3 ಜಿಲ್ಲೆಗಳಿಗೆ ಸೀಮಿತವಾದ ಅಣ್ಣತಮ್ಮರ ಬಜೆಟ್ ಎಂದ ಬಿಎಸ್ವೈಗೆ ಸಿಎಂ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

yadiyurappa-Angry--01

ಬೆಂಗಳೂರು. ಜು. 05 ” ಬಜೆಟ್ ಕೇವಲ ಮಂಡ್ಯ,ರಾಮನಗರ ಹಾಸನಕ್ಕೆ ಮಾತ್ರ ಸೀಮಿತ. ಇದು ಅಣ್ಣತಮ್ಮಂದಿರ ಬಜೆಟ್ ಎಂದು ಟೀಕಿಸಿರುವ ಬಿಜೆಪಿ ನಾಯಕರಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ನಾನು ಉತ್ತರ ಕರ್ನಾಟಕ ಭಾಗವನ್ನ ಕಡೆಗಣಿಸಿಲ್ಲ. ಕಾಮಾಲೇ ಕಣ್ಣಿಗೆ ಕಾಣೊದೆಲ್ಲಾ ಹಳದೀನೇ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಮಂಡನೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲ ಹಳದಿ ಅನ್ನೊ ಮಾತು ಅವರಿಗೆ ಅನ್ವಯವಾಗುತ್ತದೆ ಎಂದು ಹೇಳಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ಘೋಷಿಸಿದ ಎಲ್ಲಾ ಬಜೆಟ್ ಗಳನ್ನು ಮುಂದುವರೆದಿದ್ದು, ಅದರ ಬಗ್ಗೆ ಯಾರು ಕೂಡ ತಪ್ಪು ಬಾವಿಸ ಬಾರದು ಅಂತ ಹೇಳಿದರು. ಹಾಸನ, ಮಂಡ್ಯ, ರಾಮನಗರ ಬಜೆಟ್ ಅಂತ ಕರೆದ ಬಿಜೆಪಿ ಪಕ್ಷದವರಿಗೆ ಟಾಂಗ್ ನೀಡಿದ ಹೆಚ್.ಡಿ ಕುಮಾರಸ್ವಾಮಿ ಈ ಬಜೆಟ್ ನಲ್ಲಿ ಏನೂ ಇಲ್ಲ ಅಂತ ಅಂದುಕೊಳ್ಳುವುದು ಬೇಡ ಬೇರೆ ರೀತಿಯಲ್ಲಿ ಮಾತನಾಡುವುದು ಬೇಡ ಅಂತ ಹೇಳಿದರು.

ಮೈತ್ರಿ ಬಜೆಟ್ ಬಗ್ಗೆ ಹಲವರಿಂದ ವ್ಯಾಖ್ಯಾನ ಬಂದಿದೆ. ಅಶೋಕ ಚಕ್ರವರ್ತಿಗಳು ಇದು ಹಾಸನಕ್ಕೆ ಸೀಮಿತ ಎಂದು ಹೇಳುತ್ತಿದ್ದಾರೆ. ಅವರು ಐದು ವರ್ಷ ಏನು ಮಾಡಿದರು. ನಾನು ಹಾಸನ ಮತ್ತು ಮಂಡ್ಯಕ್ಕೆ 200 ಕೋಟಿ ಕೊಟ್ಟಿರಬಹುದು. ಹಾಸನದಲ್ಲಿರುವುದು ಬಿಜೆಪಿ ಶಾಸಕರು. ಹಾಸನ ಹೊರ ವಲಯದ ರಸ್ತೆಗೆ 30 ಕೋಟಿ ನೀಡಿದ್ದೇನೆ. ಬಿಜೆಪಿಯವರು ಬೇಡವೆಂದರೇ ಅದನ್ನ ವಾಪಸ್ ಪಡೆಯುತ್ತೇನೆ ಎಂದು ಲೇವಡಿ ಮಾಡಿದರು.

ನಾನು ಪರಮೇಶ್ವರ್ ನೋಟ್ ಪ್ರಿಂಟ್ ಮಾಡುವ ಮಿಷನ್ ಇಟ್ಟಿಲ್ಲ. ಇದು ಕರ್ನಾಟಕದ ಸಮಗ್ರ ಬಜೆಟ್. ಸಾಲಮನ್ನಾ ಮಾಡಿ ಅಂದಾಗ ಬಿಎಸ್ ಯಡಿಯೂರಪ್ಪ ನನ್ನ ಬಳಿ ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದಿದ್ದರು. ಈಗ ನಾವು ಅದನ್ನೇ ಕೇಳುತ್ತೇವೆ. ನಾನು ಪರಮೇಶ್ವರ್ ನೋಟ್ ಪ್ರಿಂಟ್ ಮಾಡುವ ಮಿಷನ್ ಇಟ್ಟಿಲ್ಲ ಎಂದು ಕುಟುಕಿದರು. ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ನ ಯೋಜನೆಗಳನ್ನ ಮುಂದುವರೆಸುತ್ತೇವೆ. ಅಲ್ಪಸಂಖ್ಯಾತರು, ಕರಾವಳಿ ಭಾಗಕ್ಕೂ ಸಿದ್ದರಾಮಯ್ಯ ನೀಡಿರುವ ಯೋಜನೆಗಳು ಮುಂದುವರೆಯಲಿವೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಾಲಮನ್ನಾಗೆ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿದ್ದೆ. ಆದರೆ ಒಂದು ನಯಾ ಪೈಸೆನೂ ಕೂಡ ಕೊಡಲಿಲ್ಲ. ಬಿಜೆಪಿಯವರು ನನ್ನ ಬಗ್ಗೆ ಮಾತನಾಡಬೇಕಾ ಎಂದು ಹರಿಹಾಯ್ದರು.ಕಳೆದ ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದು, ಅವರ ಎಲ್ಲಾ ಕಾರ್ಯಕ್ರಮಗಳು ಮುಂದುವರಿಯಲಿದೆ. ಅವರು ಮಂಡಿಸಿದ್ದ ಬಜೆಟ್ ನಾನು ಇಂದು ಓದಿಲ್ಲ. ಅದನ್ನ ಓದಿದ್ರೆ ಇವತ್ತು ಸಂಜೆ ಆರು ಗಂಟೆಯಾಗುತ್ತಿತ್ತು. ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಸೇದಿದಂತೆ ಅನೇಕ ಕಾರ್ಯಕ್ರಮಗಳು ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದ ಕುಮಾರಸ್ವಾಮಿ ಹೇಳಿದರು.

ಹಾಸನ – ಮಂಡ್ಯ ಭಾಗಕ್ಕೆ ಹೆಚ್ಚು ಯೋಜನೆ ಇದೆ ಎಂದು ಟೀಕಿಸುತಿದ್ದಾರೆ ಆದರೆ ಹಾಸನ -ಮಂಡ್ಯಕ್ಕೆ 150 ರಿಂದ 200 ಕೋಟಿ ರೂ. ಅನುದಾನ ಇರಬಹುದು ಅಷ್ಟೆ. ಹೆಚ್ಚಾಗಿ ಏನು ಹಣ ಕೊಟ್ಟಿಲ್ಲ. ಕರವಾಳಿ, ಉತ್ತರ ಕರ್ನಾಟಕಕ್ಕೆ ಕಳೆದ ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ಸಾಕಷ್ಟು ಯೋಜನೆ ಘೋಷಣೆ ಮಾಡಿದ್ದಾರೆ. ಈ ಎಲ್ಲ ಯೋಜನೆಗಳನ್ನ ಮುಂದುವರೆಸಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ತಿಳಿಸಿದರು.

ರೈತರ ಸಾಲಮನ್ನಾ ಮಾಡೋದಕ್ಕೆ ಕೇಂದ್ರ ಸರ್ಕಾರ ಒಂದು ಬಿಡಿಗಾಸು ನೀಡಿಲ್ಲ. ಉತ್ತರ ಕರ್ನಾಟಕಕ್ಕೆ ಹೆಚ್ಚು ಆದ್ಯತೆ ನಾವು ನೀಡಿದ್ದೇವೆ. ಬೆಳಗಾವಿ, ಬೀದರ್, ಬಾಗಲಕೋಟೆ, ವಿಜಯಪುರಕ್ಕೆ ಎಷ್ಟು ಕೊಟ್ಟಿದ್ದೇವೆ ಎಂದು ಸದನದಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳಿದರು. ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿಡಿಮಿಡಿಗೊಂಡಿದ್ದು, ಆರ್ಥಿಕ ಶಿಸ್ತು ಕಾಪಾಡಿಕೊಂಡು ಬಜೆಟ್ ಮಂಡನೆ ಮಾಡಿದ್ದೇನೆ, ಬಿಜೆಪಿ ನಾಯಕರ ಮೆಚ್ಚುಗೆ ನನಗೆ ಬೇಕಾಗಿಲ್ಲ, ರಾಜ್ಯದ ಜನತೆಯ ಸರ್ಟಿಫಿಕೇಟ್ ನನಗೆ ಮುಖ್ಯ. ಕಾಂಗ್ರೆಸ್ ಬೆಂಬಲದಿಂದಲೇ ನಾನು ಉತ್ತಮ ಬಜೆಟ್ ಮಂಡನೆ ಮಾಡಿದ್ದೇನೆ. ರೈತರ ಸಾಲಮನ್ನಾ ವಿಚಾರದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಈಗಿನ ಬಜೆಟ್ ಹಾಗು ಕಳೆದ ಕಾಂಗ್ರೆಸ್ ಸರ್ಕಾರದ ಬಜೆಟ್ ನ ಕಾರ್ಯಕ್ರಮಗಳು ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ರಿಂಗ್ ರಸ್ತೆ ನಿರ್ಮಾಣ ಯೋಜನೆ ರೂಪಿಸಿದೇವೆ.2006 ರಲ್ಲೇ ಈ ಕುರಿತಂತೆ ತೀರ್ಮಾನಿಸಿದ್ದೇವೆ. ಆದರೆ ಬಿಜೆಪಿ ನಾಯಕರು ಈ ರಿಂಗ್ ರಸ್ತೆ ಯೋಜನೆಯನ್ನೇ ವಿರೋಧಿಸುತ್ತಿದ್ದಾರೆ.ಹೆಬ್ಬಾಳ ಫ್ಲೈ ಓವರ್ ನಿರ್ಮಾಣಕ್ಕೆ 1000 ಕೋಟಿ, ಬೆಂಗಳೂರು ನಗರಕ್ಕೆ 11,000 ಕೋಟಿ ರೂ. ಮೀಸಲಿಟ್ಟಿದ್ದೇವೆ. ಇದನ್ನು ಅರ್ಥ ಮಾಡಿಕೊಳ್ಳದ ಅಶೋಕ್ ತಾವು ನನ್ನ ಬಜೆಟ್ ಯೋಜನೆ ಬಗ್ಗೆ ಟೀಕಿಸಿದ್ದಾರೆ ಎಂದರು.

ಪೆಟ್ರೋಲ್ ದರ ಹೆಚ್ಚಳಕ್ಕೆ ಸ್ಪಷ್ಟನೆ
ಪೆಟ್ರೋಲ್ ಡೀಸೆಲ್ ದರಗಳು ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ. ಬಿಜೆಪಿ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ನಮಗಿಂತ ಹೆಚ್ಚು ದರ ಇದೆ. ಪ್ರತಿಪಕ್ಷ ಬಿಜೆಪಿ ಅದರ ಕುರಿತಂತೆ ಮಾತನಾಡುವುದಿಲ್ಲ. ಮೋದಿ ಸರ್ಕಾರಕ್ಕೆ ರಾಜ್ಯಕ್ಕೆ ನೆರವಾಗುವಂತೆ ಯಾವ ಹಣಕಾಸು ನೆರವು ನೀಡುವ ಯೋಗ್ಯತೆ ಇಲ್ಲ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಈ ಸಂದರ್ಭ ಡಿಸಿಎಂ ಪರಮೇಶ್ವರ್ ಉಪಸ್ಥಿತರಿದ್ದರು.

Facebook Comments

Sri Raghav

Admin