ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಸಿಎಂ ಭೇಟಿ, ಕುಟುಂಬದವರಿಗೆ ಸಾಂತ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಜೂ.18- ರಾಜ್ಯದ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಸಮಾರೋಪಾದಿಯಲ್ಲಿ ಕೆಲಸ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.  ಸಾಲದ ಬಾಧೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ ಗ್ರಾಮದ ರೈತ ಸುರೇಶ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸುರೇಶ್ ಅವರ ಪತ್ನಿ ಜಯಶೀಲ, ಪುತ್ರ ಚಂದ್ರು, ಪುತ್ರಿ ಸುವರ್ಣ ಸೇರಿದಂತೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಣೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಗಾಲದ ಆರಂಭದಲ್ಲೇ ರಾಜ್ಯದ ಬಹುತೇಕ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಹಾಕಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಆತ್ಮಹತ್ಯೆಗೂ ಮುನ್ನ ಸುರೇಶ್ ಮಾಡಿದ್ದ ವಿಡಿಯೋದಲ್ಲಿ ಸಂತೆಬಾಚಹಳ್ಳಿ ಹೋಬಳಿಯ ಎಲ್ಲ ಕೆರೆಗಳಿಗೆ ನೀರು ತುಂಬಿಸಿ ರೈತರನ್ನು ಕಾಪಾಡಬೇಕು, ಅಲ್ಲದೆ ತಮ್ಮ ಅಂತ್ಯಸಂಸ್ಕಾರಕ್ಕೆ ಮುಖ್ಯಮಂತ್ರಿ ಬರಬೇಕೆಂದು ಕೋರಿದ್ದರು.

ಈ ವಿಡಿಯೋ ವೈರಲ್ ಆಗಿರುವ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳೀಯ ಶಾಸಕ ನಾರಾಯಣಗೌಡ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದು ಇಂದು ಬೆಳಗ್ಗೆ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿರುವುದಾಗಿ ತಿಳಿಸಿದರು.

ಮೃತ ರೈತ ಸುರೇಶ್ ಮನವಿ ಮಾಡಿದಂತೆ ಕೇವಲ ಕೆ.ಆರ್.ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಕೆರೆಗಳಿಗೆ ಮಾತ್ರ ನೀರು ತುಂಬಿಸುವುದಲ್ಲ. ರಾಜ್ಯದ ಬಹುತೇಕ ಕೆರೆಗಳಿಗೂ ನೀರು ತುಂಬಿಸಿ ಅಂತರ್ಜಲ ವೃದ್ಧಿಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು.

# ಕೆರೆ ತುಂಬಿಸಲು 213 ಕೋಟಿ ರೂ:
ಕೆ.ಆರ್.ಪೇಟೆ ತಾಲ್ಲೂಕಿನ 40ರಿಂದ 50 ಕೆರೆಗಳಿಗೆ ಮಾತ್ರವಲ್ಲದೆ ನಾಗಮಂಗಲ, ಚನ್ನರಾಯಪಟ್ಟದ ಕೆರೆಗಳಿಗೂ ನೀರು ತುಂಬಿಸಲು 213 ಕೋಟಿ ರೂ.ಗಳ ಯೋಜನೆ ಹಾಕಲಾಗಿದೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸರ್ಕಾರ ರೈತರಪರವಾಗಿದೆ ಎಂದರು.

ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಬದುಕುವ ಛಲವನ್ನು ಬೆಳೆಸಿಕೊಳ್ಳಬೇಕು. ಆತ್ಮಹತ್ಯೆಯೇ ಕೊನೆಯಲ್ಲ. ಆತ್ಮಹತ್ಯೆಗೆ ಶರಣಾಗಿ ತಮ್ಮ ಕುಟುಂಬವನ್ನು ಹಾಳು ಮಾಡಿಕೊಳ್ಳಬೇಡಿ. ರಾಜ್ಯ ಸರ್ಕಾರ ರೈತರ ಬೆಳೆ ಸಾಲಮನ್ನಾ ಮಾಡಿರುವುದು ಶಾಶ್ವತ ಪರಿಹಾರವಲ್ಲ ಎಂಬುದು ಗೊತ್ತಿದೆ. ರೈತರು ಸಾಲಗಾರರಾಗದೆ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಇದಕ್ಕೆ ಪೂರಕವಾದ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ನೀರನ್ನು ಬಳಸಲು ಅನುಮತಿ ಪಡೆಯಬೇಕಾದ ಅಗತ್ಯವಿದೆ. ನ್ಯಾಯಾಲಯ ಹಾಗೂ ನ್ಯಾಯಾಧೀಕರಣದ ಆದೇಶಗಳನ್ನು ಪಾಲಿಸಬೇಕಾಗಿದೆ. ಆದೇಶದಂತೆ ತಮಿಳುನಾಡಿಗೆ ನೀರು ಬಿಡಬೇಕಿದೆ. ನೀರಿನ ವಿಚಾರದಲ್ಲಿ ನಾವು ರಾಜಕೀಯ ಮಾಡದಿದ್ದರೂ ಅವರು ಮಾಡುತ್ತಾರೆ ಎಂದರು.

ಹೊಸ ಕಾಯ್ದೆ: ನೆರೆಯ ಕೇರಳ ರಾಜ್ಯದಲ್ಲಿ ಖಾಸಗಿ ಸಾಲ ತೀರಿಸಲಾಗದವರ ರಕ್ಷಣೆಗೆ ಕಾನೂನು ತಂದಿದೆ. ಅದೇ ರೀತಿ ರಾಜ್ಯದಲ್ಲೂ ಖಾಸಗಿ ಸಾಲ ತೀರಿಸಲಾಗದವರ ರಕ್ಷಣೆಗೆ ಕಾನೂನು ತರುವ ಉದ್ದೇಶವಿದೆ. ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ವಿಧೇಯಕವನ್ನು ತರಲಾಗುವುದು. ಈಗಾಗಲೇ ಕೇರಳದಿಂದ ಮಾಹಿತಿಯನ್ನು ಪಡೆಯಲಾಗಿದೆ.

ಸಾಲ ತೀರಿಸಲಾಗದ ಸಾಲಗಾರರು ಯಾರೇ ಇದ್ದರೂ ಅವರಿಗೆ ರಕ್ಷಣೆ ನೀಡಲು ಅವಕಾಶವಾಗುವಂತಹ ಕಾನೂನು ಜಾರಿಗೆ ತರುವ ಚಿಂತನೆ ಇದೆ. ಇದಕ್ಕೆ ಆಯೋಗವೊಂದನ್ನು ರಚನೆ ಮಾಡಲಾಗುವುದು.

ಸಾಲ ತೀರಿಸಲಾಗದವರು ಈ ಆಯೋಗಕ್ಕೆ ಅರ್ಜಿ ಸಲ್ಲಿಸಿದರೆ ಅವರಿಗೆ ರಕ್ಷಣೆ ದೊರೆಯುತ್ತದೆ. ಈ ಸಂಬಂಧದ ಕಾನೂನು ಜಾರಿಗೆ ತರುವ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ನಾರಾಯಣಗೌಡ, ಜಿಲ್ಲಾಧಿಕಾರಿ ಮಂಜುಶ್ರೀ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin