ಬೆಂಗಳೂರು ಕೋಮುಗಲಭೆ : ಸಂಜೆ ಸಿಎಂ ಮೀಟಿಂಗ್, ಉನ್ನತ ಮಟ್ಟದ ತನಿಖೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.11- ಕಳೆದ ರಾತ್ರಿ ಡಿ.ಜೆ.ಹಳ್ಳಿ ಹಾಗೂ ಕೆ.ಜೆ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಕೋಮುಗಲಭೆ ಸಂಬಂಧ ಸಂಘಟನೆಯ ಕೈವಾಡ ಕುರಿತಂತೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಲು ಮುಂದಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಜೆ ಗೃಹ ಸಚಿವ ಆರ್.ಅಶೋಕ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್, ಗೃಹ ಇಲಾಖೆ ಕಾರ್ಯದರ್ಶಿ ರೂಪಾ ಮೌದ್ಗಲ್ ಸೇರಿದಂತೆ ಹಿರಿಯ ಅಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಿದೆ.

ಹೀಗಾಗಿ ಯಾವುದಾದರೂ ಸರ್ಕಾರದ ಅಕೃತ ಸಂಸ್ಥೆಯಿಂದ ತನಿಖೆ ನಡೆಸಲು ತೀರ್ಮಾನಿಸಲಾಗಿದ್ದು, ಸಂಜೆ ಅಕೃತವಾಗಿ ಆದೇಶ ಹೊರಬೀಳಲಿದೆ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಉಡುಪಿ ಪ್ರವಾಸದಲ್ಲಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈಗಾಗಲೇ ನಗರಕ್ಕೆ ಹಿಂದಿರುಗುತ್ತಿದ್ದು, ಘಟನೆ ಸಂಬಂಧ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಮೂಲಗಳ ಪ್ರಕಾರ ಸರ್ಕಾರ ಈ ಪ್ರಕರಣವನ್ನು ಸಿಐಡಿ ಇಲ್ಲವೇ ವಿಶೇಷ ತನಿಖಾ ತಂಡ(ಎಸ್‍ಐಟಿ)ಕ್ಕೆ ವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಹಿರಿಯ ಐಪಿಎಸ್ ಅಕಾರಿಯೊಬ್ಬರನ್ನು ತನಿಖೆಗೆ ತನಿಖಾಕಾರಿಯನ್ನಾಗಿ ನೇಮಿಸಲಿದ್ದು, ಒಂದು ತಿಂಗಳೊಳಗೆ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಲಿದೆ ಎಂದು ಸಿಎಂ ಮೂಲಗಳು ತಿಳಿಸಿವೆ.

ಸದ್ಯ ಹೋಂಕ್ವಾರಂಟೈನ್‍ನಲ್ಲಿರುವ ಯಡಿಯೂರಪ್ಪ ಅವರು ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಕಾರಿಗಳಿಂದ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ.

ಡಿಜಿ, ನಗರ ಪೊಲೀಸ್ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ, ಗುಪ್ತಚರ ವಿಭಾಗದ ಮುಖ್ಯಸ್ಥರು ಸೇರಿದಂತೆ ಕೆಲವು ಹಿರಿಯ ಅಕಾರಿಗಳಿಂದ ಘಟನೆ ಕುರಿತಂತೆ ಮಾಹಿತಿ ಕಲೆ ಹಾಕಿದ್ದಾರೆ.

ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.  ಮುಂದೆ ಕೋಮುಗಲಭೆಯಲ್ಲಿ ಭಾಗಿಯಾದವರಿಗೆ ಈ ಶಿಕ್ಷೆ ಪಾಠವಾಗಬೇಕೆಂಬ ತೀರ್ಮಾನಕ್ಕೂ ಸರ್ಕಾರ ಬಂದಿದೆ ಎಂದು ಹೇಳಲಾಗಿದೆ.

Facebook Comments

Sri Raghav

Admin