ಡಿಸಿಗಳೊಂದಿಗೆ ಸಿಎಂ ಸಭೆ : ಗೋ ಹತ್ಯೆ ನಿಷೇಧ ಕಟ್ಟುನಿಟ್ಟು ಜಾರಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.20- ಗೋಹತ್ಯೆ ನಿಷೇಧ ಕಾಯ್ದೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಮಾಡುವುದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಕೆ, ಕೋವಿಡ್ ಅಭಿಯಾನ ಯಶಸ್ವಿಗೊಳಿಸುವುದು ಹಾಗೂ ಬಾಲ್ಯವಿವಾಹ ತಡೆಗಟ್ಟಲು ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡು ಆಡಳಿತ ಯಂತ್ರವನ್ನು ಇನ್ನಷ್ಟು ಚುರುಕುಗೊಳಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ನಡೆದ ಜಿಲ್ಲಾಧಿಕಾರಿಗಳು, ಸಿಇಒ ಹಾಗೂ ಪ್ರಾದೇಶಿಕ ಆಯುಕ್ತರ ಜತೆ ನಡೆಸಿದ ಸಭೆಯಲ್ಲಿ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಇನ್ನಷ್ಟು ಪ್ರಯತ್ನ ಮಾಡಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಿದರೆ ಸಹಿಸು ವುದಿಲ್ಲ ಎಂದು ಎಚ್ಚರಿಸಿದರು.

ವಿಧಾನಸಭೆಯಲ್ಲಿ ಬಹುಮತದಿಂದ ಅಂಗೀಕೃತಗೊಂಡಿರುವ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ-2020ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಮಾರ್ಗ ಸೂಚಿಗಳನ್ನು ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಇದಕ್ಕೆ ಪೂರಕವಾಗಿರುವ ಅಗತ್ಯ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕೆಂದು ಸೂಚನೆ ಕೊಟ್ಟರು.

ಕೋವಿಡ್ ತಡೆಗಟ್ಟಲು ಸರ್ಕಾರ ಹಮ್ಮಿಕೊಂಡಿರುವ ಲಸಿಕೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಮೇಲ್‍ಹಂತದ ಅಧಿಕಾರಿಗಳಿಂದ ಹಿಡಿದು ಕೆಳಹಂತದ ಅಧಿಕಾರಿಗಳು ಕೂಡಾ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಇದು ಅತ್ಯಂತ ಮಹತ್ವದ್ದು ಎಂದು ಸಿಎಂ ಸಲಹೆ ಮಾಡಿದರು.

ಕೋವಿಡ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನ ಜೀವನ ಹಂತ ಹಂತವಾಗಿ ಸುಧಾರಣೆಯಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಿಗೆ ಬಲ ತುಂಬಲು ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನವನ್ನು ಇನ್ನಷ್ಟು ಚುರುಕುಗೊಳಿಸಬೇಕು. ಅಕಾರಿಗಳು ಕೂಡಲೇ ಕಾರ್ಯೋನ್ಮುಕರಾಗಬೇಕೆಂದು ಹೇಳಿದರು.

ಜನವರಿ ತಿಂಗಳು ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ಐದಾರು ತಿಂಗಳು ಬೇಸಿಗೆ ಇರುತ್ತದೆ. ಕೂಡಲೇ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಬರದಂತೆ ಎಚ್ಚರವಹಿಸಬೇಕು, ಜಿಲ್ಲಾಕಾರಿಗಳ ಖಜಾನೆಯಲ್ಲಿರುವ ಹಣವನ್ನು ಇದಕ್ಕೆ ಬಳಸಿಕೊಳ್ಳಿ. ಅಗತ್ಯವಾದರೆ ಹೆಚ್ಚುವರಿ ಹಣನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ ಬಂದ ನಂತರ ಅನಿವಾರ್ಯ ಕಾರಣಗಳಿಗಾಗಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಯಿತು. ಆದರೆ, ಈ ಸಂದರ್ಭದಲ್ಲಿ ಕೆಲವು ಕಡೆ ಬಾಲ್ಯ ವಿವಾಹಗಳು ನಡೆದಿರುವ ಬಗ್ಗೆ ಮಾಹಿತಿ ಬಂದಿದೆ.ಇದು ದುರದೃಷ್ಟಕರ ಸಂಗತಿ. ಈ ಬಗ್ಗೆ ಅಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಮುಂಬರುವ ದಿನಗಳಲ್ಲಿ ಬಾಲ್ಯ ವಿವಾಹ ನಡೆಯದಂತೆ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಯಡಿಯೂರಪ್ಪ ನಿರ್ದೇಶನ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕರ ರಾಷ್ಟ್ರೀಯ ಕಾಮಗಾರಿಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವುದು ರಾಜ್ಯ ಸರ್ಕಾರದ ಪ್ರಥಮ ಕರ್ತವ್ಯವಾಗಿದೆ. ಭೂ ಸ್ವಾೀನ ಪ್ರಕ್ರಿಯೆಗೆ ಸಂಬಂಸಿದಂತೆ 14ಸಾವಿರ ಪ್ರಕರಣಗಳು ಜಿಲ್ಲಾಕಾರಿಗಳ ಬಳಿ ಬಾಕಿ ಇರುವುದು ನನ್ನ ಗಮನಕ್ಕೆ ಬಂದಿದೆ. ಕೂಡಲೇ ಇವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು.

ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್‍ಗಡ್ಕರಿಯವರೇ ಇದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಭೂ ಹೆದ್ದಾರಿ ವ್ಯಾಜ್ಯಗಳು ಇತ್ಯರ್ಥವಾಗದ ಕಾರಣ ಅನೇಕ ಕಾಮಗಾರಿಗಳನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆದಷ್ಟು ಶೀಘ್ರ ಈ ಎಲ್ಲಾ ಪ್ರಕರಣಗಳನ್ನು ತತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದರು.

ಜಿಲ್ಲಾಡಳಿತ ಸದಾ ಗ್ರಾಮ ಮುಖವಾಗಿರಬೇಕು. ಗ್ರಾಮ ರಾಜ್ಯದ ಮೂಲಕ ರಾಮರಾಜ್ಯ ಸ್ಥಾಪಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳು ಇತ್ಯರ್ಥವಾದರೆ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಕಾರಿಗಳು ಇನ್ನಷ್ಟು ಕಾರ್ಯೊನ್ಮುಖವಾಗಿರಬೇಕೆಂದು ತಿಳಿಸಿದರು.

ಕಳೆದ 10 ತಿಂಗಳ ಅವಯಲ್ಲಿ ನಮ್ಮ ಸರ್ಕಾರ ಹಲವು ಸಮಸ್ಯೆಗಳನ್ನು ಎದುರಿಸಿದೆ. ಬರ, ಪ್ರವಾಹ ಜತೆಗೆ ಕೋವಿಡ್-19 ನಮಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿತು. ಆದರೂ ಅಕಾರಿಗಳು ದೃತಿಗೆಡದೆ ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಬಾಯಿಸಿದ್ದೀರಿ. ಇದಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಆತ್ಮನಿರ್ಭರ್ ಯೋಜನೆಯನ್ನು ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಿದ್ದಪಡಿಸಿರುವ ಕಾರ್ಯಸೂಚಿಗಳಂತೆ ಜಿಲ್ಲಾಕಾರಿಗಳಿಂದ ಗ್ರಾಮ ಲೆಕ್ಕಿಗರ ವರೆಗೆ ಎಲ್ಲಾ ಅಕಾರಿಗಳು ನಿಗದಿತ ದಿನದಂದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕೆಂದು ತಾಕೀತು ಮಾಡಿದರು.

ಕುಡಿಯುವ ನೀರು, ಸ್ವಚ್ಚತೆ, ಜಮೀನಿಗೆ ಸಂಬಂಸಿದ ತೊಡಕುಗಳು, ಪಿಂಚಣಿ ಸೇರಿದಂತೆ ಮತ್ತಿತರ ಸಮಸ್ಯೆಗಳನ್ನು ಆದಷ್ಟು ಶೀಘ್ರ ಪರಿಹರಿಸಿ ಜನರು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕೆಂದು ಹೇಳಿದರು.
ಶಾಲಾ-ಕಾಲೇಜುಗಳು ಪುನಃ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರ ಸುರಕ್ಷತೆಯನ್ನು ಖಾತರಿ ಪಡಿಸಬೇಕು.

ಪ್ರತಿಯೊಂದು ಶಾಲೆಗಳಲ್ಲೂ ಸ್ವಚ್ಚತೆ ಕಾಪಾಡಲು ಕ್ರಮ ಜರುಗಿಸಬೇಕು. ಎಸ್ಸಿ-ಎಸ್ಟಿ ಹಾಗೂ ಬಿಸಿಎಂ ವಿದ್ಯಾರ್ಥಿ ನಿಲಯಗಳಲ್ಲೂ ಮಕ್ಕಳ ಆರೋಗ್ಯ ಹಾಗೂ ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಬೇಕು. ಉತ್ತಮ ಗುಣಮಟದ ಆಹಾರವನ್ನು ನೀಡಬೇಕೆಂದು ಸೂಚಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಪುನಃ ಅವರನ್ನು ಶಾಲೆಗಳನ್ನು ಕರೆತರುವ ಜವಾಬ್ದಾರಿ ನಿಮ್ಮದು ಎಂದು ಸಿಎಂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ಸರ್ಕಾರ ಘೋಷಿಸಿರುವ ಪರಿಹಾರ ವಿತರಣೆ ಸಮರ್ಪಕವಾಗಿ ನಡೆಯಬೇಕು.

ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ವಿಳಂಬವಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಇನ್‍ಪುಟ್ ಸಬ್ಸಿಡಿ ವಿತರಣೆಯಲ್ಲೂ ವಿಳಂಬವಾಗದಂತೆ ಬೆಳೆ ಹಾನಿ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ತ್ವರಿತವಾಗಿ ದಾಖಲಿಸಬೇಕೆಂದು ನಿರ್ದೇಶನ ನೀಡಿದರು.

ವಿಧಾನಸಭಾ ಕ್ಷೇತ್ರವಾರು ಅನುದಾನ ಬಿಡುಗಡೆ ಹಾಗೂ ವೆಚ್ಚದ ವಿವರಗಳನ್ನು ದಾಖಲಿಸುವ ಕೆಲಸ ಹಾಗೂ ಅದರ ವಿವರಗಳ ನಿರ್ವಹಣೆ ಬಗ್ಗೆ ಜಿಲ್ಲಾಕಾರಿಗಳು ಗಮನ ಹರಿಸಬೇಕು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅವಲೋಕನ ತಂತ್ರಾಂಶವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಗಾಗ್ಗೆ ಜಿಲ್ಲೆಗಳಿಗೆ ಭೇಟಿ ಕೊಟ್ಟು ಪ್ರಗತಿ ಪರಿಶೀಲನೆ ನಡೆಸಿ ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಬೇಕೆಂದು ಸಿಎಂ ಹೇಳಿದರು.
ಸಭೆಯಲ್ಲಿ ಸಚಿವರು, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ರವಿಕುಮಾರ್, ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಪ್ರಧಾನ ಮುಖ್ಯಕಾರ್ಯದರ್ಶಿಗಳು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ಎಲ್ಲಾ ಜಿಲ್ಲೆಗಳ ಜಿಲ್ಲಾಕಾರಿಗಳು, ಸಿಇಒಗಳು, ಪ್ರಾದೇಶಿಕ ಆಯುಕ್ತರು ಪಾಲ್ಗೊಂಡಿದ್ದರು.

Facebook Comments

Sri Raghav

Admin