ಶೀಘ್ರವೇ ಸಚಿವ ಸಂಪುಟ ರಚನೆ : ಮುಖ್ಯಮಂತ್ರಿ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪೇಟೆ, ಜು. 27- ಶೀಘ್ರವೇ ಸಚಿವ ಸಂಪುಟ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ತಮ್ಮ ಹುಟ್ಟೂರು ಬೂಕನಕೆರೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಾನೊಬ್ಬ ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಹೈಕಮಾಂಡ್ ಒಪ್ಪಿಗೆ ಪಡೆದು ಶೀಘ್ರವೇ ಸಚಿವ ಸಂಪುಟ ರಚನೆ ಮಾಡುವುದಾಗಿ ಹೇಳಿದರು.

ನಾನು ಹುಟ್ಟಿದ ಊರು ಬೂಕನಕೆರೆಗೆ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಬಂದಿರುವುದು ನನಗೆ ಅತ್ಯಂತ ಸಂತಸ ತಂದಿದೆ. ನನ್ನ ಊರಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ ಇದನ್ನು ಮಾದರಿ ಗ್ರಾಮವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ನಾಗಾಲೋಟದಲ್ಲಿ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ತಮ್ಮ ಗ್ರಾಮಕ್ಕೆ ಆಗಮಿಸಿದ ತಕ್ಷಣ ಮನೆದೇವರು ಗವಿಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗ್ರಾಮದೇವತೆ ಗೋಗಾಲಮ್ಮ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮಹಿಳೆಯರು ಆರತಿ ಎತ್ತಿ ತಮ್ಮ ಊರಿನ ಸುಪುತ್ರನನ್ನು ಬರಮಾಡಿಕೊಂಡರು. ಊರಿನ ಹಿರಿಯರು, ಪಕ್ಷದ ಮುಖಂಡರು, ಅಭಿಮಾನಿಗಳು ಯಡಿಯೂರಪ್ಪ ಅವರಿಗೆ ಶುಭ ಹಾರೈಸಿದರು.ಬಿಜೆಪಿ ಕಾರ್ಯಕರ್ತರು ಹಾಗೂ ಯಡಿಯೂರಪ್ಪ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ತಿನಿಸಿ ಸಂಭ್ರಮಿಸಿದರು. ನಂತರ ಬೂಕನಕೆರೆಯಿಂದ ಯಡಿಯೂರಪ್ಪ, ತಮ್ಮ ಪುತ್ರ ರಾಘವೇಂದ್ರ ಮತ್ತಿತರರೊಂದಿಗೆ ಮೇಲುಕೋಟೆಗೆ ತೆರಳಿದರು.

Facebook Comments

Sri Raghav

Admin