ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಮೀಟಿಂಗ್, ಸರಳ ದಸರಾಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.11- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದರು.

ಮುಖ್ಯಮಂತ್ರಿಯವರ ಅಕೃತ ನಿವಾಸ ಕಾವೇರಿಯಲ್ಲಿ ನಡೆದ ಈ ಸಭೆಗೆ  ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‍ಭಾಸ್ಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಜಾವಿದ್ ಅಖ್ತರ್, ಕಾರ್ಯದರ್ಶಿ ಪಂಕಜ್‍ಕುಮಾರ್ ಪಾಂಡೆ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ರಾಜ್ಯದಲ್ಲಿ ಈ ಬಾರಿ ಕೋವಿಡ್-19 ಹಿನ್ನೆಲೆ ಇರುವ ಕಾರಣ ಈಗಾಗಲೇ ಸರ್ಕಾರ ನಾಡಹಬ್ಬವನ್ನು ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಸರಳವಾಗಿ ಆಚರಿಸಲು ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ದಸರಾ ಸಂದರ್ಭದಲ್ಲಿ ಮೈಸೂರಿಗೆ ಹೆಚ್ಚು ಜನರು ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕು. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ಈಗಿನಿಂದಲೇ ಹೆಚ್ಚು ಜಾಗೃತಿ ವಹಿಸಬೇಕೆಂದು ಸಿಎಂ ಸೂಚನೆ ಕೊಟ್ಟರು.

ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಹಾಗೂ ದೇಶ-ವಿದೇಶಗಳಿಂದ ಪ್ರವಾಸಿಗರು ಬಂದರೆ ಅವರ ಮೇಲೆ ವಿಶೇಷ ನಿಗಾ ವಹಿಸುವುದು ಸೇರಿದಂತೆ ಅಧಿಕಾರಿಗಳಿಗೆ ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ದಸರಾ ಆಚರಣೆಗೆ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಆರ್ಥಿಕ ನೆರವು ನೀಡಲಿದೆ. ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಮಾತ್ರ ಸೀಮಿತವಾಗಿ ಕಾರ್ಯಕ್ರಮ ಆಯೋಜಿಸಬೇಕು. ಅರಮನೆ ಮತ್ತು ನಗರದ ಪ್ರಮುಖ ಬೀದಿಗಳಿಗೆ ದೀಪಾಲಂಕಾರ ಮಾಡಬೇಕಾದ ಅಗತ್ಯವಿಲ್ಲ ಎಂದು ಸಿಎಂ ಸೂಚಿಸಿದ್ದಾಗಿ ತಿಳಿದುಬಂದಿದೆ.

ಸಂಪ್ರದಾಯಕ್ಕೆ ಅಡ್ಡಿಯಾಗದಂತೆ ಕಾರ್ಯಕ್ರಮ ಆಯೋಜಿಸಬೇಕು. ಏನೇ ಸಾಂಸ್ಕøತಿಕ ಕಾರ್ಯಕ್ರಮಗಳಿದ್ದರೂ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಬೇಕು. ಆದಷ್ಟು ಹೆಚ್ಚು ಜನರು ಒಂದು ಕಡೆ ಗುಂಪು ಗೂಡದಂತೆ ವಿಶೇಷ ಮುತುವರ್ಜಿ ವಹಿಸಿ ಎಂದು ತಾಕೀತು ಮಾಡಿದರು.

ಸರ್ಕಾರ ನೀಡಿರುವ ಎಲ್ಲ ನಿಯಮಗಳನ್ನೂ ಜಿಲ್ಲಾಡಳಿತ ಹಾಗೂ ಪ್ರಮುಖ ಇಲಾಖೆಗಳು ಪಾಲನೆ ಮಾಡಲಿವೆ. ಮುಂದಿನ ವಾರದಿಂದ ಮೈಸೂರು ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ಇನ್ನಷ್ಟು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ.

Facebook Comments

Sri Raghav

Admin