ಸಿಎಂ ಬಿಎಸ್‍ವೈ ಕೈ ಹಿಡಿಯದ ಕಾವೇರಿ, ಅಮಾವಾಸ್ಯೆ ಬಳಿಕ ಧವಳಗಿರಿಗೆ ಶಿಫ್ಟ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.8- ಈ ಹಿಂದಿನ ಮುಖ್ಯಮಂತ್ರಿಗಳಿಗೆ ಅದೃಷ್ಟದ ನಿವಾಸವೆಂದೇ ಜನಜನಿತವಾಗಿದ್ದ ಕಾವೇರಿ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪಾಲಿಗೆ ಅದೃಷ್ಟಹೀನವಾಗಿದೆಯೇ? ಹೌದುನ್ನುತ್ತಿವೆ ಯಡಿಯೂರಪ್ಪ ಅವರ ಆಪ್ತ ಮೂಲಗಳು. ಕಾವೇರಿ ನಿವಾಸದಲ್ಲಿ ವಾಸ್ತು ಸರಿಯಲ್ಲ ಎಂಬ ಒಂದೇ ಒಂದು ಕಾರಣಕ್ಕಾಗಿಯೇ ಈಗಿರುವ ಮನೆಯನ್ನು ಖಾಲಿ ಮಾಡಲು ತೀರ್ಮಾನಿಸಿದ್ದಾರೆ.

ಹೀಗಾಗಿಯೇ ಬಿ.ಎಸ್.ವೈ ಅವರು ಇದೇ 17ರ ನಂತರ ಕಾವೇರಿ ಮನೆಯನ್ನು ಖಾಲಿ ಮಾಡಿ, ಮತ್ತೆ ತಮ್ಮ ಧವಳಗಿರಿ ನಿವಾಸಕ್ಕೆ ತೆರಳಲು ತೀರ್ಮಾನಿಸಿದ್ದಾರೆ.  ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಸುಮಾರು ಏಳು ತಿಂಗಳ ಕಾಲ ಡಾಲರ್ಸ್ ಕಾಲೋನಿಯ ಧವಳಗಿರಿ ಖಾಸಗಿ ನಿವಾಸದಲ್ಲಿಯೇ ಇದ್ದರು. ಬಳಿಕ ಫೆಬ್ರವರಿಯಲ್ಲಿ ಗೃಹ ಕಚೇರಿ ಕೃಷ್ಣಾ ಪಕ್ಕದ ಕಾವೇರಿಗೆ ವಾಸ್ತವ್ಯ ಬದಲಿಸಿದ್ದರು.

ಭಾರೀ ನಿರೀಕ್ಷೆ ಇಟ್ಟುಕೊಂಡು ಕಾವೇರಿಗೆ ಆಗಮಿಸಿದ್ದ ಯಡಿಯೂರಪ್ಪನವರಿಗೆ ಕಳೆದ ಮಾರ್ಚ್ ತಿಂಗಳಿನಲ್ಲಿ ಕೋವಿಡ್- 19 ಬಂದ ಬಳಿಕ ಹಲವಾರು ಸಮಸ್ಯೆಗಳು ಸರಣಿ ರೂಪದಲ್ಲಿ ಬರುತ್ತಲೇ ಇವೆ. ಯಡಿಯೂರಪ್ಪನವರಿಗೆ ಕೋವಿಡ್ ಸೋಂಕು ತಗುಲಿದ್ದು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು, ಆಡಳಿತಾತ್ಮಕ ಸವಾಲುಗಳು ಎದುರಾಗಿದ್ದು ಇವೆಲ್ಲವೂ ಬಿಎಸ್‍ಐ ಅವರನ್ನು ಕೊಂಚ ಅಧೀರರನ್ನಾಗಿಸಿದೆ. ಆದ್ದರಿಂದ ವಾಸ್ತು ತಜ್ಞರ ಸಲಹೆಯಂತೆ ವಾಸ್ತವ್ಯ ಬದಲಿಸಲು ಸಿಎಂ ನಿರ್ಧರಿಸಿದ್ದಾರೆ.

ದೇವರು, ಜಾತಕ , ವಾಸ್ತು ಎಲ್ಲವನ್ನು ಅತಿಯಾಗಿ ನಂಬುವ ಯಡಿಯೂರಪ್ಪ ತಮ್ಮ ಕುಟುಂಬದ ಜ್ಯೋತಿಷಿಗಳ ಸಲಹೆ ಮೇರೆಗೆ ಕಾವೇರಿ ನಿವಾಸದಿಂದ ನಿರ್ಗಮಿಸಿ ಸದ್ಯಕ್ಕೆ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಈ ಸಂಬಂಧ ಜ್ಯೋತಿಷಿಗಳು ಕೂಡ ಕಾವೇರಿ ನಿವಾಸವನ್ನು ಖಾಲಿ ಮಾಡುವಂತೆ ಸೂಚಿಸಿದ್ದು, ವಾಸ್ತುದೋಷ ತಮಗೆ ಸರಿ ಹೊಂದುತ್ತಿಲ್ಲ ಎಂಬ ಕಾರಣವನ್ನು ನೀಡಿದ್ದಾರೆ.

ಸರ್ಕಾರಕ್ಕೆ ಎದುರಾಗಿರುವ ಕೆಲವು ಆಪತ್ತುಗಳಿಗೆ ವಾಸ್ತುದೋಷ ಕೂಡ ಕಾರಣ. ಈ ತಿಂಗಳ 17ರ ನಂತರ ಮಹಾಲಯ ಅಮಾವಾಸ್ಯೆ ಕಳೆದುಕೊಂಡು ಧವಳಗಿರಿ ನಿವಾಸದಲ್ಲೇ ಇರುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.  ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದು ತಿಂಗಳುಗಳೇ ಕಳೆದರೂ ಅಧಿಕೃತವಾಗಿ ಕಾವೇರಿ ನಿವಾಸಕ್ಕೆ ಸ್ಥಳಾಂತರವಾಗಿರಲಿಲ್ಲ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸ ಧವಳಗಿರಿಯಲ್ಲೇ ವಾಸ್ತವ್ಯ ಹೂಡಿದ್ದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗಿನಿಂದಲೂ ಇದೇ ಕಾವೇರಿ ನಿವಾಸದಲ್ಲಿದ್ದರು. ಬಳಿಕ ಮೈತ್ರಿ ಸರ್ಕಾರದ ವೇಳೆಯಲ್ಲೂ ಸಹ ಇದೇ ಕಾವೇರಿ ನಿವಾಸದಲ್ಲಿದ್ದರು. ಇದೀಗ ಯಡಿಯೂರಪ್ಪನವರು ಕಾವೇರಿ ನಿವಾಸ ಬಯಸಿದ್ದರಿಂದ ಸಿದ್ದರಾಮಯ್ಯನವರು ಈ ಮನೆಯನ್ನ ಖಾಲಿ ಮಾಡಿದ್ದಾರೆ. ಇನ್ನು ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ ಒಂದು ರೀತಿಯಲ್ಲಿ ಬಿಎಸ್‍ವೈಗೆ ಲಕ್ಕಿ ಮನೆ. ಈ ಲಕ್ಕಿ ಮನೆಯಲ್ಲಿ ಉತ್ತಮವಾದ ಪರಿಸರ ವಾತಾವರಣ ಇದೆ.

ಅಲ್ಲದೆ, ವಾಕಿಂಗ್ ಪಾಥ್, ಹುಲ್ಲು ಹಾಸು, ಬೃಹತ್ ಮರಗಳ ನೆರಳು ಈ ರೇಸ್ ಕೋರ್ಸ್ ನಿವಾಸದಲ್ಲಿ ಇದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಈ ಮನೆ ಇಷ್ಟ. ಮುಖ್ಯವಾಗಿ ಈ ಹಿಂದೆಯೂ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಅದೇ ನಿವಾಸದಲ್ಲಿದ್ದರು. ಅಲ್ಲದೆ, 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿಯೇ ಇದ್ದಾಗ ಬಿಎಸ್‍ವೈ ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದರು.

2008ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಇದೇ ಮನೆಯಲ್ಲಿ ಇದ್ದರು. ಈ ಮನೆಗೆ ಬಂದ ಮೇಲೆ ಸಿಎಂ ಸ್ಥಾನ ಸಿಕ್ಕಿತು ಎಂಬ ನಂಬಿಕೆ ಯಡಿಯೂರಪ್ಪ ಅವರಿಗೆ ಇದೆ.

# ಅನುಗ್ರಹಕ್ಕೂ ಇಂಥದ್ದೇ ಕಾಟವಿತ್ತು:
ಮಾಜಿ ಮುಖ್ಯಮಂತ್ರಿ ಹಾಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಪ್ರಕರಣವೊಂದರಲ್ಲಿ ಹೆಚ್.ವೈ. ಮೇಟಿಯಿಂದ ಹಿಡಿದು ಹೆಚ್.ಡಿ.ದೇವೇಗೌಡ, ಡಿ.ವಿ. ಸದಾನಂದ ಗೌಡ, ಎಸ್.ಆರ್. ಪಾಟೀಲ್ ಅವರು ಅನುಗ್ರಹದಲ್ಲಿ ವಾಸವಿದ್ದ ಕಾರಣ ಬೇಗನೆ ತಮ್ಮ ಅಧಿಕಾರ ಕಳೆದುಕೊಂಡಿದ್ದರು. ದೇವೇಗೌಡರು ಪ್ರಧಾನಿಯಾದರೂ ಬೆಂಗಳೂರಿಗೆ ಬಂದಾಗ ಅನುಗ್ರಹದಲ್ಲೇ ಉಳಿಯುತ್ತಿದ್ದರು. ಅಲ್ಲಿ ಉಳಿಯುತ್ತಿರುವಾಗಲೇ ಅವರು 11 ತಿಂಗಳಿಗೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

ಅನುಗ್ರಹವನ್ನು ಅಧಿಕೃತ ವಾಸ ಮಾಡಿಕೊಂಡಿದ್ದ ಡಿ.ವಿ. ಸದಾನಂದ ಗೌಡರು ಸಹ ಒಂದು ವರ್ಷವು ಅಧಿಕಾರವನ್ನು ಅನುಭವಿಸದೆ ರಾಜೀನಾಮೆ ನೀಡಿ ಜಗದೀಶ್ ಶಟ್ಟರ್ ಅವರಿಗೆ ಅಧಿಕಾರ ಹಸ್ತಾಂತರಿಸಬೇಕಾಯಿತು.

ಎಸ್.ಎಂ.ಕೃಷ್ಣ, ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಹೆಚ್.ಡಿ.ಕುಮಾರ ಸ್ವಾಮಿ ಅನುಗೃಹದಲ್ಲಿ ವಾಸಿಸದೆ ಅಲ್ಲಿಂದ 500 ಮೀಟರ್ ದೂರದಲ್ಲಿರುವ ಕಾವೇರಿ ಅಥವಾ ಕೃಷ್ಣವನ್ನು ತಮ್ಮ ಅಧಿಕೃತ ನಿವಾಸ ಮಾಡಿಕೊಂಡಿದ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿಕೊಂಡ ನಂತರ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಕಾವೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರವೂ ಅವರು ಅದೇ ಮನೆಯಲ್ಲಿ ವಾಸವಿದ್ದರು.

Facebook Comments