3ನೇ ಹಂತದ ಅನ್‍ಲಾಕ್ : ನಾಳೆ ಉಸ್ತುವಾರಿ ಸಚಿವರ ಜತೆ ಸಿಎಂ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.1-ರಾಜ್ಯದಲ್ಲಿ ಮೂರನೆ ಹಂತದ ಅನ್‍ಲಾಕ್ ಘೋಷಣೆ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ಉಸ್ತುವಾರಿ ಸಚಿವರ ಸಭೆ ನಡೆಸಲಿದ್ದಾರೆ. ನಾಳೆ ಸಂಜೆ 5.30ಕ್ಕೆ ಕಾವೇರಿ ನಿವಾಸದಲ್ಲಿ ಹಿರಿಯ ಸಚಿವರೊಂದಿಗೆ ಸಭೆ ನಡೆಸಿ ಮೂರನೇ ಹಂತದ ಅನ್‍ಲಾಕ್ ಸಡಿಲಿಕೆ ಮಾಡುವ ಸಂಬಂಧ ಮಾತುಕತೆ ನಡೆಸಲಿದ್ದಾರೆ.

ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು, ಈಗಾಗಲೇ ಬಹುತೇಕ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ನೀಡಿದೆ. ಶಾಪಿಂಗ್ ಮಾಲ್‍ಗಳು, ಸಿನಿಮಾ ಥಿಯೇಟರ್‍ಗಳು ಸೇರಿದಂತೆ ಮುಚ್ಚಲ್ಪಟ್ಟಿರುವ ಚಟುವಟಿಕೆಗಳಿಗೆ ಅನುಮತಿ ನೀಡುವ ಸಂಭವವಿದೆ.

ಜು.5ರಂದು ಅನ್ವಯವಾಗುವಂತೆ ಸರ್ಕಾರ ಮೂರನೇ ಹಂತದ ಅನ್‍ಲಾಕ್ ಘೋಷಣೆ ಮಾಡಲಿದ್ದು, ಈ ಬಾರಿ ವಾಣಿಜ್ಯ ಚಟುವಟಿಕೆಗಳ ಸಮಯಾವಕಾಶವನ್ನು ವಿಸ್ತರಣೆ ಮಾಡಲಿದೆ. ಪ್ರಸ್ತುತ ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೂ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಮಯವನ್ನು ರಾತ್ರಿ 7 ಗಂಟೆವರೆಗೂ ವಿಸ್ತರಣೆ ಮಾಡುವ ಸಂಭವವಿದೆ.

ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಶೇ.50ರಷ್ಟು ಗ್ರಾಹಕರು ಕುಳಿತು ಮದ್ಯ ಸೇವನೆ, ಹೋಟೆಲ್‍ಗಳ ಸಮಯ ವಿಸ್ತರಣೆ ಸೇರಿದಂತೆ ಮತ್ತಿತರ ಚಟುವಟಿಕೆಗಳಿಗೆ ಸರ್ಕಾರ ಹಸಿರು ನಿಶಾನೆ ತೋರಲಿದೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಸಿನಿಮಾ ಮಂದಿರಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಈಗಾಗಲೇ ಈಜುಕೊಳಗಳನ್ನು ಸಹ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸೋಮವಾರದಿಂದ ಬಹುತೇಕ ರಾಜ್ಯದಲ್ಲಿ ಎಲ್ಲಾ ಹಂತದ ಚಟುವಟಿಕೆಗಳು ಪುನರಾರಂಭಗೊಳ್ಳವ ಲಕ್ಷಣಗಳು ಗೋಚರಿಸಿವೆ.

Facebook Comments