ದೋಸ್ತಿಗಳಿಗೆ ಮತ್ತೊಂದು ಬಿಗ್ ಶಾಕ್ ಕೊಡಲು ಮುಂದಾದ ಸಿಎಂ ಯಡಿಯೂರಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.20-ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ನೀರಾವರಿ ಇಲಾಖೆಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗೊಳಪಡಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಈ ಮೂಲಕ ದೋಸ್ತಿಗೆ ಮತ್ತೊಂದು ಮರ್ಮಾಘಾತ ನೀಡಲು ಮುಖ್ಯಮಂತ್ರಿ ಮುಂದಾಗಿದ್ದು, ಇಂದು ಸಂಜೆಯೊಳಗೆ ಸರ್ಕಾರ ತನಿಖೆಗೆ ಅಧಿಕೃತ ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ.

ಹೀಗಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಧ್ಯಾಹ್ನದಿಂದ ವಿವಿಧ ನೀರಾವರಿ ನಿಗಮಗಳ ಅಧಿಕಾರಿಗಳ ಜೊತೆ ಸರಣಿ ಸಭೆಯನ್ನು ನಡೆಸುವರು. ಗೃಹ ಕಚೇರಿ ಕೃಷ್ಣಾದಲ್ಲಿ ಕೃಷ್ಣ ಭಾಗ್ಯ ಜಲನಿಗಮ, ಕಾವೇರಿ ನೀರಾವರಿ ನಿಗಮ, ವಿಶ್ವೇಶ್ವರಯ್ಯ ನಿಗಮ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಇಂಜಿನಿಯರ್‍ಗಳು ಸೇರಿದಂತೆ ಎಲ್ಲ ಹಂತದ ಇಲಾಖೆ ಅಧಿಕಾರಿಗಳು ಭಾಗವಹಿಸಬೇಕೆಂದು ಸೂಚಿಸಲಾಗಿದೆ.

ಮುಖ್ಯವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ವಿವಿಧ ನೀರಾವರಿ ಯೋಜನೆಗಳಿಗೆ ನಿಯಮ ಮೀರಿ ಟೆಂಡರ್ ಕರೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
2018-19ರಲ್ಲಿ 8 ಸಾವಿರ ಕೋಟಿ ಇದ್ದ ಬಜೆಟ್ ಗಾತ್ರವನ್ನು 23 ಸಾವಿರ ಕೋಟಿಗೆ ಏರಿಕೆ ಮಾಡಲಾಗಿತ್ತು. ನಿಯಮಗಳ ಪ್ರಕಾರ ಕಾಮಗಾರಿಗಳನ್ನು ನೀಡಬೇಕಾದರೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಇಂಜಿನಿಯರ್‍ಗಳ ಸಭೆ ಕರೆದು ಒಪ್ಪಿಗೆ ಪಡೆಯಬೇಕು. ನಂತರವೇ ಕಾಮಗಾರಿಗೆ ಅನುಮೋದನೆ ನೀಡಬೇಕೆಂಬ ನಿಯಮವಿದೆ.

ಆದರೆ ದೋಸ್ತಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ವಿಶೇಷವಾಗಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚಿನ ಅನುದಾನವನ್ನು ನೀಡಲಾಗಿತ್ತು. ಇದರಲ್ಲಿ ಭಾರೀ ಪ್ರಮಾಣದ ಗೋಲ್‍ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಹೀಗಾಗಿ ಸಭೆ ಕರೆದಿರುವ ಯಡಿಯೂರಪ್ಪ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಇಂಜಿನಿಯರ್‍ಗಳಿಂದ ಹಿಂದಿನ ಸರ್ಕಾರದಲ್ಲಿ ಎಷ್ಟು ಅನುದಾನ ಬಿಡುಗಡೆಯಾಗಿತ್ತು? ಇದರಲ್ಲಿ ಖರ್ಚಾಗಿರುವ ಹಣವೆಷ್ಟು? ಕಾಮಗಾರಿ ಪೂರ್ಣಗೊಂಡಿದೆಯೇ? ಒಂದು ವೇಳೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಕಾಣಗಳೇನು ಎಂಬಿತ್ಯಾದಿಗಳ ಬಗ್ಗೆ ಮಾಹಿತಿ ಪಡೆಯುವರು.

ಈಗಾಗಲೇ ಮೂರು ನಿಗಮಗಳ ಮೇಲೆ ನಿಯಮ ಮೀರಿ ಟೆಂಡರ್ ಕರೆದಿರುವ ಆರೋಪ ಕೇಳಿ ಬಂದಿದ್ದು, ಕರ್ನಾಟಕ ಭಾಗ್ಯ ಜಲ ನಿಗಮ – 13 ಕಾಮಗಾರಿಗೆ 8,225 ಕೋಟಿ, ಕಾವೇರಿ ನೀರಾವರಿ ನಿಗಮದ 110 ಕಾಮಗಾರಿಗಳಿಗೆ 13,807 ಕೋಟಿ, ಕರ್ನಾಟಕ ನೀರಾವರಿ ನಿಗಮದ 25 ಕಾಮಗಾರಿಗಳಿಗೆ 1,933 ಕೋಟಿ ಪಡೆದಿರುವ ಆರೋಪವಿದೆ.

ನಿಯಮ ಮೀರಿ ಟೆಂಡರ್ ಕರೆದು ಕಾಮಗಾರಿಗೆ ಒಪ್ಪಿಗೆ ಪಡೆದಿರುವ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಈ ನಿಗಮಗಳ ಎಂಡಿಗಳ ಜೊತೆ ಚರ್ಚಿಸಿ ಸಿಎಂ ಮಾಹಿತಿ ಕಲೆ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನೀರಾವರಿ ಸಚಿವರಾಗಿದ್ದ ಎಂ.ಬಿ .ಪಾಟೀಲ್ ಅವಧಿಯಲ್ಲಿ ಆಗಿರುವ ನೀರಾವರಿ ಟೆಂಡರ್ ಕಾಮಗಾರಿ ಹಾಗೂ ಮೈತ್ರಿ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವಧಿಯಲ್ಲಿ ಆಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ.

ಈ ನಿಗಮಗಳಿಗೆ ಹಂಚಿಕೆಯಾಗಿರುವ ಹಣ ಹಾಗೂ ದುರ್ಬಳಕೆಯಾಗಿರುವ ಮಾಹಿತಿ ಪಡೆಯಲಿರುವ ಯಡಿಯೂರಪ್ಪ, ನೀರಾವರಿ ಇಲಾಖೆಯಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಹಣ ಬಳಕೆಯಾಗಿದೆ, ಯಾವ ಯಾವ ನೀರಾವರಿ ಯೋಜನೆಗಳಿಗೆ ಹಣ ಬಳಸಲಾಗಿದೆ, ಎಲ್ಲಿ ಹಣ ಪೋಲಾಗಿದೆ.

ಎಲ್ಲಿ ಅಕ್ರಮ ನಡೆದಿದೆ ಹಾಗೂ ನೀರಾವರಿ ಯೋಜನೆಗಳಿಗೆ ನಿಯಮ ಮೀರಿ ಟೆಂಡರ್ ಕರೆದಿರುವ ಬಗ್ಗೆ ಅಧಿಕಾರಿಗಳಿಂದ ಇಂದು ಸಂಪೂರ್ಣ ಮಾಹಿತಿ ಪಡೆದು ಹಗರಣ ಕುರಿತು ತನಿಖೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿಸಿವೆ.

Facebook Comments

Sri Raghav

Admin