ ಅವರು ಬಾಗಿಲ ಬಳಿಯೇ ಕಾವಲು ಕಾಯುತ್ತಿದ್ದಾರೆ ಎಂದು ಛೇಡಿಸಿದರು. ನಾನು ಮುಖ್ಯಮಂತ್ರಿಯಾದಾಗಲೇ ಸಾಂದರ್ಭಿಕ ಶಿಶು ಎಂದು ಹೇಳಿದ್ದೆ. ಅದಕ್ಕೂ ಕುಹುಕವಾಡಿದ್ದÀರು ಎಂದರು.

Facebook Comments

Sri Raghav

Admin